ರಾಷ್ಟ್ರೀಯ

ಯಾಕುಬ್ ಮೆಮೊನ್‌ಗೆ ನೇಣು: ತಾರಕಕ್ಕೇರಿದ ರಾಜಕಾರಣಿಗಳ ವಾಗ್ವಾದ

Pinterest LinkedIn Tumblr

yakoob

ಹೊಸದಿಲ್ಲಿ: ಅತ್ತ 1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟದಲ್ಲಿ ಪಾಲ್ಗೊಂಡಿದ್ದ ಯಾಕುಬ್‌ ಮೆಮೊನ್‌ ಗಲ್ಲಿಗೇರಿದರೆ, ಇತ್ತ ರಾಜಕಾರಣಿಗಳ ವಾಗ್ವಾದ ತಾರಕಕ್ಕೇರಿದೆ.

ಪ್ರತಿಪಕ್ಷಗಳ ಕೆಲ ನಾಯಕರು ಮರಣ ದಂಡನೆ ವಿರುದ್ಧ ಕಿಡಿ ಕಾರುತ್ತಿದ್ದರೆ, ಕೇಂದ್ರದಲ್ಲಿರುವ ಎನ್‌ಡಿಎ ಸರಕಾರದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ಧಾರೆ. ಉಗ್ರರಿಗೆ ಇದೇ ತಕ್ಕ ಶಿಕ್ಷೆ ಎನ್ನುವುದನ್ನು ಈ ಶಿಕ್ಷೆ ಎತ್ತಿ ತೋರಿಸಿದೆ ಎಂದು ಪ್ರತಿಪಾದಿಸುತ್ತಿದ್ದಾರೆ.

ಭಯೋತ್ಪಾದನೆ ಪ್ರಕರಣದಲ್ಲಿ ಜೈಲಲ್ಲಿರುವ ಉಳಿದವರಿಗೂ ಅದೇ ಥರದ ಶಿಕ್ಷೆ ನೀಡಿ ಸರಕಾರ, ನ್ಯಾಯಾಂಗ ಪಾರದರ್ಶಕತೆ ಪ್ರದರ್ಶಿಸಲಿ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಗುರುವಾರ ಸವಾಲು ಹಾಕಿದ್ದಾರೆ.

ನಮ್ಮ ಸರಕಾರ ಒಬ್ಬ ಮನುಷ್ಯನನ್ನು ನೇಣುಗೇರಿಸಿದ ಸುದ್ದಿ ಕೇಳಿ ಬೇಸರವಾಗಿದೆ. ಇದು ಸರಕಾರಿ ಪ್ರಾಯೋಜಿತ ಕೊಲೆಗಳು ಕೂಡ ನಮ್ಮನ್ನು ಕೊಲೆಗಡುಕರನ್ನಾಗಿ ಕುಗ್ಗಿಸುತ್ತದೆ ಎಂದು ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಟ್ವೀಟ್‌ ಮಾಡಿದ್ದಾರೆ.

ಮರಣದಂಡನೆ ಶಿಕ್ಷೆಗೆ ಭಾರತದ ವಿದಾಯ ಹೇಳಬೇಕು. ಹಾಗಂತ ನಮಗೆ ಸ್ಫೋಟದ ಸಂತ್ರಸ್ತರ ಕುಟುಂಬಗಳ ಬಗ್ಗೆ ಕನಿಕರ ಇಲ್ಲ ಎಂದಲ್ಲ. ಆದರೆ ಒಬ್ಬನ ಜೀವ ತೆಗೆದುಕೊಳ್ಳುವುದರಿಂದ ಸತ್ತವರ ಪ್ರಾಣಗಳು ವಾಪಸ್‌ ಆಗಲ್ಲವಲ್ಲ ಎಂದು ಸಿಪಿಐನ ನಾಯಕ ಡಿ.ರಾಜಾ ಹೇಳಿದ್ದಾರೆ.

ಅಖಿಲ ಭಾರತ ಮಜ್ಲಿಸ್-ಇ ಇತ್ತೆಹದುಲ್‌ ಮುಸ್ಲಿಮೀನ್ ಪಕ್ಷದ ನಾಯಕ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್‌ ಒವೈಸಿಯಂತೂ ಮತ್ತೆ ಕಿಡಿ ಕಾರಿದ್ದು, ಮೊದಲು ಬಾಬು ಭಜರಂಗಿ, ಮಾಯಾ ಕೊಡ್ನಾನಿ, ಕರ್ನಲ್ ಪುರೋಹಿತ್ ಮತ್ತು ಸ್ವಾಮಿ ಅಸೀಮಾನಂದ ಅವರಿಗೆ ಮರಣ ದಂಡನೆ ವಿಧಿಸಿ ಎಂದು ಗುಡುಗಿದ್ದಾರೆ.

ಬಾಬು ಭಜರಂಗಿ, ಮಾಯಾ ಕೊಡ್ನಾನಿ ಗುಜರಾತ್‌ ಗಲಭೆಯಲ್ಲಿ ಭಾಗವಹಿಸಿದ ಆರೋಪ ಹೊತ್ತಿದ್ದರೆ, ಕರ್ನಲ್ ಪುರೋಹಿತ್ ಮತ್ತು ಸ್ವಾಮಿ ಅಸೀಮಾನಂದ ಮಾಲೆಗಾವ್‌ ಸ್ಫೋಟದಲ್ಲಿ ಪಾಲ್ಗೊಂಡ ಆರೋಪ ಹೊತ್ತಿದ್ದಾರೆ.

ಇತ್ತ ತರೂರ್‌, ದಿಗ್ವಿಜಯ್‌ಸಿಂಗ್‌ ಹೇಳಿಕೆಗಳನ್ನು ಬಿಜೆಪಿ ಖಂಡಿಸಿದ್ದರೆ, ಕಾಂಗ್ರೆಸ್‌ ಕೂಡ ಅಂತರ ಕಾಯ್ದುಕೊಳ್ಳಲು ಯತ್ನಿಸಿದೆ. ಅವರಿಬ್ಬರ ಹೇಳಿಕೆಗಳು ವೈಯಕ್ತಿಕ ಎಂದು ಕಾಂಗ್ರೆಸ್‌ ವಕ್ತಾಋ ರಣ್‌ದೀಪ್‌ ಸುರ್ಜೆವಾಲ ಹೇಳಿದ್ದಾರೆ.

Write A Comment