ರಾಷ್ಟ್ರೀಯ

ದೇಶದ ಅತಿ ಶ್ರೀಮಂತ ಚಿನ್ನಾಭರಣ ಉದ್ಯಮಿ ಪಟ್ಟಿಯಲ್ಲಿ ಕಲ್ಯಾಣ್ ಜ್ಯೂವೆಲರ್ಸ್‌ನ ಕಲ್ಯಾಣರಾಮನ್ ಮೊದಲ ಸ್ಥಾನ

Pinterest LinkedIn Tumblr

kalyan raman

ಸಿಂಗಾಪುರ: ದೇಶದಲ್ಲಿರುವ ಅತಿ ಶ್ರೀಮಂತ ಚಿನ್ನಾಭರಣ ಉದ್ಯಮಿಗಳ ಪಟ್ಟಿಯಲ್ಲಿ ಕಲ್ಯಾಣ್ ಜ್ಯೂವೆಲರ್ಸ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್.ಕಲ್ಯಾಣರಾಮನ್ ಅವರು ಮೊದಲ ಸ್ಥಾನ ಪಡೆದಿರುವುದಾಗಿ ವೆಲ್ತ್‌ಎಕ್ಸ್.ಕಾಮ್ ಪ್ರಕಟಿಸಿರುವ ‘ವೆಲ್ತ್-10’ ವರದಿ ಹೇಳಿದೆ.

ಭಾರತದಲ್ಲಿರುವ ಅತಿ ಶ್ರೀಮಂತ ಚಿನ್ನಾಭರಣ ವ್ಯಾಪಾರಿಗಳ ಪಟ್ಟಿಯಲ್ಲಿ ಸುಮಾರು 8320 ಕೋಟಿ ರೂ. ಆಸ್ತಿ ಹೊಂದಿರುವ ಕಲ್ಯಾಣರಾಮನ್ ಮೊದಲ ಸ್ಥಾನದಲ್ಲಿದ್ದಾರೆ. 1993ರಲ್ಲಿ ಕೇರಳದ ತ್ರಿಶೂರ್‌ನಲ್ಲಿ 1 ಲಕ್ಷ ಡಾಲರ್ ಬಂಡವಾಳದೊಂದಿಗೆ ಇವರು ಆರಂಭಿಸಿದ ‘ಕಲ್ಯಾಣ್ ಜ್ಯೂವೆಲರ್ಸ್‌’ ಶೋರೂಂಗಳು ಇಂದು ದಕ್ಷಿಣ ಭಾರತದಲ್ಲಿ ಜನಜನಿತವಾಗಿವೆ. 32 ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ.

110 ಕೋಟಿ ಡಾಲರ್ ಆದಾಯದೊಂದಿಗೆ ‘ಫೈರ್‌ಸ್ಟಾರ್ ಡೈಮಂಡ್ಸ್ ‘ ಕಂಪನಿಯ ಮಾಲೀಕ ನೀರವ್ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ. 2007ರಲ್ಲಿ ಈ ಕಂಪನಿಯು ನ್ಯೂಯಾರ್ಕ್ ಮೂಲದ ‘ಸ್ಯಾಂಡ್‌ಬರ್ಗ್ ಅಂಡ್ ಸಿಕೋರ‌್ಸಿ’್ಕಯನ್ನು ಸ್ವಾಧೀನಪಡಿಸಿಕೊಂಡಿತ್ತು. ಇನ್ನು 100 ಕೋಟಿ ಡಾಲರ್ ಆಸ್ತಿ ಹೊಂದಿರುವ ‘ಮಲಬಾರ್ ಗೋಲ್ಡ್ ಅಂಡ್ ಡೈಮಂಡ್’ ಮಳಿಗೆಯ ಮಾಲೀಕ ಎಂ.ಪಿ.ಅಹಮದ್ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

ಭೀಮಾ ಜ್ಯೂವೆಲರ್ಸ್‌ನ ಬಿ.ಗೋವಿಂದನ್ ( 620 ದಶಲಕ್ಷ ಡಾಲರ್), ಕಿರಣ್ ಜೆಮ್ಸ್‌ನ ವಲ್ಲಭಭಾಯಿ ಎಸ್.ಪಟೇಲ್ (590 ದಶಲಕ್ಷ ಡಾಲರ್), ಲಕ್ಷ್ಮಿ ಡೈಮಂಡ್‌ನ ವಸಂತ ಗಜೇರಾ (580 ದಶಲಕ್ಷ ಡಾಲರ್), ಧರ್ಮಾನಂದ ಡೈಮಂಡ್ಸ್‌ನ ಲಾಲ್ಜಿಭಾಯ್ ಪಟೇಲ್ (480 ದಶಲಕ್ಷ ಡಾಲರ್), ಕಿರಣ್ ಜೆಮ್ಸ್‌ನ ಬಾಬುಭಾಯ್ ಲಖಾನಿ (470 ದಶಲಕ್ಷ ಡಾಲರ್), ಕಿರಣ್ ಜೇಮ್ಸ್‌ನ ಮಾವ್ಜಿ ಭಾಯ್ ಪಟೇಲ್ (410 ದಶಲಕ್ಷ ಡಾಲರ್) ಮತ್ತು ರಾಜೇಶ್ ಎಕ್ಸ್‌ಪೋರ್ಟ್‌ನ ರಾಜೇಶ್ ಮೆಹ್ತಾ (310 ದಶಲಕ್ಷ ಡಾಲರ್) ಪಟ್ಟಿಯಲ್ಲಿ ಸ್ಥಾನಪಡೆದಿರುವ ಇತರ ಉದ್ಯಮಿಗಳು.

Write A Comment