ಪುಣೆ: ಕಳ್ಳನೊಬ್ಬ ಗಣಪತಿ ದೇವಾಲಯದಲ್ಲಿ 50 ಲಕ್ಷ ರೂ. ಬೆಲೆ ಬಾಳುವ ಒಡವೆಗಳನ್ನು ಕದಿಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪುಣೆಯ ಕೇಂದ್ರ ಭಾಗದಲ್ಲಿರುವ ಗಣಪತಿ ದೇವಾಲಯದಲ್ಲಿ ಬುಧವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಈ ಕಳ್ಳತನದ ಘಟನೆ ನಡೆದಿದೆ. ಕಿಟಕಿ ಗಾಜನ್ನು ಹೊಡೆದು ಒಳ ಪ್ರವೇಶಿಸಿರುವ ಕಳ್ಳ, ಎರಡು ಬಂಗಾರದ ನೆಕ್ಲೇಸ್, ಎರಡು ಚೈನುಗಳು, ಒಂದು ವಜ್ರದ ನೆಕ್ಲೇಸ್ ಹಾಗೂ ಒಂದು ಮಂಗಳ ಸೂತ್ರವನ್ನು ಕಳವು ಮಾಡಿದ್ದು, ಇವುಗಳ ಮೌಲ್ಯ 50 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.
ದೇವಾಲಯದ ಕಾವಲುಗಾರ ಕಳೆದ ಒಂದು ತಿಂಗಳಿನಿಂದ ರಜೆಯ ಮೇಲಿದ್ದು, ಬದಲಿ ಕಾವಲುಗಾರನನ್ನು ನೇಮಿಸಿಕೊಳ್ಳಲು ದೇವಾಲಯದ ಆಡಳಿತ ಮಂಡಳಿ ಮೀನಾಮೇಷ ಎಣಿಸಿದ್ದೇ ಕಳ್ಳತನಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಕಳ್ಳತನದ ದೃಶ್ಯಗಳೆಲ್ಲವೂ ದೇವಾಲಯದಲ್ಲಿ ಅಳವಡಿಸಿದ್ದ ಸಿಸಿ ಟಿವಿ ಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಕಳ್ಳನ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.