ಫಿಲಿಬಿತ್: ತನ್ನನ್ನು ಪದೇ ಪದೇ ಚುಡಾಯಿಸುತ್ತಿದ್ದ ಯುವಕನಿಗೆ ಶಾಲಾ ವಿದ್ಯಾರ್ಥಿನಿಯೊಬ್ಬಳು ಸರಿಯಾಗಿ ಬುದ್ದಿ ಕಲಿಸಿದ್ದಾಳೆ. ಆತನ ಕೆನ್ನೆಗೆ ಬಾರಿಸಿರುವುದಲ್ಲದೇ ಕಾಲಲ್ಲಿದ್ದದ್ದನ್ನು ಕೈಗೆ ತೆಗೆದುಕೊಂಡು ಅದರ ರುಚಿಯನ್ನೂ ತೋರಿಸಿದ್ದಾಳೆ.
ಉತ್ತರ ಪ್ರದೇಶದ ಫಿಲಿಬಿತ್ ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಮಿಂಚಿನಂತೆ ಹರಿದಾಡುತ್ತಿದೆಯಲ್ಲದೇ ಹುಡುಗಿಯ ದಿಟ್ಟ ನಡೆಗೆ ಎಲ್ಲರೂ ಶಹಬ್ಬಾಸ್ ಎನ್ನುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿಯೇ ಯುವಕನಿಗೆ ವಿದ್ಯಾರ್ಥಿನಿ ತಪರಾಕಿ ನೀಡಿದ್ಧಾಳೆಂದು ಹೇಳಲಾಗಿದ್ದು, ಈ ವೇಳೆ ಹಾಜರಿದ್ದ ಪೊಲೀಸ್ ಅಧಿಕಾರಿಯೂ ವಿದ್ಯಾರ್ಥಿನಿಗೆ ಹುರಿದುಂಬಿಸಿದ್ದಾರೆ.
ಮೊದಲು ಆತನ ಕೆನ್ನೆಗೆ ಬಾರಿಸಿರುವ ವಿದ್ಯಾರ್ಥಿನಿ ಮುಖಕ್ಕೆ ಪಂಚ್ ಸಹ ಮಾಡಿದ್ದಾಳೆ. ಆತನ ಕೈ ಹಿಡಿದು ತಿರುಗಿಸಿದ್ದಾಳಲ್ಲದೇ ಕಾಲಿನಲ್ಲಿದ್ದ ಶೂ ತೆಗೆದುಕೊಂಡು ಮುಖ ಮೂತಿ ನೋಡದೆ ಬಾರಿಸಿದ್ದಾಳೆ. ಕಡೆಗೆ ಯುವಕ ವಿದ್ಯಾರ್ಥಿನಿಯ ಕಾಲು ಹಿಡಿದು ಕ್ಷಮೆ ಕೇಳಿದ ಬಳಿಕವಷ್ಟೇ ಆಕೆಯ ಕೋಪ ಶಮನವಾಗಿದೆ. ಇಂತಹ ದಿಟ್ಟ ನಡೆ ತೋರಿಸಿದಾಗಲಷ್ಟೇ ವಿಕೃತರು ತಮ್ಮ ನಡವಳಿಕೆ ತಿದ್ದಿಕೊಳ್ಳುವುದು ಸಾಧ್ಯವಾಗಬಹುದೇನೋ ಕಾದು ನೋಡಬೇಕಿದೆ.