ರಾಷ್ಟ್ರೀಯ

ಮೋದಿ, ಮುಖರ್ಜಿ ಸೇರಿದಂತೆ ಗಣ್ಯರಿಂದ ಕಲಾಂ ಅಂತಿಮ ದರ್ಶನ

Pinterest LinkedIn Tumblr

kalam1121

ಹೊಸದಿಲ್ಲಿ: ಶಿಲಾಂಗ್ ಐಐಎಂನಲ್ಲಿ ಉಪನ್ಯಾಸ ನೀಡುವ ವೇಳೆ ಕುಸಿದು ಬಿದ್ದು ಹಠಾತ್ ನಿಧನರಾದ ಮಾಜಿ ರಾಷ್ಟ್ರಪತಿ ಅವರ ಪಾರ್ಥೀವ ಶರೀರವನ್ನು ಮಂಗಳವಾರ ಸಂಜೆ 4ರಿಂದ ಹೊಸದಿಲ್ಲಿಯ ರಾಜಾಜಿ ಮಾರ್ಗದ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು.

kalam112

kalam11

ವಾಯುಪಡೆಯ ಸಿ-130ಜೆ ಸೂಪರ್‌ ಹರ್ಕ್ಯುಲೆಸ್‌ ವಿಮಾನದ ಮೂಲಕ ಅವರ ದೇಹ ಗುವಾಹಟಿಯಿಂದ ಬೆಳಗ್ಗೆ 12.30ರ ವೇಳಗೆ ದಿಲ್ಲಿ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಹಾಗೂ ಸೇನಾ ಪಡೆಯ ಮೂವರು ಮುಖ್ಯಸ್ಥರು ಅವರ ಪಾರ್ಥೀವ ಶರೀರವನ್ನು ದಿಲ್ಲಿಯಲ್ಲಿ ಬರಮಾಡಿಕೊಂಡರು. ಸೇನಾ ಮುಖ್ಯಸ್ಥರು, ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಪ್ರಧಾನಿ ಮೋದಿ ಹಾಗೂ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕಲಾಂಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಕಲಾಂ ಕುಟುಂಬದವರ ಇಚ್ಛೆಯಂತೆ ಅವರ ಹುಟ್ಟೂರು ತಮಿಳುನಾಡಿನ ರಾಮೇಶ್ವರಂನಲ್ಲಿ ಬುಧವಾರ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಕಲಾಂ ಅವರ ಶರೀರವನ್ನು ಶಿಲಾಂಗ್‌ನಿಂದ ವಿಶೇಷ ವಿಮಾನದ ಮೂಲಕ ಬೆಳಗ್ಗೆ 6.30ಕ್ಕೆ ಗುವಾಹಟಿಗೆ ಕರತರಲಾಗಿತ್ತು. ಅಲ್ಲಿ ಮಾಜಿ ರಾಷ್ಟ್ರಪತಿಗೆ ಮುಖ್ಯಮಂತ್ರಿ ತರುಣ್‌ ಗೊಗೋಯ್‌ ಅಂತಿಮ ನಮನ ಸಲ್ಲಿಸಿದ್ದರು.

ಸರಕಾರಿ ರಜೆ ಇಲ್ಲ:
ಕಲಾಂ ಅವರ ನಿಧನ ಹಿನ್ನೆಲೆಯಲ್ಲಿ ದೇಶಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಆದರೆ, ಸರಕಾರಿ ರಜೆ ಘೋಷಿಸಲಾಗಿಲ್ಲ. ಕೇಂದ್ರ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಲೋಕಸಭೆ ಕಲಾಪ 2 ದಿನ ಮುಂದಕ್ಕೆ:
ಎಪಿಜೆ ಅಬ್ದುಲ್‌ ಕಲಾಂ ಅವರಿಗೆ ಗೌರವ ನಮನ ಸಲ್ಲಿಸಿದ ಬಳಿಕ ರಾಜ್ಯಸಭೆ ಕಲಾಪವನ್ನು 1 ದಿನ ಹಾಗೂ ಲೋಕಸಭೆ ಕಲಾಪವನ್ನು 2 ದಿನಗಳ ಕಾಲ ಮುಂದೂಡಲಾಗಿದೆ.

ಭಾರತದಲ್ಲಿ ಕ್ಷಿಪಣಿ ಮತ್ತು ರಾಕೆಟ್ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಮರೆಯಲಾರದ ಕಾಣಿಕೆ ನೀಡಿದ, 11ನೇ ರಾಷ್ಟ್ರಪತಿಯಾಗಿ ಇಡೀ ದೇಶಕ್ಕೆ ಅತ್ಯುನ್ನತ ಮೌಲ್ಯಗಳ ಬಗ್ಗೆ ಮಮತೆಯ ಮೇಷ್ಟ್ರಾಗಿ ಪಾಠ ಹೇಳಿದ ‘ಮಿಸೈಲ್ ಮ್ಯಾನ್’ (ಕ್ಷಿಪಣಿ ಮನುಷ್ಯ) ಅಬ್ದುಲ್ ಕಲಾಂ (83) ಸೋಮವಾರ ಕೊನೆಯುಸಿರೆಳೆದರು. ಮೇಘಾಲಯದ ಶಿಲಾಂಗ್ ಐಐಎಂನಲ್ಲಿ ಸೋಮವಾರ ಸಂಜೆ 6-30ರಲ್ಲಿ ಉಪನ್ಯಾಸ ಮಾಡುತ್ತಿದ್ದಾಗ ಕುಸಿದು ಬಿದ್ದ ಕಲಾಂ ಅವರನ್ನು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ರಾಷ್ಟ್ರಪತಿ ಪ್ರವಾಸ ಮೊಟಕು: ಅಬ್ದುಲ್ ಕಲಾಂ ನಿಧನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ರಾಜ್ಯ ಪ್ರವಾಸ ಮೊಟಕು ಗೊಳಿಸಿ ದಿಲ್ಲಿಗೆ ವಾಪಸಾಗಿದ್ದಾರೆ. ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಸೋಮವಾರ ಮಧ್ಯಾಹ್ನ ಮೈಸೂರಿಗೆ ಆಗಮಿಸಿದ್ದ ರಾಷ್ಟ್ರಪತಿ, ಮಂಗಳವಾರ ಕಲಬುರಗಿ, ಬೀದರ್ ಮತ್ತು ಬೆಂಗಳೂರಿನಲ್ಲಿ ವಿವಿಧ ಕಾರ‌್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು.

Write A Comment