ರಾಷ್ಟ್ರೀಯ

ಗಲ್ಲು ಶಿಕ್ಷೆಗೆ ತಡೆ ಕೋರಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತ; ನಾಳೆ ಯಾಕೂಬ್ ಗೆ ಗಲ್ಲು ಬಹುತೇಕ ಖಚಿತ

Pinterest LinkedIn Tumblr

yakoob

ಹೊಸದಿಲ್ಲಿ: ಮುಂಬಯಿ ಸರಣಿ ಸ್ಫೋಟ ದೋಷಿ ಯಾಕೂಬ್ ಮೆಮೊನ್ ಗಲ್ಲು ಶಿಕ್ಷೆಗೆ ತಡೆ ಕೋರಿ ಸುಪ್ರಿಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದ್ದು, ಗುರುವಾರ ಆತನಿಗೆ ಮರಣದಂಡನೆ ಬಹುತೇಕ ಖಚಿತವಾಗಿದೆ.

ಗಲ್ಲಿಗೆ ತಡೆ ಕೋರಿ ಯಾಕೂಬ್‌ ಸಲ್ಲಿಸಿರುವ ಅರ್ಜಿ ಸಂಬಂಧ ನ್ಯಾಯಮೂರ್ತಿಗಳಾದ ಎ.ಆರ್.ದವೆ ಹಾಗೂ ಕುರಿಯನ್‌ ಜೋಸೆಫ್‌ ಅವರಿದ್ದ ಪೀಠ ಮಂಗಳವಾರ ಭಿನ್ನ ನಿಲುವು ತಾಳಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ತ್ರಿಸದಸ್ಯ ಪೀಠಕ್ಕೆ ಮುಖ್ಯ ನ್ಯಾಯಮೂರ್ತಿ ಎಚ್‌.ದತ್ತು ಅವರು ವರ್ಗಾಯಿಸಿದ್ದರು.

ಯಾಕೂಬ್‌ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ನ್ಯಾ.ದವೆ ಅಭಿಪ್ರಾಯಪಟ್ಟರೆ, ಕ್ಯೂರೇಟಿವ್‌ ಅರ್ಜಿಯ ಮರುಪರಿಶೀಲನೆ ಅಗತ್ಯವಿದೆ ಎಂದು ನ್ಯಾ.ಕುರಿಯನ್‌ ಅಭಿಪ್ರಾಯಪಟ್ಟಿದ್ದರು. ನಂತರ ಯಾಕೂಬ್‌ ಅರ್ಜಿ ವಿಚಾರಣೆಗೆ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ, ಪ್ರಫುಲ್ಲಾ ಸಿ. ಪಂತ್ ಹಾಗೂ ಅಮಿತಾವ್ ರಾಯ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ರಚನೆಯಾಗಿತ್ತು.

ಯಾಕೂಬ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಕುರಿತು ಕಾನೂನು ಪ್ರಕ್ರಿಯೆಯನ್ನು ಸರಿಯಾಗಿಯೇ ಅನುಸರಿಸಲಾಗಿದೆ, ಹೀಗಾಗಿ ಮರಣ ದಂಡನೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಈಗ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಗಲ್ಲು ಶಿಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಂತೆ ಯಾಕೂಬ್‌ ಮೆಮೊನ್‌ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಗೆ ಮತ್ತೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.

Write A Comment