ರಾಷ್ಟ್ರೀಯ

ಲಲಿತ್ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಕಾಂಗ್ರೆಸ್ ಜೋಳಿಗೆಯಲ್ಲೂ ಬಿತ್ತು ಬಾಂಬ್

Pinterest LinkedIn Tumblr

laliನವದೆಹಲಿ: ಲಲಿತ್ ಮೋದಿ ವಿವಾದದಲ್ಲಿ ಹೊಸ ನಾಟಕೀಯ ತಿರುವು ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷ ಸಹ ಈಗ ಅದೇ ಉರುಳಲ್ಲಿ ಸಿಕ್ಕಿಹಾಕಿಕೊಂಡಂತಾಗಿದೆ. ಲಲಿತ್ ಸಂಬಂಧವೀಗ ಕೈಗೂ ಅಂಟಿಕೊಂಡಿದೆ.
ತಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಅವರನ್ನು ಕಳೆದ ವರ್ಷ ಭೇಟಿಯಾಗಿದ್ದೆ, ಈಗಲೂ ಸಹ ಅವರು ಆಗಾಗ ನನಗೆ ಫೋನ್ ಕರೆ ಮಾಡುತ್ತಿರುತ್ತಾರೆ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.

ದಿನಕ್ಕೊಂದು ವಿಚಾರವನ್ನು ಟ್ವೀಟ್ ಮಾಡುವ ಮೂಲಕ ಲಂಡನ್‌ನಲ್ಲಿ ಕುಳಿತುಕೊಂಡೇ ಭಾರತದ ರಾಜಕೀಯದಲ್ಲಿ ಕೋಲಾಹಲವನ್ನು ಎಬ್ಬಿಸುತ್ತಿದ್ದಾರೆ. ಹೀಗಾಗಿ ಲಲಿತ್ ವಿವಾದಕ್ಕೆ ಸಂಬಂಧಿಸಿದಂತೆ ಇಷ್ಟು ದಿನ ಬಿಜೆಪಿಯ ಮೇಲೇರಿ ಹೋಗಿದ್ದ ಕಾಂಗ್ರೆಸ್ ಇನ್ನು ಮುಂದೆ ಈ ಕುರಿತು ಯೋಚಿಸುವಂತಾಗಿದೆ.

“ಗಾಂಧಿ ಕುಟುಂಬವನ್ನು ಲಂಡನ್‌ನಲ್ಲಿ ಭೇಟಿಯಾಗಿದ್ದು ಸಂತೋಷವಾಗುತ್ತಿದೆ. ರಾಬರ್ಟ್ ಮತ್ತು ಪ್ರಿಯಾಂಕಾ  ರೆಸ್ಟೋರೆಂಟ್‌ನಲ್ಲಿ ಪ್ರತ್ಯೇಕವಾಗಿ ಭೇಟಿಯಾದರು. ವಾದ್ರಾ ಜತೆ ನನ್ನ ಫೋನ್ ನಂಬರ್ ಕೂಡ ಇದೆ. ಆಗಾಗ ಅವರಿಬ್ಬರು ನನ್ನ ಜತೆ ದೂರವಾಣಿ ಸಂಭಾಷಣೆ ಮಾಡುತ್ತಿರುತ್ತಾರೆ. ನನಗೆ ನೆನಪಿರುವ ಹಾಗೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿಯೇ ಈ ಭೇಟಿ ನಡೆದಿತ್ತು. ಆದರೆ ಇದು ಔಪಚಾರಿಕ ಭೇಟಿಯಾಗಿತ್ತಷ್ಟೇ”, ಎಂದು ಲಲಿತ್ ಟ್ವೀಟ್ ಹೇಳುತ್ತದೆ.

ಈ ಹೇಳಿಕೆ ನಿಶ್ಚಿತವಾಗಿ ಕಾಂಗ್ರೆಸ್ ನಿದ್ದೆಗೆಡಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, “ಲಲಿತ್ ಸುಳ್ಳು ಪ್ರಚಾರ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅವರದು ಬಾಲಿಶ ಹೇಳಿಕೆ. ಅವರಿಗೆ ನಾವು ಯಾವ ಸಹಾಯವನ್ನು ಮಾಡಿಲ್ಲ. ವಿಷಯಾಂತರ ಮಾಡುವ ಪ್ರಯತ್ನದಲ್ಲಿದ್ದಾರೆ ಲಲಿತ್. ಅಚಾನಕ್ ಆದ ಭೇಟಿಗೆ ಯಾವುದೇ ಮಹತ್ವವಿಲ್ಲ. ಇದು ಪೂರ್ವ ನಿರ್ಧರಿತ ಭೇಟಿಯಾಗಿರಲಿಲ್ಲ ಎಂದಿದ್ದಾರೆ. ಜತೆಗೆ ತಮ್ಮ ಸಚಿವರ ಜತೆಗಿನ ಲಲಿತ್ ಸಂಬಂಧದ ವಿವಾದದ ಬಗ್ಗೆ ಪ್ರಧಾನಿ ಮೌನ ಮುರಿಯಬೇಕು”, ಎಂದು ಆಗ್ರಹಿಸಿದ್ದಾರೆ.

ಲಲಿತ್ ಮೋದಿ ಲಂಡನ್‌ನಲ್ಲಿ ನೆಲೆಯೂರಲು ಸಹಾಯ ಮಾಡಿದ್ದಾರೆ ಎಂಬ ಕಾರಣಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದೆ. ತಾನು ಲಲಿತ್ ಅವರಿಗೆ ನೆರವು ನೀಡಿದ್ದಾಗಿ ರಾಜೇ ಈಗಾಗಲೆ ತಪ್ಪೊಪ್ಪಿಕೊಂಡಿದ್ದಾರೆ.

Write A Comment