ರಾಷ್ಟ್ರೀಯ

ಪ್ರಚಾರಕ್ಕೆ ಸರ್ಕಾರದ ಹಣದ ದುರುಪಯೋಗ: ಆಪ್ ವಿರುದ್ಧ ಪ್ರತಿಪಕ್ಷಗಳ ಗುದ್ದು

Pinterest LinkedIn Tumblr

delhiಕೇವಲ ಮಾಹಿತಿ ಮತ್ತು ಪ್ರಚಾರಕ್ಕೆ 526 ಕೋಟಿ ವ್ಯಯಿಸಿರುವ ದೆಹಲಿ ಸರ್ಕಾರ
ನವದೆಹಲಿ: ಪ್ರಚಾರಕ್ಕೆಂದೇ ಸರ್ಕಾರದ ನೂರಾರು ಕೋಟಿ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪ ದೆಹಲಿ ಸರ್ಕಾದರ ವಿರುದ್ಧ ಕೇಳಿಬರುತ್ತಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಪಕ್ಷದ ಮತ್ತು ವೈಯುಕ್ತಿಕ ಪ್ರಚಾರಗಳಿಗಾಗಿ ದೆಹಲಿ ಸರ್ಕಾರ ಸುಮಾರು 526 ಕೋಟಿ ವ್ಯಯಿಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಕಳೆದ ಒಂದೇ ವರ್ಷದಲ್ಲಿ ದೆಹಲಿ ಸರ್ಕಾರ ಮಾಹಿತಿ ಮತ್ತು ಪ್ರಚಾರಕ್ಕಾಗಿ ಸುಮಾರು 24 ಕೋಟಿ ರುಪಾಯಿ ಖರ್ಚು ಮಾಡಿದೆ. ವಿವಿಧ ಯೋಜನೆಗಳ ಹೆಸರಲ್ಲಿ ಆಪ್ ಸರ್ಕಾರ ತನ್ನ ಪಕ್ಷದ ಮತ್ತು ಮುಖಂಡರ ವೈಯುಕ್ತಿಕ ಪ್ರಚಾರಕ್ಕೆ ಸರ್ಕಾರದ ಹಣವನ್ನು ಖರ್ಚು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಅಲ್ಲದೆ ದೆಹಲಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಸಿಹಿದ್ದು, ಈ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೂ ದೂರು ಸಲ್ಲಿಸುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇನ್ನು ಇದೇ ವಿಚಾರವಾಗಿ ಆಪ್ ನ ಮಾಜಿ ಮುಖಂಡ ಪ್ರಶಾಂತ್ ಭೂಷಣ್ ಕೂಡ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಎಫ್ ಎಂ ರೇಡಿಯೋದಲ್ಲಿ ಪ್ರಸಾರವಾಗುವ ಒಂದೇ ಒಂದು ಜಾಹಿರಾತಿಗೆ ಸರ್ಕಾರ ಕೋಟ್ಯಂತರ ರುಪಾಯಿಗಳನ್ನು ವ್ಯಯಿಸಿದೆ. ಇದು ನ್ಯಾಯಾಂಗ ನಿಂದನೆಯಾಗಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

“ಟಿವಿ ಮತ್ತು ರೇಡಿಯೋಗಳಿಗಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊರತಂದಿರುವ ಜಾಹಿರಾತು ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಉಲ್ಲಂಘನೆಯಾಗಿದ್ದು, ಶೀಘ್ರದಲ್ಲಿ ಈ ಬಗ್ಗೆ ಘನ ನ್ಯಾಯಾಲಯ ಕ್ರಮ ಕೈಗೊಳ್ಳಲಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಇತ್ತೀಚೆಗೆ ರೇಡಿಯೋ ಮತ್ತು ಟಿವಿಗಳಿಗಾಗಿ ದೆಹಲಿ ಸರ್ಕಾರ ಹೊರತಂದಿರುವ ಸುಮಾರು 70 ಸೆಕೆಂಡುಗಳ ನೂತನ ಜಾಹಿರಾತಿನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವ ಸರ್ಕಾರದ ಯೋಜನೆಗಳನ್ನು ವಿವರಿಸಲಾಗಿದೆ. ಅಲ್ಲದೆ ಶಿಕ್ಷಣಕ್ಕಾಗಿ ಸರ್ಕಾರ ಮೀಸಲಿಡುತ್ತಿದ್ದ ಬಜೆಟ್ ಅನ್ನು ದ್ವಿಗುಣಗೊಳಿಸಲಾಗಿದೆ. ಆರೋಗ್ಯ ಸಂಬಂಧಿತ ಯೋಜನೆಗಳ ಬಜೆಟ್ ಶೇ.45ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಕೇಜ್ರಿವಾಲ್ ಜಾಹಿರಾತಿನಲ್ಲಿ ಹೇಳಿಕೊಂಡಿದ್ದಾರೆ. ಇದೇ ಜಾಹಿರಾತು ಇದೀಗ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಅಧಿಕಾರಿಗಳ ನೇಮಕಾತಿ ವಿವಾದಕ್ಕೀಡಾಗಿರುವ ದೆಹಲಿ ಸರ್ಕಾರಕ್ಕೆ ಇದೀಗ ಮತ್ತೊಂದು ತಲೆನೋವು ಶುರುವಾಗಿದೆ.

ಈ ಹಿಂದೆಯಷ್ಟೇ ಸುಪ್ರೀಂ ಕೋರ್ಟ್ ಸರ್ಕಾರಿ ಜಾಹಿರಾತಿನಲ್ಲಿ ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳು, ರಾಜಕಾರಣಿಗಳ ಭಾವಚಿತ್ರಗಳನ್ನು ನಿಷೇಧಿಸಿತ್ತು. ಕೇವಲ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಭಾವಚಿತ್ರಗಳಿಗೆ ಮಾತ್ರ ಅನುಮತಿ ನೀಡಿತ್ತು. ಆದರೆ ನ್ಯಾಯಾಲಯದ ಆದೇಶವನ್ನೂ ಮೀರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ತಮ್ಮ ಯೋಜನೆಗಳನ್ನು ಪ್ರಚಾರ ಮಾಡುವ ಭರದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎನ್ನುವುದು ಪ್ರತಿಪಕ್ಷಗಳ ಆರೋಪವಾಗಿದೆ.

Write A Comment