ರಾಷ್ಟ್ರೀಯ

ಆಹಾರ ಉತ್ಪನ್ನಗಳ ಕಲಬೆರಕೆ; ಹಾಲು, ನೀರು, ಖಾದ್ಯ ತೈಲ ಪ್ಯಾಕೆಟ್‌ಗಳ ತಪಾಸಣೆಗೆ ಕಟ್ಟುನಿಟ್ಟಿನ ಆದೇಶ

Pinterest LinkedIn Tumblr

super markets

ನವದೆಹಲಿ, ಜೂ.23: ಅನೇಕ ಆಹಾರ ಉತ್ಪನ್ನಗಳು ಕಲಬೆರಕೆಯಿಂದ ಕೂಡಿವೆ ಎಂಬ ಹುಯ್ಲು ದೇಶಾದ್ಯಂತ ಕೇಳಿಬರುತ್ತಿರುವ ಬೆನ್ನಲ್ಲೆ ಹಾಲು, ಪ್ಯಾಕ್ ಮಾಡಿದ ಕುಡಿಯುವ ನೀರು ಹಾಗೂ ಖಾದ್ಯ ತೈಲಗಳ ಪ್ಯಾಕೆಟ್‌ಗಳ ಮೇಲೆ ಕಟ್ಟೆಚ್ಚರದ ನಿಗಾ ವಹಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ತುರ್ತು ಸಂದೇಶ ರವಾನಿಸಿದೆ.

ಈ ಎಲ್ಲ ಪ್ಯಾಕ್ ಮಾಡಿದ ಉತ್ಪನ್ನಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು ಮತ್ತು ಕಟ್ಟುನಿಟ್ಟಿನ ಕಣ್ಗಾವಲು ಚಟುವಟಿಕೆಗಳನ್ನು ಹೆಚ್ಚಿಸಬೇಕು ಎಂದು ರಾಜ್ಯಗಳ ಆಹಾರ ಸುರಕ್ಷತಾ ಇಲಾಖೆ ಆಯುಕ್ತರುಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಈ ಉತ್ಪನ್ನಗಳ (ಹಾಲು, ನೀರು, ಎಣ್ಣೆ) ಪ್ಯಾಕೆಟ್‌ಗಳ ಹೆಚ್ಚಿನ ಮಾದರಿಯನ್ನು ಸಂಗ್ರಹಿಸಿ ಸಮಗ್ರ ತಪಾಸಣೆಗೆ ಪ್ರಯೋಗಾಲಯಗಳಿಗೆ ಕಳುಹಿಸಿಕೊಡಬೇಕು ಎಂದು ಆಯುಕ್ತರಿಗೆ ತಿಳಿಸಲಾಗಿದ್ದು, ಇತ್ತೀಚೆಗೆ ನಡೆದ ಆಹಾರ ಸುರಕ್ಷತೆ ಜಾರಿ ಸಂಸ್ಥೆ ಸಭೆಯಲ್ಲಿ ಈ ನಿರ್ದೇಶನಗಳನ್ನು ಕೊಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶೇಷವಾಗಿ ಜನ ಪ್ರತಿಕ್ಷಣ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು, ಹಾಲು ಹಾಗೂ ಖಾದ್ಯ ತೈಲಗಳ ಪ್ಯಾಕೆಟ್‌ಗಳನ್ನು ತೀವ್ರ ನಿಗಾ ವಹಿಸಿ ತಪಾಸಣೆಗೊಳಪಡಿಸುವುದು ಅಧಿಕಾರಿಗಳ ಜವಾಬ್ದಾರಿ ಮತ್ತು ಅದರಲ್ಲಿ ಯಾವುದೇ ರೀತಿಯ ಕುಂದುಂಟಾಗಬಾರದು ಎಂದು ಪ್ರಾಧಿಕಾರ ಖಡಕ್ ಆಗಿ ಹೇಳಿದೆ. ಸಂಸ್ಕರಿತ ನೂಡಲ್ಸ್, ಪಾಸ್ತ ಸೇರಿದಂತೆ ಹಲವು ಪ್ಯಾಕ್ಡ್ ಆಹಾರ ಪದಾರ್ಥಗಳು ಸೇವನೆಗೆ ಅನರ್ಹ ಎಂದು ಈಗಾಗಲೇ ಘೋಷಿಸಿದ್ದು, ಅವುಗಳನ್ನು ನಿಷೇಧಿಸಲಾಗಿದೆ. ಎಫ್‌ಎಸ್‌ಎಸ್‌ಎಐ ಈಗಾಗಲೇ ಇವುಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆದು ಸುಟ್ಟುಹಾಕಲು ಆದೇಶಿಸಿದೆ. ಅದರಂತೆ ಸಾವಿರಾರು ಟನ್ ಮ್ಯಾಗಿ, ಪಾಸ್ತಗಳನ್ನು ನಾಶ ಮಾಡಲಾಗುತ್ತಿದೆ.

ಈ ನಡುವೆಯೇ ಹಾಲು, ಕುಡಿಯುವ ನೀರು, ಖಾದ್ಯ ತೈಲಗಳ ಪ್ಯಾಕಿಂಗ್ ಮೇಲೆ ಕೆಂಗಣ್ಣು ಬೀರಿರುವ ಕೇಂದ್ರ ಆಹಾರ ಭದ್ರತೆ ನಿಯಂತ್ರಣ ಪ್ರಾಧಿಕಾರ, ಮದರ್ ಡೈರಿ ಸಿದ್ಧಪಡಿಸುತ್ತಿರುವ ಉತ್ಪನ್ನಗಳ ಪ್ಯಾಕೆಟ್‌ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವುಗಳಲ್ಲಿ ಸೋಪಿನ ಅಂಶ ಪತ್ತೆಯಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆದರೆ, ಮದರ್ ಡೈರಿ ಸಂಸ್ಥೆ ಈ ಮಾದರಿಯ ಪರೀಕ್ಷೆ ಫಲಿತಾಂಶವನ್ನು ನಿರಾಕರಿಸಿದ್ದು, ನಮ್ಮ ಉತ್ಪನ್ನಗಳಲ್ಲಿ ಆ ರೀತಿಯ ವಿಷಾಂಶ ಮಿಶ್ರಣ ಇಲ್ಲ ಎಂದು ವಾದಿಸಿದೆ. ಒಂದು ಮೂಲದ ಪ್ರಕಾರ, ನಿನ್ನೆ ನಡೆದ ಎಫ್‌ಎಸ್‌ಎಸ್‌ಎಐ ಸಭೆಯಲ್ಲಿ ಜನರ ದೈನಂದಿನ ಅತ್ಯಾವಶ್ಯಕ ವಸ್ತುಗಳನ್ನು ಪ್ಯಾಕ್ ಮಾಡುವ ಕಂಪೆನಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಜನ ವಿಷಮಿಶ್ರಿತ ಆಹಾರ ಪದಾರ್ಥಗಳನ್ನು ತಮಗರಿವಿಲ್ಲದೆ ಬಳಸುವಂತಾಗಿದೆ ಎಂದು ಸಭೆ ಕಳವಳ ವ್ಯಕ್ತಪಡಿಸಿದೆ. ಎಫ್‌ಎಸ್‌ಎಸ್‌ಎಐನ ಈ ನಿರ್ದೇಶನದಿಂದ ಹಾಲು, ಕುಡಿಯುವ ನೀರು ಹಾಗೂ ಖಾದ್ಯ ತೈಲಗಳ ಪ್ಯಾಕ್ ಮಾಡುವ ಕಂಪೆನಿಗಳಲ್ಲಿ ತಳಮಳ ಶುರುವಾಗಿದೆ.

Write A Comment