ರಾಷ್ಟ್ರೀಯ

ಹೆಚ್‌ಐವಿ ಪೀಡಿತ ಅನಾಥ ಮಕ್ಕಳ ರಕ್ಷಕ ಕಲಾಂ

Pinterest LinkedIn Tumblr

apj_kalamಕೇಂದ್ರಾಪುರ (ಒಡಿಶಾ):  ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನಿಧನಕ್ಕೆ ದೇಶಕ್ಕೇ ದೇಶವೇ ಕಂಬನಿಗೆರೆಯುವಾಗ ಒಡಿಶಾದ ಹಳ್ಳಿಯೊಂದರ ಅನಾಥ ಯುವತಿಯೊಬ್ಬಳು ಕಲಾಂ ಅವರ ಸಹಾಯವನ್ನು ನೆನೆದು ಅವರಿಗೆ ಧನ್ಯವಾದವನ್ನು ಅರ್ಪಿಸುತ್ತಿದ್ದಾಳೆ.

10 ವರ್ಷದ ಹಿಂದೆ ಕಲಾಂ ಅವರು ಆಕೆಯ ತಮ್ಮ ಮತ್ತು ತಂಗಿಗೆ ಮಾಡಿದ ಉಪಕಾರವನ್ನು ಆಕೆ ಸ್ಮರಿಸಿಕೊಂಡಿರುವುದು ಹೀಗೆ:

ನಮ್ಮ ಪಾಲಿಗೆ ಅವರೊಬ್ಬ ರಕ್ಷಕ. ನನ್ನ ತಮ್ಮ ಮತ್ತು ತಂಗಿ ಹೆಚ್‌ಐವಿ ಪೀಡಿತರಾಗಿದ್ದರು. ಅವರಿಗೆ ಸರಿಯಾದ ಸಮಯದಲ್ಲಿ ಸಹಾಯ ನೀಡಿ ಅವರು ಬದುಕುಳಿಯುವಂತೆ ಮಾಡಿದ್ದು ಕಲಾಂ ಅಂಕಲ್.

ಜೂನ್ 2005. ನಮ್ಮೂರಿನ ಪೋಸ್ಟ್ ಮ್ಯಾನ್ ರಾಷ್ಟ್ರಪತಿಯವರ ಸಹಿ ಇರುವ ಪತ್ರವೊಂದನ್ನು ನನಗೆ ತಂದುಕೊಟ್ಟಿದ್ದ. ಅದರಲ್ಲಿ ರು. 20,000 ದ ಡ್ರಾಫ್ಟ್  ಇತ್ತು. ಅದು ನನ್ನ ಕೈಗೆ ಸಿಕ್ಕಿದಾಗ ಅದೆಷ್ಟು ಖುಷಿಯಾಗಿತ್ತು ಗೊತ್ತಾ..

ನನಗಾಗ 11 ವರ್ಷ. ನನ್ನ ತಮ್ಮ ಮತ್ತು ತಂಗಿಗೆ 6 ಮತ್ತು 4 ವರುಷ. ನನ್ನ ಅಪ್ಪ ಅಮ್ಮ ತೀರಿ ಹೋಗಿದ್ದು, ನನ್ನ ತಮ್ಮ ಮತ್ತು ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲೆ ಇತ್ತು. ನಮ್ಮ ರಾಷ್ಟ್ರಪತಿಯವರು ಜನರ ರಾಷ್ಟ್ರಪತಿ, ಅವರಿಗೆ ಮಕ್ಕಳೆಂದರೆ ಇಷ್ಟ ಎಂಬುದಾಗಿ ನಾನು ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿದ್ದೆ. ಆದ್ದರಿಂದಲೇ ಅವರಿಗೆ ನನ್ನ ಕಷ್ಟದ ಬಗ್ಗೆ ಪತ್ರ ಬರೆದಿದ್ದೆ ಅಂತಾಳೆ ಕೇಂದ್ರಾಪುರ ಜಿಲ್ಲೆಯ ಒಲಾವರ್ ಗ್ರಾಮದ ಆ ಯುವತಿ.

ನನಗೆ ಸಹಾಯ ಮಾಡಲು ಕಲಾಂ ಅವರು ನಮ್ಮ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದ್ದು, ಆಮೇಲೆ ಎಲ್ಲ ಕಡೆಯಿಂದ ನಮಗೆ ಸಹಾಯ ಹರಿದು ಬಂತು.

ನಮ್ಮ ಮುಖ್ಯಮಂತ್ರಿಯವರ ಕಚೇರಿಯಿಂದ ರು. 20,000 ಸಹಾಯಧನ ಸಿಕ್ಕಿತು. ಆಮೇಲೆ ನಮ್ಮೂರಿನ ಆರೋಗ್ಯ ಅಧಿಕಾರಿಗಳು ಕೂಡಾ ನನ್ನ ತಮ್ಮ ಮತ್ತು ತಂಗಿಯತ್ತ ಗಮನ ಹರಿಸಲು ತೊಡಗಿದರು. ಇದಕ್ಕೆಲ್ಲಾ ಕಾರಣವಾಗಿದ್ದು ಅಬ್ದುಲ್ ಕಲಾಂ.

ಕಳೆದ ಒಂದು ದಶಕದಿಂದ ಏಡ್ಸ್ ಜತೆ ಹೋರಾಡಿ ನನ್ನ ಒಡಹುಟ್ಟಿದವರು ಬದುಕನ್ನು ಗೆದ್ದಿದ್ದಾರೆ. ಕಲಾಂ ಅವರ ಸಹಾಯ ಇಲ್ಲದೇ ಇರುತ್ತಿದ್ದರೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ನನ್ನ ಒಡಹುಟ್ಟಿದವರಿಗೆ ಹೊಸ ಬದುಕು ಸಿಕ್ಕಿದ್ದು ಕಲಾಂ ಅವರಿಂದ. ಕಲಾಂ ಅಂಕಲ್‌ನ ಅಗಲುವಿಕೆಯಿಂದ ತುಂಬಾ ನೋವಾಗಿದೆ. ನಾನು ನನ್ನ ಕುಟುಂಬದ ಸದಸ್ಯರಲ್ಲೊಬ್ಬರನ್ನು ಕಳೆದುಕೊಂಡಿದ್ದೇನೆ ಎನ್ನುವ ನೋವು ಬಹಳ ಕಾಡುತ್ತಿದೆ.

Write A Comment