ರಾಷ್ಟ್ರೀಯ

ಮುಲಾಯಂ ವಿರುದ್ಧ ದೂರಿದ್ದ ಐಪಿಎಸ್‌ ಅಧಿಕಾರಿ ಠಾಕೂರ್‌ ಮೇಲೆ ರೇಪ್‌ ಕೇಸ್‌ ದಾಖಲು

Pinterest LinkedIn Tumblr

Amitabh-Thakur

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ವಿರುದ್ಧ ದೂರಿದ್ದ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಹಾಗೂ ಅವರ ಪತ್ನಿ ನೂತನ್‌ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಶನಿವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ.

‘ಠಾಕೂರ್‌ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಅದಕ್ಕೆ ಅವರ ಪತ್ನಿ ಸಹಕರಿಸಿದ್ದರು ಎಂದು ಗಾಜಿಯಾಬಾದ್‌ ಮೂಲದ ಮಹಿಳೆ ಕಳೆದ ವರ್ಷ ನೀಡಿದ್ದ ದೂರಿನ ಮೇರೆಗೆ ದಂಪತಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ,’ ಎಂದು ಗೋಮತಿನಗರ್‌ ಪೊಲೀಸ್‌ ಠಾಣಾಧಿಕಾರಿ ಎಸ್‌.ಎಂ ಅಬ್ಬಾಸ್‌ ಹೇಳಿದ್ದಾರೆ.

ಲಖನೌನ ಅಂದಿನ ಎಸ್‌ಎಸ್‌ಪಿ ಯಶಸ್ವಿ ಯಾದವ್‌ ಅವರ ಬಳಿ ಮಹಿಳೆ ದೂರು ದಾಖಲಿಸಿದ್ದರು. ಆದರೆ, ಈವರೆಗೆ ಪ್ರಕರಣ ಸಂಬಂಧ ಎಫ್ಐಆರ್‌ ದಾಖಲಿಸಿರಲಿಲ್ಲ.

ಈ ಘಟನೆಗೂ ಮೊದಲು , ಮುಲಾಯಂ ಸಿಂಗ್ ಯಾದವ್ ಅವರು ತಮಗೆ ಜೀವ ಬೆದರಿಕೆಯೊಡ್ಡಿರುವುದಾಗಿ ಠಾಕೂರ್ ದೂರು ನೀಡಿದ್ದರು. ಆದರೆ, ಮೇಲ್ನೋಟಕ್ಕೆ ಮುಲಾಯಂ ಸಿಂಗ್‌ ಯಾದವ್‌ ಅವರ ಯಾವ ತಪ್ಪು ಕಂಡು ಬರುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾವು ಹಾಗೂ ತಮ್ಮ ಪತ್ನಿ ನೂತನ್ ಠಾಕೂರ್ ಅವರು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಗಣಿ ಮಾಫಿಯಾ ಸಂಬಂಧ ಗಣಿ ಸಚಿವ ಗಾಯತ್ರಿ ಪ್ರಜಾಪ್ರತಿ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೇ ಈ ಬೆದರಿಗೆ ಕಾರಣ ಎಂದು ಠಾಕೂರ್‌ ತಿಳಿಸಿದ್ದಾರೆ. ದೂರವಾಣಿಯಲ್ಲಿ ಮುಲಾಯಂ ಅಧಿಕಾರಿಯನ್ನು ಬೆದರಿಸುತ್ತಿರುವ ಸಂಭಾಷಣೆಯ ಧ್ವನಿಮುದ್ರಿಕೆ ಬಹಿರಂಗವಾಗಿದ್ದು, ದೊಡ್ಡ ವಿವಾದ ಸೃಷ್ಟಿಯಾಗಿದೆ.

Write A Comment