ಕೋಲ್ಕತ್ತಾ, ಜೂ.23: ಅನಾಥ ಮಕ್ಕಳು, ಮಹಿಳೆಯರು ಹಾಗೂ ದೀನ ದುರ್ಬಲರ ಪಾಲನೆ ದೇವರೆಂದೇ ಖ್ಯಾತರಾಗಿದ್ದ ಮದರ್ ಥೆರೇಸಾ ಅವರು ಹುಟ್ಟುಹಾಕಿದ ಮಿಷನರಿ ಆಫ್ ಚಾರಿಟಿಯ ಮುಖ್ಯಸ್ಥೆ ಸಿಸ್ಟರ್ ನಿರ್ಮಲಾ (81) ವಿಧಿವಶರಾಗಿದ್ದಾರೆ.
ಈ ಮೊದಲು ಮದರ್ ಥೆರೇಸಾ ಅವರು ಚಾರಿಟಿ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಅವರ ನಿಧನದ ನಂತರ ಸಿಸ್ಟರ್ ನಿರ್ಮಲಾ ಅವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಥೆರೇಸಾ ಅವರ ಮಾರ್ಗದರ್ಶನದಲ್ಲಿಯೇ ನಿರ್ಮಲಾ ಅವರು ದೀನದಲಿತರ ಹಾಗೂ ಅನಾಥ ಮಕ್ಕಳ ಏಳ್ಗೆಗೆ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದರು.
ಇವರ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಕೇಳಿ ನನಗೆ ಬಹಳ ನೋವಾಗಿದೆ. ದೀನದಲಿತರ, ಅನಾಥ ಮಕ್ಕಳ ಪಾಲನೆ ಪೋಷಣೆಯಲ್ಲಿ ನಿರತರಾಗಿದ್ದ ಇವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ಸಮಾಜಸೇವಕಿಯನ್ನು ಕಳೆದುಕೊಂಡಂತಾಗಿದೆ ಎಂದು ಶೋಕಿಸಿದ್ದಾರೆ.ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದು, ನಾಗರಿಕರು ಸಾಗರೋಪಾದಿಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದರು.
