ಅಂತರಾಷ್ಟ್ರೀಯ

ಪರಂಗಿ ಹಣ್ಣು ತಿನ್ನುದರಿಂದ ಆರೋಗ್ಯ, ಸೌಂದರ್ಯ ವೃದ್ಧಿ ! ಇನ್ನೆನೆಲ್ಲಾ ಗುಣಗಳಿವೆ ..ಇಲ್ಲಿ ನೋಡಿ…

Pinterest LinkedIn Tumblr

papaya

ಆರೋಗ್ಯವಾಗಿರಲು ನೀರು, ಆಹಾರ ಎಷ್ಟು ಮುಖ್ಯವೋ ಅದೇ ರೀತಿ ಹಣ್ಣುಗಳೂ ಸಹ ಮುಖ್ಯ. ಹಣ್ಣುಗಳು ನೈಸರ್ಗಿಕವಾಗಿ ಬಂದ ಅಪೂರ್ವ ಕೊಡುಗೆ. ಅರೋಗ್ಯದಿಂದ ಬದುಕಲು ನಿಸರ್ಗ ಮನುಷ್ಯನಿಗೆ ಎಲ್ಲಾ ರೀತಿಯ ಉಪಯೋಗಗಳನ್ನು ನೀಡಿದೆ. ಆದರೆ, ಅವುಗಳನ್ನು ಸರಿಯಾದ ರೀತಿಯಲ್ಲಿ ಹಾಗೂ ಸರಿಯಾದ ಸಮಯಕ್ಕೆ ಬಳಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ಆನಾರೋಗ್ಯ ಬಂದ ತಕ್ಷಣ ಮೊದಲು ನೆನಪಿಸಿಕೊಳ್ಳುವುದು ವೈದ್ಯರು, ಔಷಧಿಗಳನ್ನೇ. ಆದರೆ, ನಮಗೆ ಉಂಟಾಗುವ ಅದೆಷ್ಟೋ ಖಾಯಿಲೆಗಳನ್ನು ಪ್ರಾಕೃತಿಕ ದತ್ತವಾಗಿ ಬರುವ ಹಣ್ಣುಗಳಿಂದಲೂ ಗುಣಪಡಿಸಿಕೊಳ್ಳಬಹುದೆಂಬುದು ತಿಳಿದಿದ್ದರೂ ಜನ ಇದನ್ನು ನಿರ್ಲಕ್ಷಿಸುತ್ತಿದ್ದಾರೆ.

ಪರಂಗಿ ಹಣ್ಣು(papaya) ಎಲ್ಲಾ ಹಣ್ಣುಗಿಂತ ವಿಶಿಷ್ಟ ಹಣ್ಣಾಗಿದ್ದು, ಇದನ್ನು ಹಣ್ಣುಗಳ ರಾಣಿಯೆಂದೇ ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಈ ಹಣ್ಣನ್ನು ಕರಿಕ ಪರಂಗಿ ಎಂದು ಕರೆಯುವುದೂ ಉಂಟು. ಪ್ರತೀನಿತ್ಯ ಪರಂಗಿ ಹಣ್ಣು ತಿನ್ನುವುದರಿಂದ ಜೀರ್ಣಾಂಗದ ಅನೇಕ ತೊಂದರೆಗಳನ್ನು ದೂರಾಗಿಸಿಕೊಳ್ಳಬಹುದು. ಅಲ್ಲದೆ, ಇದರಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿರುವುದರಿಂದ ಕಣ್ಣುಗಳು ಆರೋಗ್ಯದಿಂದರಲು ಸಹಾಯಕಾರಿಯಾಗಿರುತ್ತದೆ.

ಕೊಬ್ಬಿನ ಅಂಶ ಕಡಿಮೆ ಮಾಡಲಿದೆ ಪರಂಗಿ
ಪರಂಗಿ ಹಣ್ಣಿನಲ್ಲಿ ನಾರಿನ ಅಂಶ ಹಾಗೂ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿರುವ ಕೊಬ್ಬಿನ ಅಂಶ ಹೊರಹಾಕಲು ಸಹಾಯಕಾರಿಯಾಗಿರುತ್ತದೆ. ಅಲ್ಲದೆ, ಹೃದಯ ಸಂಬಂಧಿ ರೋಗಗಳಿಗೆ ಪರಂಗಿ ಹಣ್ಣು ರಾಮಬಾಣವಾಗಿರುತ್ತದೆ.

ತೂಕ ಇಳಿಕೆಗೆ ಸಹಾಕಾರಿ
ಸ್ಥೂಲಕಾಯ ಇರುವವರು ತೂಕ ಇಳಿಸಿಕೊಳ್ಳಲು ಸಾಕಷ್ಟು ಇಂಗ್ಲೀಷ್ ಔಷಧಿಗಳ ಮೊರೆ ಹೋಗುತ್ತಿರುತ್ತಾರೆ. ಆದರೆ, ಮನೆಯಲ್ಲೇ ಇರುವ ಮದ್ದು ನೆನಪು ಮಾಡಿಕೊಳ್ಳುವುದೇ ಇಲ್ಲ. ಪರಂಗಿ ಹಣ್ಣಿನಲ್ಲಿ ಅತೀ ಕಡಿಮೆ ಕ್ಯಾಲೋರಿಗಳಿರುವುದರಿಂದ ಸ್ಥೂಲಕಾಯ ಇರುವವರು ಈ ಹಣ್ಣನ್ನು ಪ್ರತೀನಿತ್ಯ ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ದೇಹವು ಹಗುರವಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಇತ್ತೀಚಿನ ದಿನಗಳಲ್ಲಿ ಸೋಂಕು ತಗುಲುವುದು ಸಾಮಾನ್ಯವಾಗಿ ಹೋಗಿದೆ. ಯಾರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅವರ ದೇಹಕ್ಕೆ ಇತರರಿಗೆ ಬರುವ ರೋಗಗಳ ಸೋಂಕು ಸುಲಭವಾಗಿ ತಗುಲುತ್ತದೆ. ಇಂತಹವರು ಪ್ರತಿನಿತ್ಯ ಪರಂಗಿ ಹಣ್ಣನ್ನು ಪ್ರತೀನಿತ್ಯ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಸಂಧಿವಾತದಿಂದ ದೂರವಿಡುತ್ತದೆ
ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಸಂಧಿವಾತ ಮುಖ್ಯವಾದದ್ದು. ಕೀಲುನೋವು ಅಧಿಕವಾಗಿ ಮಧ್ಯವಯಸ್ಸು ದಾಟಿದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಪ್ರಮುಖ ಕಾರಣ ದೇಹದಲ್ಲಿ ವಿಟಮಿನ್ ಕೊರತೆ. ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿರುವುದಿಂದ ಸಂಧಿವಾತ ಸಮಸ್ಯೆ ಎದುರಿಸುತ್ತಿರುವವರು ಪರಂಗಿ ಹಣ್ಣನ್ನು ಪ್ರತಿನಿತ್ಯಾ ಸೇವಿಸುವುದರಿಂದ ಸಮಸ್ಯೆಯಿಂದ ದೂರವಿರಬಹುದು.

ಜೀರ್ಣಕ್ರಿಯೆ ಸರಾಗಕ್ಕೆ ಉಪಯುಕ್ತ
ಇತ್ತೀಚಿನ ಒಳ್ಳೆಯ ಆಹಾರ ಯಾವುದು ಹಾಗೂ ಕೆಟ್ಟ ಆಹಾರ ಯಾವುದೇ ನಿರ್ಧರಿಸುವುದಕ್ಕೂ ಜನರಿಗೆ ಸಮಯವಿಲ್ಲ. ಹೊಟ್ಟೆ ಹಸಿವಾದಾಗ ಸಿಗುವ ರುಚಿಯಾಗಿರುವ ಆಹಾರವನ್ನು ಹಿಂದು ಮುಂದೂ ಆಲೋಚಿಸದೇ ತಿನ್ನುವುದುಂಟು. ಆದರೆ, ಈ ಇಂತಹ ಆಹಾರಗಳು ತಿನ್ನುವಾಗ ರುಚಿಕರವಾಗಿಯೇ ಇರುತ್ತದೆ. ಆದರೆ, ಈ ಆಹಾರ ನಮ್ಮ ದೇಹಕ್ಕೆ ಸರಿಹೊಂದಿಲ್ಲದಿದ್ದರೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಪರಂಗಿ ಹಣ್ಣನ್ನು ಸೇವಿಸುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆ ಮಾಡುತ್ತದೆ.

ಮುಟ್ಟಿನಿಂದ ಬಂದ ನೋವು
ಮಹಿಳೆ ಹಾಗೂ ಯುವತಿಯರಿಗೆ ಸಾಮಾನ್ಯವಾಗಿ ಪ್ರತೀ ತಿಂಗಳು ಬರುವ ಈ ಮುಟ್ಟಿನ ನೋವು ಹೇಳಿಕೊಳ್ಳಲಾಗಂತಹ ನೋವನ್ನು ನೀಡುತ್ತದೆ. ಇಂತಹ ಸಮಯದಲ್ಲಿ ಮಾತ್ರೆ ಹಾಗೂ ಕೋಲ ಎಂಬ ಮದ್ದುಗಳ ಮೊರೆ ಹೋಗುವ ಬದಲು ಪರಂಗಿ ಹಣ್ಣು ಸೇವಿಸಿವುದರಿಂದ ಮುಟ್ಟಿನ ನೋವು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ, ಮುಟ್ಟಿನ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು ಪರಂಗಿ ಹಣ್ಣನ್ನು ಸೇವಿಸುತ್ತಾ ಬಂದರೆ ಮುಟ್ಟಿನ ಸಮಸ್ಯೆಯಿಂದ ದೂರವಿರಬಹುದು.

ಸೌಂದರ್ಯ ಕಾಪಾಡುವಲ್ಲಿ ಸಹಾಕಾರಿ
ಪ್ರತಿಯೊಬ್ಬ ವ್ಯಕ್ತಿಯೂ ತಾನು ಯುವಕ-ಯುವತಿಯಂತೆಯೇ ಇರಬೇಕೆಂದು ಬಯಸುತ್ತಾರೆ. ಆದರೆ, ಇದನ್ನು ಕಾಪಾಡಿಕೊಂಡು ಹೋಗುವ ಜನರು ಮಾತ್ರ ಬೆರಳೆಣಿಕೆಯಷ್ಟು. ನಮ್ಮ ಆಹಾರ ಹವ್ಯಾಸ ನಮ್ಮನ್ನು ವಯಸ್ಕರಂತೆ ಹಾಗೂ ಆರೋಗ್ಯಕರವಾಗಿರುವಂತೆ ಮಾಡಬಲ್ಲದು. ಹೌದು ಪ್ರತಿನಿತ್ಯ ಪರಂಗಿ ಹಣ್ಣನ್ನು ಸೇವಿಸುವುದರಿಂದ ವಯಸ್ಕರಂತೆ ಕಾಣಬಹುದು. ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಇ ಹಾಗೂ ಆಂಟಿಆಕ್ಸಿಡೆಂಟ್ ಅಂಶ ಇರುವುದರಿಂದ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಮುಖದ ಹಾಗೂ ದೇಹಕ್ಕೆ ಬರುವ ವಯಸ್ಸಾದ ಚಿಹ್ನೆಗಳು ದೂರವಾಗುತ್ತವೆ.

ಕ್ಯಾನ್ಸರ್ ರೋಗದಿಂದ ದೂರವಿರಬಹುದು
ಪರಂಗಿ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್, ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಪ್ಲವೊನೈಡ್ ಅಂಶ ಹೇರಳವಾಗಿರುವುದರಿಂದ ಜೀವಕೋಶಗಳು ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ. ಈ ಕುರಿತಂತೆ ಹಲವು ಸಂಶೋಧನಾ ಸಂಸ್ಥೆಗಳು ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಧನಾತ್ಮಕ ಫಲಿತಾಂಶ ಕಂಡುಬಂದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಒತ್ತಡಗಳಿಂದ ದೂರವಿಡುವಂತೆ ಮಾಡುತ್ತದೆ
ಒತ್ತಡದ ಕೆಲಸಗಳೇ ಇತ್ತೀಚಿನ ದಿನಗಳಲ್ಲಿ ಜನರ ಜೀವನವಾಗಿದ್ದು, ಈ ಒತ್ತಡವೇ ಜನರಲ್ಲಿ ಹಲವು ಸಮಸ್ಯೆಗಳನ್ನುಂಟು ಮಾಡುತ್ತಿದೆ. ಹೀಗಾಗಿ ಕೆಲಸ ಮುಗಿಯುತ್ತಿದ್ದಂತೆಯೇ ಒಂದು ಪರಂಗಿ ಹಣ್ಣನ್ನು ತಿನ್ನುವುದರಿಂದ ಒತ್ತಡ ದೂರಾವಾಗುವುದಲ್ಲದೇ, ಮನಸ್ಸಿಗೂ ಸಮಾಧಾನ ದೇಹಕ್ಕೂ ಆರೋಗ್ಯ ಒದಗಿದಂತಾಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣ ಈ ಪರಂಗಿ
ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಂಗಿ ಹಣ್ಣು ಸಿದ್ಧೌಷಧವಾಗಿದ್ದು, ಕರುಳು ಹಾಗೂ ಜೀರ್ಣಾಂಗಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಾದರೂ ನಿವಾರಿಸಬಲ್ಲದು.

ಮುಖದ ಸೌಂದರ್ಯ ವೃದ್ಧಿಗೆ ಸಹಕಾರಿ ಪರಂಗಿ
ಪರಂಗಿ ಹಣ್ಣನ್ನು ರುಬ್ಬಿ. ಅದರ ಮಿಶ್ರಣವನ್ನು ಪ್ರತಿನಿತ್ಯಾ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಹೊಳಪು ಬರುತ್ತದೆ.
ಪರಂಗಿ ಹಣ್ಣಿನ ತಿರುಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಇದನ್ನು ಫೇಸ್ ಪ್ಯಾಕ್ ನಂತೆ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ನಂತರ ಮುಖ ತೊಳೆಯುವುದರಿಂದ ಮುಖದ ಚರ್ಮ ಮೃದುವಾಗುತ್ತದೆ.

ಮೊಸರು ಹಾಗೂ ಪರಂಗಿ ಹಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿ ತಲೆ ಕೂದಲಿನ ಬುಡಕ್ಕೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ. ಅಲ್ಲದೆ, ಕೂದಲೂ ಸಹ ಸೊಂಪಾಗಿ ಬೆಳೆಯುತ್ತದೆ.

ಕಪ್ಪು ಚಹಾವನ್ನು ನೀರು ಹಾಕಿ ಕುದಿಸಿ ನಂತರ ಅದನ್ನು ಸೋಸಿ, ಅದರಲ್ಲಿ ಬರುವ ತೊಗಡನ್ನು ತೆಗೆದುಕೊಂಡು ಪರಂಗಿ ಹಣ್ಣನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮುಖದಲ್ಲಿನ ಜಿಡ್ಡು ನಿವಾರಣೆಯಾಗುತ್ತದೆ.

ಪರಂಗಿ ಹಣ್ಣಿನ ಬೀಜ ಹಾಗೂ ಸ್ವಲ್ಪ ಪರಂಗಿ ಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿ, ಅದಕ್ಕೆ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಹೊಳಪು ಬರುತ್ತದೆ.
-ಮಂಜುಳ.ವಿ.ಎನ್

Write A Comment