ರಾಷ್ಟ್ರೀಯ

ಕಲಾಂ ‘ಭಾರತದ ರತ್ನ’: ಸಂಸತ್ತಿನಲ್ಲಿ ಬಣ್ಣನೆ

Pinterest LinkedIn Tumblr

abdul-kalam28ನವದೆಹಲಿ: ದೇಶದ ಬಾಹ್ಯಾಕಾಶ ಮತ್ತು ಕ್ಷಿಪಣಿ ಕಾರ್ಯಕ್ರಮದ ಹಿಂದಿನ ಶಕ್ತಿಯಾಗಿದ್ದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಈ ದೇಶದ ನಿಜವಾದ ರತ್ನ, ಭಾರತ ಮಾತೆಯ ಪುತ್ರನನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ಸಂಸತ್ತಿನಲ್ಲಿ ಮಂಗಳವಾರ ಬಣ್ಣಿಸಲಾಯಿತು.

ಕಲಾಂ ಅವರ ನಿಧನವು ನಮ್ಮ ದೇಶ ಒಬ್ಬ ಚತುರ ರಾಜನೀತಿಜ್ಞ, ದೊಡ್ಡ ವಿಜ್ಞಾನಿ, ಬಡವರ ಸ್ನೇಹಿತ ಹಾಗೂ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಲೋಕಸಭೆಯಲ್ಲಿ ಇಂದು ಕಲಾಪ ಆರಂಭದಲ್ಲಿ ಬಣ್ಣಿಸಲಾಯಿತು.

ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಮಾತನಾಡಿ, ಕಲಾಂ ಅವರು ಈ ದೇಶದ ನಿಜವಾದ ರತ್ನ. ಅವರ ಕೊನೆಯ ಉಸಿರಿರುವವರೆಗೆ ಎಲ್ಲರ ಪ್ರೀತಿ ಗಳಿಸಿದ್ದರು. ಭಾರತ ದೇಶದ ಯುವಕರೊಂದಿಗೆ, ಮಕ್ಕಳೊಂದಿಗೆ ಸಂವಾದ ನಡೆಸುತ್ತಾ, ಪಾಠ ಮಾಡುತ್ತಾ ಉತ್ಸಾಹ ತುಂಬುತ್ತಿದ್ದರು. 83 ವರ್ಷದ ಕಲಾಂ ಅವರಲ್ಲಿ 38 ವರ್ಷದವರ ಶಕ್ತಿ, ಉತ್ಸಾಹವಿತ್ತು, ಮುಖದಲ್ಲಿ 8 ವರ್ಷದ ಹುಡುಗನ ಮುಗ್ಧ ನಗುವಿತ್ತು ಎಂದು ಬಣ್ಣಿಸಿದರು.

ರಾಜ್ಯಸಭಾ ಸದಸ್ಯ ಹಮೀದ್ ಅನ್ಸಾರಿ, ಕಲಾಂ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.” ಅಬ್ದುಲ್ ಕಲಾಂ ಅವರ ನಿಧನದಿಂದ ಭಾರತ ಒಬ್ಬ ತಂತ್ರಜ್ಞ, ಉತ್ತಮ ಶಿಕ್ಷಕನನ್ನು ಕಳೆದುಕೊಂಡಿದೆ ಎಂದು ರಾಜ್ಯಸಭೆಯಲ್ಲಿ ಬಣ್ಣಿಸಲಾಯಿತು.

ಅಗಲಿದ ಗಣ್ಯರಿಗೆ ಗೌರವ ಸೂಚಕವಾಗಿ, ಎರಡೂ ಸದನಗಳಲ್ಲಿ ಸದಸ್ಯರು ಮೌನ ಶೋಕಾಚರಣೆ ನಡೆಸಿ ಕಲಾಪವನ್ನು ಮುಂದೂಡಿದರು.

ಕಲಾಂ ಅವರ ಅಂತ್ಯಕ್ರಿಯೆ ನಾಳೆ ಅವರ ಹುಟ್ಟೂರಲ್ಲಿ ನಡೆಯಲಿರುವುದರಿಂದ ಕೆಲ ಸದಸ್ಯರು ಅಲ್ಲಿಗೆ ಹೋಗುವವರಿರುವುದರಿಂದ ನಾಳೆ ಲೋಕಸಭಾ ಕಲಾಪ ಇರುವುದಿಲ್ಲ. ಜುಲೈ 30ರಂದು ಮತ್ತೆ ಕಲಾಪ ಮುಂದುವರಿಯಲಿದೆ. ಆದರೆ ರಾಜ್ಯಸಭಾ ಕಲಾಪ ನಾಳೆ ಇರುತ್ತದೆ.

Write A Comment