ರಾಷ್ಟ್ರೀಯ

ಕಲಾಂ ಅಂತಿಮ ಕ್ಷಣಗಳು; ಅವರ ನಿಕಟ ವಿದ್ಯಾರ್ಥಿ ಶ್ರಿಜನ್ ಪಾಲ್ ಸಿಂಗ್ ಮಾತುಗಳಲ್ಲಿ…

Pinterest LinkedIn Tumblr

Srijan-Pal-Singh_with_kalamಎಪಿಜೆ ಅಬ್ದುಲ್ ಕಲಾಂರೊಂದಿಗಿನ ಒಡನಾಟದ ಬಗ್ಗೆ ಶ್ರಿಜನ್ ಪಾಲ್ ಸಿಂಗ್ ಅವರ ಬರೆದದ್ದು ಹೀಗಿದೆ.

ಮಹಾನ್ ಚೇತನ ಕಲಾಂ ಅವರ ಕೊನೆಯ ದಿನದೊಂದಿಗೆ ನನ್ನನ್ನು ಜನ ನೆನಪಿಟ್ಟುಕೊಂಡಿರುತ್ತಾರೆ. ಅವರ ನೆನಪುಗಳು ಕೆಲವೊಮ್ಮೆ ಕಣ್ಣೀರಾಗಿ ಹರಿಯುತ್ತದೆ.

ಜುಲೈ 27 ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ನಮ್ಮ ಕೊನೆಯ ದಿನ ಆರಂಭವಾಗಿದ್ದು. ಗುವಾಹಟಿಗೆ ಹೋಗುತ್ತಿರುವ ವಿಮಾನವನ್ನೇರಿದಾಗ ಡಾ. ಕಲಾಂ ಮತ್ತು ನಾನು 1ಎ ಸೀಟಿನಲ್ಲಿಯೂ 1ಸಿ  ಸೀಟಿನಲ್ಲಿಯೂ ಆಸೀನರಾದೆವು. ಅಂದು ಅವರು ಗಾಢ ಬಣ್ಣದ ಕಲಾಂ ಸೂಟ್ ಧರಿಸಿದ್ದರು. ನೀವು ಧರಿಸಿರುವ ಸೂಟ್ ನ ಬಣ್ಣ ಚೆನ್ನಾಗಿದೆ ಎಂದು ನಾನವರಲ್ಲಿ ಹೇಳಿದ್ದೆ. ಆದರೆ ಅವರನ್ನು ಕೊನೆಯ ಬಾರಿ ಆ ಬಣ್ಣದಲ್ಲಿ ಕಾಣುತ್ತೇನೆ ಎಂದು ನಾನು ಊಹಿಸಿರಲಿಲ್ಲ.

ಮುಂಗಾರು ಮಳೆಯ ಕಾಲದಲ್ಲಿ ಎರಡೂವರೆ ಗಂಟೆಗಳ ವಿಮಾನಯಾತ್ರೆಯಾಗಿತ್ತು ಅದು. ನನಗೆ ಟರ್ಬುಲೆನ್ಸ್ ಅಂದ್ರೆ ಭಯ. ಆದರೆ ಅವರು ಅದನ್ನು ಗೆದ್ದ ನಾಯಕ. ಇನ್ನೇನೂ ಭಯವಿರಲ್ಲ ಎಂದು ವಿಮಾನದೊಳಗೆ ಚಳಿಯಲ್ಲಿ ನಡುಗುವಾಗಲೂ ಕಿಟಕಿಯನ್ನು ತೆರೆದಿಟ್ಟು ಅವರು ಹೇಳಿದ್ದರು.

ವಿಮಾನದಿಂದ ಇಳಿದು ಮತ್ತೆ ಎರಡೂವರೆ ಗಂಟೆಗಳ ಕಾಲ ಕಾರಿನಲ್ಲಿ ಪ್ರಯಾಣಿಸಬೇಕಿತ್ತು ಐಐಎಂ ಶಿಲ್ಲಾಂಗ್ ಗೆ ತಲುಪಲು. ಈ 5 ಗಂಟೆಗಳ ಕಾಲ ಮಾತನಾಡುತ್ತಾ ಚರ್ಚೆ ಮಾಡುತ್ತಾ ಕಳೆದೆವು. ಕಳೆದ 6 ವರ್ಷಗಳಿಂದ ದೀರ್ಘ ದೂರ ವಿಮಾನ ಯಾತ್ರೆ, ಕಾರು ಪಯಣಗಳಲ್ಲಿ ನಾವಿಬ್ಬರು ಹೀಗೆ ಸಮಯ ಕಳೆಯುತ್ತಿದ್ದೆವು. ಈ ಬಾರಿಯ ಪ್ರಯಾಣ ನನಗೆ ತುಂಬಾ ಇಷ್ಟವಾಗಿತ್ತು. ದುರದೃಷ್ಟವಶಾತ್ ನಮ್ಮ ಕೊನೆಯ ಪಯಣವಾಗಿತ್ತು ಅದು.

ಈ ಪಯಣದಲ್ಲಿ ಮೂರು ವಿಷಯಗಳ ಬಗ್ಗೆ ನಾವು ಚರ್ಚಿಸಿದ್ದೆವು. ಮೊದಲನೆಯದ್ದು, ಪಂಜಾಬ್ನಲ್ಲಿನ ಉಗ್ರರ ದಾಳಿ, ಕಲಾಂ ಈ ವಿಷಯದ ಬಗ್ಗೆ ಭಯಪಟ್ಟಿದ್ದರು. ಮುಗ್ದ ಮನುಷ್ಯರು ಈ ದಾಳಿಯಲ್ಲಿ ಸಾವಿಗೀಡಾಗುತ್ತಿರುವುದರ ಬಗ್ಗೆ ಅವರಿಗೆ ದುಃಖವಿತ್ತು.  ಐಐಎಂ ಶಿಲ್ಲಾಂಗ್ನಲ್ಲಿ ಮಂಡಿಸಬೇಕಾಗಿದ್ದ ಪ್ರಬಂಧದ ವಿಷಯ ಲಿವೇಬಲ್ ಪ್ಲಾನೆಟ್ ಅರ್ಥ್ ಎಂಬುದಾಗಿತ್ತು. ಈ ವಿಷಯದಲ್ಲಿ ಅವರು ಉಗ್ರರ ದಾಳಿಯ ಬಗ್ಗೆಯೂ ಪ್ರಸ್ತಾಪಿಸಿದ್ದರು. ಭೂಮಿಯ ಅಸ್ತಿತ್ವಕ್ಕೆ ಮನುಷ್ಯ ನಿರ್ಮಿತ ಶಕ್ತಿಗಳಾದ ಮಲಿನೀಕರಣ ಮೊದಲಾದವುಗಳ ಪ್ರಬಲವಾದ ಆತಂಕವನ್ನು ತಂದೊಡ್ಡುತ್ತವೆ ಎಂದು ಅವರು ಹೇಳಿದರು. ಈ ದಾಳಿಗಳು, ಮಲಿನೀಕರಣಗಳೂ, ಮಾನವೀಯತೆ ಇಲ್ಲದೇ ಇರುವ ಕೃತ್ಯಗಳು ಹೆಚ್ಚಾದಾಗ ನಾವು ಭೂಮಿಯನ್ನು ತ್ಯಜಿಸಬೇಕಾಗುತ್ತದೆ. ಇದೇ ರೀತಿ ಮುಂದುವರಿದರೆ 30 ವರ್ಷಗಳ ಕಾಲವಷ್ಟೇ ನಾವು ಅಸ್ತಿತ್ವದಲ್ಲಿರಲು ಸಾಧ್ಯ. ನೀವು ಇದಕ್ಕಾಗಿ ಏನಾದರೂ ಮಾಡಲೇ ಬೇಕು, ಇದು ನಿಮ್ಮ ಭವಿಷ್ಯತ್ತಿನ ಪ್ರಶ್ನೆಯಾಗಿದೆ ಎಂದು ಅವರು ನೆನಪಿಸಿದರು.

ಎರಡನೇ ಚರ್ಚೆ ದೇಶಕ್ಕೆ ಸಂಬಂಧಿಸಿದ್ದಾಗಿತ್ತು. ಕಳೆದ ಎರಡು ದಿವಸಗಳಿಂದ ಪ್ರಜಾಪ್ರಭುತ್ವದ ಶಿರೋಬಿಂದುವಾದ ಸಂಸತ್ ಕಲಾಪ ಪ್ರಕ್ಷುಬ್ಧವಾಗಿರುವ ಬಗ್ಗೆ ಕಲಾಂ ಅವರಿಗೆ ಬೇಸರವಿತ್ತು. ತನ್ನ ಕಾಲಾವಧಿಯಲ್ಲಿ ಎರಡು ಸರ್ಕಾರಗಳನ್ನು ನೋಡಿದ್ದೇನೆ. ಅದಾದ ನಂತರ ಮತ್ತಷ್ಟು ಸರ್ಕಾರಗಳನ್ನು ನೋಡಿದ್ದೇನೆ. ಸಂಸತ್ ಪ್ರತಿಭಟನೆಗೆ ವೇದಿಕೆಯಾಗಿರುವುದನ್ನೂ ನೋಡಿದ್ದೇನೆ. ಇದು ಸರಿಯಲ್ಲ. ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಂಸತ್ನಲ್ಲಿ ಚಟುವಟಿಕೆಗಳು ನಡೆಯಬೇಕಾಗಿದೆ ಎಂದರು ಕಲಾಂ.

ಕೂಡಲೇ ಐಐಎಂ ಶಿಲ್ಲಾಂಗ್ನ ವಿದ್ಯಾರ್ಥಿಗಳಿಗಾಗಿ ಒಂದು ಅನಿರೀಕ್ಷಿತ ಅಸೈನ್ಮೆಂಟ್ ಪ್ರಶ್ನೆಯನ್ನು ತಯಾರಿಸಲು ಅವರು ನನಗೆ ಹೇಳಿದರು. ಪ್ರಬಂಧ ಮಂಡನೆಯಾದ ನಂತರ ಈ ಅಸೈನ್ಮೆಂಟ್ ಅನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂದು ಅವರು ಹೇಳಿದರು. ಸಂಸತ್ನಲ್ಲಿ ಹೆಚ್ಚು ಚಟುವಟಿಕೆ ನಡೆಯುವಂತೆ, ಗಂಭೀರ ವಿಷಯಗಳ ಬಗ್ಗೆ ಗಮನಹರಿಸುವಂತೆ  ಮಾಡಲು ಅಗತ್ಯವಾದ ಮೂರು ವಿಷಯಗಳನ್ನು ಸೂಚಿಸಿ ಎಂಬುದಾಗಿತ್ತು ಆ ಪ್ರಶ್ನೆ. ಆದರೆ ಸ್ವಲ್ಪ ಹೊತ್ತು ಕಳೆದ ಮೇಲೆ ಅವರು ಹೇಳಿದರು. ನನಗೇ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಆಗದೇ ಇರುವಾಗ ನಾನು ಏನೂಂತ ಅವರಲ್ಲಿ ಕೇಳಲಿ?  ಅಡ್ವಾಂಟೇಜ್ ಇಂಡಿಯಾ ಎಂಬ ಹೆಸರಿನ ಪುಸ್ತಕ ಬರೆಯುವಾಗ ಅದರಲ್ಲಿ ಈ ವಿಷಯದ ಬಗ್ಗೆ ಪ್ರಶ್ನೆಗಳನ್ನೂ, ಚರ್ಚೆಗಳನ್ನೂ ಸೇರಿಸಬೇಕೆಂದು ನಾವು ಬಯಸಿದೆವು.

ಮೂರನೆಯದ್ದು, ಮಾನವೀಯತೆಯ ಬಗ್ಗೆಯಾಗಿತ್ತು. ಆರೇಳು ಕಾರುಗಳ ಬೆಂಗಾವಲಿನಲ್ಲಿ ನಾವು ಪ್ರಯಾಣಿಸಿದ್ದೆವು. ಎರಡನೇ ಕಾರಿನಲ್ಲಿ ನಾವಿದ್ದೆವು. ಮುಂದೆ ಹೋಗುತ್ತಿದ್ದ ಓಪನ್ ಜಿಪ್ಸಿಯಲ್ಲಿ ಮೂವರು ಸೈನಿಕರಿದ್ದರು. ಅದರಲ್ಲಿದ್ದ ಒಬ್ಬ ಸೈನಿಕ ಗನ್ ಹಿಡಿದು ಎದ್ದು ನಿಂತುಕೊಂಡೇ ಇದ್ದ. ಒಂದು ಗಂಟೆಯಿಂದ ಹಾಗೆ ನಿಂತುಕೊಂಡಿದ್ದ ಸೈನಿಕನಿಗೆ ಕುಳಿತುಕೊಳ್ಳಲು ಹೇಳಿ ಎಂದು ವಯರ್ಲೆಸ್ ಸಂದೇಶ ನೀಡುವಂತೆ ಸೂಚಿಸಿದರು. ಆದರೆ ತನ್ನ ಭದ್ರತೆಗಾಗಿ ಈ ರೀತಿ ಮಾಡಿದ್ದಾರೆ ಎಂದು ಅರಿತಾಗ ಸುಮ್ಮನಾದರು. ಆಮೇಲೆ ಆ ಸೈನಿಕನನ್ನು ಭೇಟಿಯಾಗಬೇಕೆಂದು ಹೇಳಿದರು. ಶಿಲ್ಲಾಂಗ್ಗೆ ತಲುಪಿದಾಗ ಆ ಸೈನಿಕನನ್ನು ಭೇಟಿಯಾಗಿ ನನಗಾಗಿ ಇಷ್ಟೊತ್ತು ಕಷ್ಟಪಟ್ಟಿದ್ದಕ್ಕಾಗಿ ಕ್ಷಮಿಸಿ ಎಂದ ಕಲಾಂ, ಊಟ ಮಾಡಿ ಹೋಗಿ ಎಂದು ಸೈನಿಕನಿಗೆ ಆಮಂತ್ರಣವನ್ನೂ ನೀಡಿದರು.

ಇದಾದ ಕೂಡಲೇ ಅವರು ಪ್ರಬಂಧ ಮಂಡಿಸಲು ಹೋದರು. ಎಲ್ಲಿಗೆ ಹೋದರೂ ತಡ ಮಾಡಿ ಇನ್ನೊಬ್ಬರನ್ನು ಕಾಯಿಸುವುದು ಅವರಿಗೆ ಇಷ್ಟವಿರಲಿಲ್ಲ. ಅದರಲ್ಲೂ ವಿದ್ಯಾರ್ಥಿಗಳನ್ನು ಯಾವತ್ತೂ ಕಾಯುವಂತೆ ಮಾಡಬಾರದು ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಪ್ರಬಂಧ ಮಂಡಿಸಲು ಅಣಿಯಾಗಿ ಅವರ ಕೋಟ್ ನಲ್ಲಿ ಮೈಕ್ ಸಿಕ್ಕಿಸಿದಾಗ ಅವರು ಹೇಳಿದ್ದು, ಫನ್ನೀ ಗಯ್, ಆರ್ ಯು ಡೂಯಿಂಗ್ ವೆಲ್?

ಇದು ಅವರು ನನ್ನಲ್ಲಿ ಹೇಳಿದ ಕೊನೆಯ ಮಾತಾಗಿತ್ತು.

ಪ್ರಬಂಧ ಮಂಡಿಸಲು ಎದ್ದು ನಿಂತ ಅವರು ಎರಡು ನಿಮಿಷ ಮಾತನಾಡಿದರು. ಆಮೇಲೆ ತಕ್ಷಣ ಮಾತು ನಿಲ್ಲಿಸಿದರು. ನೋಡಿದರೆ ಅವರು ಕುಸಿದು ಬಿದ್ದಿದ್ದರು. ಕೂಡಲೇ ಡಾಕ್ಟರ್ ಅಲ್ಲಿಗೆ ಧಾವಿಸಿದರು. ಅವರ ತಲೆ ನನ್ನ ಕೈಗೆ ಆನಿಸಿ ನನ್ನ ಬೆರಳನ್ನು ಅವರು ಗಟ್ಟಿಯಾಗಿ ಹಿಡಿದಿದ್ದರು. ಅವರು ಏನನ್ನೂ ಮಾತಾಡಲಿಲ್ಲ. ನೋವು ಇದೆ ಎಂದು ತೋರಿಸಿಕೊಡಲೂ ಇಲ್ಲ. ಐದು ನಿಮಿಷದೊಳಗೆ ನಾವು ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು. ನಂತರದ ಐದು ನಿಮಿಷದಲ್ಲಿ ಅವರು ನಮ್ಮನ್ನಗಲಿದರು ಎಂದು ವೈದ್ಯರು ಹೇಳಿದರು. ನಾನು ಮತ್ತೊಮ್ಮೆ ಅವರ ಕಾಲು ಮುಟ್ಟಿ ನಾನು ನಮಸ್ಕರಿಸಿದೆ.

ಅವರು ನಮ್ಮನ್ನು ಬಿಟ್ಟು ಹೋದರು, ಮಾಡಬೇಕಾದ ಕೆಲಸಗಳು ಬಾಕಿ ಉಳಿದಿವೆ.

– ನಿಮ್ಮ ವಿಧೇಯ ವಿದ್ಯಾರ್ಥಿ

ಶ್ರಿಜನ್ ಪಾಲ್ ಸಿಂಗ್

(ಕಲಾಂ ಅವರ ಜತೆಗೆ ಹಲವಾರು ಯೋಜನೆಗಳಲ್ಲಿ ಶ್ರಿಜನ್ ಭಾಗಿಯಾಗಿದ್ದರು.  ವಾಟ್ ಕ್ಯಾನ್ ಐ ಗೀವ್, ಎನರ್ಜಿ ಇಂಡಿಪೆಂಡೆನ್ಸ್ ಫಾರ್ ದಿ ನೇಷನ್, ಪರಮಾಣು ಯೋಜನೆ , ಪುರ (ಪ್ರೊವೈಡಿಂಗ್ ಅರ್ಬನ್ ಅಮಿನಿಟೀಸ್ ಇನ್ ರೂರಲ್ ಏರಿಯಾಸ್) ಮೊದಲಾದ ಯೋಜನೆಗಳಲ್ಲಿ ಶ್ರಿಜನ್ ಪಾತ್ರವಹಿಸಿದ್ದರು . ಐಐಎಂ ಅಹ್ಮದಾಬಾದ್ ನಲ್ಲಿ ಮ್ಯಾನೇಜ್ಮೆಂಟ್ ಪದವಿ ಪೂರೈಸಿದ್ದ ಶ್ರಿಜನ್ ಕಲಾಂ ಜತೆ ಟಾರ್ಗೆಟ್ 3 ಬಿಲಿಯನ್ ಎಂಬ ಪುಸ್ತಕವನ್ನೂ ಬರೆದಿದ್ದರು.)

ಕೃಪೆ: ಶ್ರಿಜನ್ ಪಾಲ್ ಸಿಂಗ್ ಅವರ ಫೇಸ್ಬುಕ್ ಪೋಸ್ಟ್

Write A Comment