ರಾಷ್ಟ್ರೀಯ

ಇಂಟರ್ನಿಗೆ ಮಾಸಿಕ ರು.4.5 ಲಕ್ಷ ಸ್ಟೈಫಂಡ್; ಉಳಿದಿದ್ದೆಲ್ಲ ಗುಪ್ತ್ ಗುಪ್ತ್

Pinterest LinkedIn Tumblr

apple-incಪ್ರಶಿಕ್ಷಣಾರ್ಥಿಗಳಿಗೆ ಆ್ಯಪಲ್ ಭರ್ಜರಿ ಕೊಡುಗೆ, ಕಂಪನಿಯ ಮಾಹಿತಿ ಹೊರಗೆ ಹೇಳುವಂತಿಲ್ಲ
ಪ್ರಶಿಕ್ಷಣಾರ್ಥಿಗಳಿಗೆ ಆ್ಯಪಲ್ ಭರ್ಜರಿ ಕೊಡುಗೆ, ಕಂಪನಿಯ ಮಾಹಿತಿ ಹೊರಗೆ ಹೇಳುವಂತಿಲ್ಲ, ಇಂಟರ್ನಿಗಳಿಗೆ ಭಾರಿ ವೇತನ, ಉಚಿತ ವಸತಿ

ನವದೆಹಲಿ: ಈ ಸುದ್ದಿಯನ್ನು ಓದಿದರೆ ನಿಮಗೆ, “ಉದ್ಯೋಗಕ್ಕೆ ಸೇರಿ ಸಂಬಳ ಪಡೆಯುವ ಬದಲು ಜೀವನಪರ್ಯಂತ ಇಂಟರ್ನಿಯಾಗಿಯೇ ಇರಬಹುದಲ್ಲಾ” ಎಂದನಿಸಬಹುದು.

ಇಲ್ಲಿ ಇಂಟರ್ನಿ (ಪ್ರಶಿಕ್ಷಣಾರ್ಥಿ)ಗಳಿಗೆ ತಿಂಗಳಿಗೆ ಸಿಗುವ ಸ್ಟೈಪಂಡ್ ಮೊತ್ತವನ್ನು ಕೇಳಿದರೆ ಯಾರಾದರೂ ದಂಗಾಗ ಬಹುದು. ಆ ಮೊತ್ತ ಎಷ್ಟು ಗೊತ್ತಾ? ಬರೋಬ್ಬರಿ ರು.4,46,000 (ಅಂದರೆ 7  ಸಾವಿರ ಡಾಲರ್)! ಅಬ್ಬಾ, ಅದ್ಯಾವ ಕಂಪನಿ, ನಾನೀಗಲೇ ಅದಕ್ಕೊಂದು ಅರ್ಜಿ ಹಾಕಿಯೇ ಬಿಡುತ್ತೇನೆ ಎಂದು ಹೇಳಬೇಡಿ. ಏಕೆಂದರೆ, ಅದು ಅಂತಿಂಥಾ ಕಂಪನಿಯಲ್ಲ. ಅಮೆರಿಕದ  ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಆ್ಯಪಲ್.

ಹೌದು. ವಿಶ್ವದ ಬೆಸ್ಟ್ ತಂತ್ರಜ್ಞಾನ ಕಂಪನಿಗಳಲ್ಲೊಂದಾದ ಆ್ಯಪಲ್‍ನಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಮಾಸಿಕ ರು.4,46,000ದಷ್ಟು ವೇತನ ನೀಡಲಾಗುತ್ತದಂತೆ. ಹೀಗೆಂದು ಅಲ್ಲೇ ಇಂಟರ್ನಿಯಾಗಿದ್ದ  ಬ್ರಾಡ್ ಎಂಬ ಯುವಕ ತಿಳಿಸಿದ್ದಾನೆ ಎಂದು ಸಿಎನ್‍ಎನ್ ಐಬಿಎನ್ ವರದಿ ಮಾಡಿದೆ.

ಒಂದು ಮಾತೂ ಹೊರಹೋಗುವಂತಿಲ್ಲ!

ಇಷ್ಟೆಲ್ಲ ವೇತನ, ಸೌಲಭ್ಯವನ್ನು ನೀಡುವ ಕಂಪನಿಯು ಇಂಟರ್ನಿಗಳಿಗೆ ನೀಡುವ ಸ್ಪಷ್ಟ ಆದೇಶವೊಂದೇ. ಅದೆಂದರೆ `ಎಲ್ಲವೂ ರಹಸ್ಯವಾಗಿರಬೇಕು’ ಎಂಬುದು. ಅಂದರೆ, ಕಂಪನಿಯೊಳಗಿನ  ಯಾವುದೇ ವಿಚಾರ ಹೊರ ಹೋಗಬಾರದು, ಪಿಸುಮಾತು ಕೂಡ. ಕಂಪನಿಯೊಳಗಿನ ನಿಮ್ಮ ಸಾಧನೆಯನ್ನು ಹೇಳಿಕೊಳ್ಳುವುದು, ಕ್ಯಾಂಪಸ್‍ನೊಳಗೆ ಫೋಟೋ ತೆಗೆದು ಸಾಮಾಜಿಕ ತಾಣದಲ್ಲಿ  ಅಪ್‍ಲೋಡ್ ಮಾಡುವುದು ಇತ್ಯಾದಿಗಳಿಗೆ ಸುತಾರಾಂ ಅವಕಾಶವಿಲ್ಲ. ಇಲ್ಲಿ ಆ್ಯಪಲ್ ಯೋಜನೆಗಳಷ್ಟೇ ಆ ಸಂಸ್ಥೆಯ ಐಡೆಂಟಿಟಿಯೂ ಗುಪ್ತವಾಗಿರುತ್ತದೆ.

ಆ್ಯಪಲ್ ಸಂಸ್ಥೆಯ ಧ್ಯೇಯವೇ `ಸರ್‍ಪ್ರೈಸ್ ಆ್ಯಂಡ್ ಡಿಲೈಟ್’. ಹೀಗಾಗಿ ಇಲ್ಲಿ ಎಲ್ಲವೂ ಗುಪ್ತ್ ಗುಪ್ತ್. ಈ ಗೋಪ್ಯತೆ ಎಲ್ಲಿಯವರೆಗೆಂದರೆ, ಇಲ್ಲಿನ ನೌಕರರಿಗೆ ತಾವು ಯಾವ ಉತ್ಪನ್ನ  ಸಿದ್ಧಪಡಿಸುತ್ತಿದ್ದೇವೆ ಎಂಬುವುದೇ ಗೊತ್ತಿರುವುದಿಲ್ಲ ಎನ್ನುತ್ತಾನೆ ಬ್ರಾಡ್. ಆದರೆ ಇಂಟರ್ನ್‍ಶಿಪ್ ಅವಧಿ ಮುಗಿದ ಬಳಿಕ ಏನಾಗುತ್ತದೆ ಎಂಬುದೇ ಇಲ್ಲಿ ಯಕ್ಷಪ್ರಶ್ನೆ. ಬ್ರಾಡ್ ಹೇಳುವ ಪ್ರಕಾರ.  ತರಬೇತಿ ಅವಧಿಯಲ್ಲಿ ಕ್ರಿಯಾಶೀಲತೆ ತೋರಿದ, ಉತ್ತಮ ಸಾಧನೆ ಮಾಡಿದ ಇಂಟರ್ನಿಗಳನ್ನು ಕಂಪನಿಯು ಪೂರ್ಣಕಾಲಿಕ ನೌಕರರನ್ನಾಗಿ ನೇಮಕ ಮಾಡುತ್ತದಂತೆ.

ಆಯ್ಕೆ ಪ್ರಕ್ರಿಯೆ ವಿಭಿನ್ನ ಆ್ಯಪಲ್‍ನಲ್ಲಿ ಅಷ್ಟೊಂದು ಸ್ಟೈಪಂಡ್ ಕೊಡುತ್ತಾರೇನೋ ನಿಜ. ಆದರೆ, ಇಲ್ಲಿ ಇಂಟರ್ನಿಗಳ ಆಯ್ಕೆಗೆ ಕೆಲವೊಂದು ಮಾನದಂಡಗಳಿವೆ. ಗೂಗಲ್, ಫೇಸ್‍ಬುಕ್ ಗಳಿಗೆ ಹೋಲಿಸಿದರೆ ಆ್ಯಪಲ್‍ನ ಆಯ್ಕೆ ಪ್ರಕ್ರಿಯೆ ವಿಭಿನ್ನ. ಇತರೆ ಕಂಪನಿಗಳಲ್ಲಿ ಎಲ್ಲ ಇಂಟರ್ನಿಗಳಿಗೂ ಸಾಮಾನ್ಯ ಸಂದರ್ಶನ ನಡೆಸಲಾಗುತ್ತದೆ. ಬಳಿಕ ಅವರನ್ನು ಅಂತಹ ಕೆಲಸ ಮಾಡುವ  ಗುಂಪುಗಳಲ್ಲಿ ಸೇರಿಸಲಾಗುತ್ತದೆ. ಹಾಗಾಗಿ ಆ್ಯಪಲ್ ನ ಇಂಟರ್ನಿಯಾಗಲೂ ನಿಮಗೆ ಅರ್ಹತೆ ಬೇಕು.

ವಸತಿಯೂ ಉಚಿತ

ಭಾರಿ ವೇತನದ ಜತೆಗೆ ಓವರ್‍ಟೈಂ ಕೆಲಸಕ್ಕೂ ಹೆಚ್ಚುವರಿ ಹಣ ಪಾವತಿಸಲಾಗುತ್ತದೆ. ಅಷ್ಟಕ್ಕೇ ನಿಲ್ಲದೆ, ಕಂಪನಿಯು ತನ್ನ ಇಂಟರ್ನಿಗಳಿಗೆ ಬೇ ಏರಿಯಾದಲ್ಲಿ ಉಚಿತ ವಸತಿ ವ್ಯವಸ್ಥೆಯನ್ನೂ  ಕಲ್ಪಿಸುತ್ತದೆ. ಅಲ್ಲಿ ನೀವು ಇತರೆ ಇಂಟರ್ನಿಗಳ ಜತೆ ಕೊಠಡಿ ಹಂಚಿಕೊಳ್ಳಬೇಕು. ನಿಮಗೆ ಇತರರೊಂದಿಗೆ ವಾಸಿಸಲು ಇಷ್ಟವಿಲ್ಲ ಎಂದಾದಲ್ಲಿ, ಕಂಪನಿಯೇ ನಿಮಗೆ ತಿಂಗಳ  ಬಾಡಿಗೆಗಾಗಿ ರು.60 ಸಾವಿರ(1 ಸಾವಿರ ಡಾಲರ್) ನೀಡುತ್ತದೆ. ಅಷ್ಟೇ ಅಲ್ಲ, ಇಂಟರ್ನಿಗಳು ಬೇ ಏರಿಯಾ ಬಿಟ್ಟು ಬೇರೆ ಕಡೆ ವಾಸಿಸಲು ಬಯಸಿದರೆ, ಅವರಿಗೆ ಪ್ರಯಾಣ ವೆಚ್ಚ ಸೇರಿದಂತೆ ತಿಂಗಳಿಗೆ ರು2,10,761ಯನ್ನೂ ಪಾವತಿಸುತ್ತದೆ. ಇದಕ್ಕಿಂತ ಹೆಚ್ಚಿನ ಅದೃಷ್ಟ ಬೇಕೇ?

Write A Comment