ರಾಷ್ಟ್ರೀಯ

ವೈದ್ಯಲೋಕದ ವಿಸ್ಮಯ ಯಂತ್ರ ಸೂಜಿಗಲ್ಲಿನ ನೆರಳಚ್ಚು

Pinterest LinkedIn Tumblr

mri– ಶ್ರೀಹರ್ಷ ಸಾಲಿಮಠ
MRI – Magnetic Resonance Scanner – ಕಾಂತೀಯ ಹೊಂದಾಣಿಕೆ ಚಿತ್ರ ಶೋಧಕ ಎಂದು ಸಂಸ್ಕೃತ ಮಿಶ್ರಿತ ಕನ್ನಡದಲ್ಲಿ ಹೇಳಬಹುದು. ಅಚ್ಚಗನ್ನಡದಲ್ಲಿ ಸೂಜಿಗಲ್ಲಿನ ನೆರಳಚ್ಚು ಎನ್ನಬಹುದು!  ಸದ್ಯಕ್ಕೆ ಎಮ್ಮಾರೈ ಎಂದೇ ಕರೆಯೋಣ. ಎಮ್ಮಾರೈ ವೈದ್ಯಕೀಯ ರಂಗದಲ್ಲಿ ಅತ್ಯಂತ ಹೆಚ್ಚಿನ ಮಹತ್ವವುಳ್ಳ ಯಂತ್ರ. ಮನುಷ್ಯ ಜೀವಿಯ ಆರೋಗ್ಯಕ್ಕೆ ಇಂಜಿನಿಯರುಗಳ ಬಹುದೊಡ್ಡ ಕೊಡುಗೆಗಳಲ್ಲೊಂದು. ಎಮ್ಮಾರೈ ಅನ್ನು ಮೆದುಳಿನ ದುರ್ಮಾಂಸವನ್ನು, ಕ್ಯಾನ್ಸರ್ ಕಣಗಳನ್ನು, ಸೂಕ್ಷ್ಮ ಅಂಗಾಂಶಗಳಲ್ಲಿನ ಬಿರುಕುಗಳನ್ನು ಅಳೆಯಲು, ಎಕ್ಸ್ ರೇ ಅಥವಾ ಬರಿಗಣ್ಣಿಗೆ ಕಾಣದ ಅಂಗಗಳನ್ನು ಕಂಡುಕೊಳ್ಳಲು ಈ ಯಂತ್ರವನ್ನು ಬಳಸಲಾಗುತ್ತದೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ.

ಡಾ. ರೇಮಂಡ್ ಡಾಮೋಡಿಯನ್ ಎಂಬ ವಿಜ್ಞಾನಿ ಎಂಬ ವಿಜ್ಞಾನಿ ಅಯಸ್ಕಾಂತಗಳನ್ನು ಬಳಸಿ ದೇಹದೊಳಗೆ ನಡೆಯುವ ಚಟುವಟಿಕೆಗಳನ್ನು ಗಮನಿಸಲು ಯತ್ನಿಸುತ್ತಿದ್ದ. ಹಾಗೆಯೇ ಅವುಗಳ ಚಿತ್ರಗಳನ್ನು ತೆಗೆಯಲು ಯತ್ನಿಸುತ್ತಿದ್ದ. ಅಯಸ್ಕಾಂತಗಳನ್ನು ತಂತಿಗಳ ಮೂಲಕ್ ಸುತ್ತಿ ವಿದ್ಯುತ್ ಹರಿಸಿ ಆಂಟೆನಾಗಳನ್ನು ಬಳಸಿ ಕಡೆಗೂ ಒಂದು ಯಂತ್ರವನ್ನು ತಯಾರಿಸಿದ. ಗುಡುಗಿನ ಸದ್ದಿನಂತೆ ಜೋರಾಗಿ ಗಲಾಟೆ ಮಾಡುತ್ತಿದ್ದ ಯಂತ್ರದೊಳಗೆ ತೂರಿ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಳ್ಳಲು ಯಾರೂ ತಯಾರಿರಲಿಲ್ಲ. ಕಡೆಗೆ ರೇಮಂಡ್ ಮಹಾಶಯನೇ ತನ್ನನ್ನು ಪ್ರಯೋಗಕ್ಕೊಡ್ಡಿಕೊಳ್ಳಲು ಮುಂದಾದ. ರೇಮಂಡ್ ಯಂತ್ರದೊಳಗೆ ಮಲಗಿ ಯಂತ್ರವನ್ನು “ಸ್ವಿಚ್ ಆನ್”  ಮಾಡಿ ಸುಮಾರು ಹೊತ್ತು ಕಾದರೂ ಯಾವುದೇ ಚಿತ್ರಗಳೂ ಬರಲಿಲ್ಲ. ವರ್ಷಗಟ್ಟಲೇ ಕಷ್ಟಪಟ್ಟು ಸಂಶೋಧಿಸಿ ತಯಾರು ಮಾಡಿದ ಯಂತ್ರ ಕೆಲಸ ಮಾಡದಿರುವುದನ್ನು ಕಂಡು ರೇಮಂಡ್ ದುಃಖದಿಂದ ತಲೆ ಮೇಲೆ ಕೈ ಹೊತ್ತು ಕುಳಿತ. ರೇಮಂಡ್ ನ ಜೊತೆಗಾರನೊಬ್ಬ ಬಹುಷಃ ರೇಮಂಡ್ ನ ದುಡೂತಿ ದೇಹ ಮೆಶಿನ್ ನ ಸಾಮರ್ಥ್ಯಕ್ಕಿಂತ ಹೆಚ್ಚಿದೆ ಎಂದು ಶಂಕಿಸಿದ. ಕಡೆಗೆ ಗುರುವಿನ ದುಃಖವನ್ನು ನೋಡಲಾಗದೆ ರೇಮಂಡ್ ನ ವಿದ್ಯಾರ್ಥಿಯೊಬ್ಬ ಮೆಶಿನಿನ ಪ್ರಯೋಗಕ್ಕೊಳಗಾಗಲು ಮುಂದೆ ಬಂದ. ಹೀಗೆ 1977 ರ ಜುಲೈ 3 ರಂದು ಮೊಟ್ಟಮೊದಲ ಬಾರಿಗೆ ಮನುಷ್ಯನ ಮೇಲೆ ಎಮ್ಮಾರೈ ಪ್ರಯೋಗ ನಡೆಯಿತು. ಸುಮಾರು ಒಂದು ಗಂಟೆಯ ಸತತ ಪ್ರಯತ್ನದ ನಂತರ ಆಯಸ್ಕಾಂತವನ್ನು ಬಳಸಿ ಮನುಷ್ಯ ದೇಹದ ಒಳ ಅಂಗಾಂಗದ ಚಿತ್ರ ತೆಗೆಯಲಾಯಿತು. ತದನಂತರ ಎಮ್ಮಾರೈ ಯಂತ್ರದ ಬೆಳವಣಿಗೆಯ ವೇಗ ಮನುಷ್ಯನಿಗೆ ಸಂಭವಿಸಬಹುದಾದಂತಹ ಬರಿಗಣ್ಣಿಗೆ ಕಾಣದ ಒಳರೋಗಗಳನ್ನು ಅಧ್ಯಯನ ಮಾಡಲು ತನ್ನದೇ ಕೊಡುಗೆ ನೀಡಿದೆ.

ಎಮ್ಮಾರೈ ಯಂತ್ರವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮನುಷ್ಯನ ದೇಹವನ್ನು ಒಳಗೆ ತೆಗೆದುಕೊಂಡು ಹೋಗುವ ಎರಡಡಿಯ ಉದ್ದನೆಯ ಬಾಗಿಲಗುಂಟ ಉದ್ದನೆಯ ಸೂಜಿಗಲ್ಲನ್ನು ಅಳವಡಿಸಲಾಗಿರುತ್ತದೆ. ಈ ಸೂಜಿಗಲ್ಲು ವಿದ್ಯುತ್ ನಿಂದ ಉತ್ಪತ್ತಿಯಾಗುವಂತದ್ದು ಮತ್ತು ಅತ್ಯಂತ ಶಕ್ತಿಶಾಲಿಯಾಗಿರುತ್ತದೆ. ಈ ಬಾಗಿಲನ್ನು ‘ಬೋರ್’ ಎಂದು ಕರೆಯಲಾಗುತ್ತದೆ.  ಅಯಸ್ಕಾಂತವನ್ನು ಕೃತಕವಾಗಿ ಸೃಷ್ಟಿಸಲು ಸೂಪರ್ ಕಂಡಕ್ಟರ್ (ಅತಿವಾಹಕ) ತಂತಿಗಳನ್ನು ಬಳಸಲಾಗುತ್ತದೆ. ಅತಿವಾಹಕಗಳ ವಿಶೇಷತೆಯೆಂದರೆ ಅವುಗಳ ತಾಪಮಾನ ಕಡಿಮೆ ಆದಷ್ಟು ವಿದ್ಯುತ್ ಅನ್ನು ಪ್ರವಹಿಸುವ ಶಕ್ತಿ ಹೆಚ್ಚಾಗುತ್ತದೆ. ವಿದ್ಯುತ್ ಬಳಸಿ  ಅಯಸ್ಕಾಂತಿಯ ಶಕ್ತಿಯನ್ನು ಹೆಚ್ಚಿಸಲು ತಂತಿಗಳನ್ನು ಅತ್ಯಂತ ತಣ್ಣಗಿನ ಅಂದರೆ ಮಂಜುಗಡ್ಡೆಗಿಂತ 270 ಡಿಗ್ರಿಗಳಷ್ಟು ಹೆಚ್ಚು ತಣ್ಣಗಿನ ಹೀಲಿಯಮ್ ಅನಿಲದಲ್ಲಿ ಮುಳುಗಿಸಿ ಇಡಲಾಗಿರುತ್ತದೆ. ಈ ರೀತಿ ಮುಳುಗಿಸಲಾದ ತಂತಿಯನ್ನು ಒಂದು ಕೊಳವೆಯಲ್ಲಿ ಸುತ್ತಿಟ್ಟು ಅದರ ಸುತ್ತ ನಿರ್ವಾತವನ್ನು ಸೃಷ್ಟಿಸಲಾಗುತ್ತದೆ. ಹೀಗೆ ಕೃತಕವಾದ ಮಹಾಶಕ್ತಿಶಾಲಿಯಾದ ಸೂಜಿಗಲ್ಲನ್ನು ಸೃಷ್ಟಿಸಲಾಗುತ್ತದೆ.

ಇದಲ್ಲದೇ ಎಮ್ಮಾರೈ ಯಂತ್ರದಲ್ಲಿ ಇನ್ನೆರಡು ಚಿಕ್ಕ ಸೂಜಿಗಲ್ಲುಗಳಿರುತ್ತವೆ. ಅವು ಪ್ರಧಾನ ಸೂಜಿಗಲ್ಲಿಗಿಂತ ನಾಲ್ಕು ಪಟ್ಟು ಕಡಿಮೆ ಶಕ್ತಿಯವಾಗಿರುತ್ತವೆ. ಪ್ರಧಾನ ಸೂಜಿಗಲ್ಲು ಒಂದೇ ಬಾರಿಗೆ ಇಡೀ ಶರೀರದ ಮೇಲೆ ಕಾಂತಿಯ ಅಲೆಗಳನ್ನು ಹಾಯಿಸಿದರೆ ಚಿಕ್ಕ ಸೂಜಿಗಲ್ಲುಗಳು ಮೆದುಳು,ಕೈ, ಕಾಲು, ಎದೆ ಎಂಬಂತೆ ಒಂದೊಂದೇ ಅಂಗದ ಮೇಲೆ ಕಾಂತಿಯ ಅಲೆಗಳನ್ನು ಹಾಯಿಸುತ್ತವೆ. ಸೂಜಿಗಲ್ಲುಗಳಲ್ಲದೇ ರೇಡಿಯೋ ಅಲೆಗಳನ್ನು ದೇಹದೊಳಗೆ ಹಾಯಿಸುವ ಯಂತ್ರವೂ ಇರುತ್ತದೆ. ಇದೂ ಸಹ ದೇಹದ ವಿವಿಧ ಅಂಗಗಳ ಮೇಲೆ ಬೇರೆಬೇರೆಯಾಗಿ ತರಂಗಗಳನ್ನು ಹಾಯಿಸುವ ಸಾಮರ್ಥ್ಯ ಹೊಂದಿರುತ್ತದೆ.  ಇದಲ್ಲದೇ ಕಂಪ್ಯೂಟರೀಕೃತ ತಟ್ಟೆಯೊಂದು ಶರೀರವನ್ನು ಯಂತ್ರದೊಳಗೆ ಹೊಗಿಸಲು ತಯಾರಿರುತ್ತದೆ.

Write A Comment