ಅಂತರಾಷ್ಟ್ರೀಯ

ಮುಂಬೈ ದಾಳಿಗಾಗಿ ಉಗ್ರ ಕಸಬ್ ಗೆ ಇಂಜಿನ್ ಮಾರಿದ್ದ ಪಾಕ್ ಕಂಪೆನಿ; ವಿಚಾರಣೆ ವೇಳೆ ಬಹಿರಂಗ

Pinterest LinkedIn Tumblr

mumbai attack

ರಾವಲ್ಪಿಂಡಿ, ಜೂ.18: ಉಗ್ರ ಅಜ್ಮಲ್‌ಕಸಬ್ ಸೇರಿದಂತೆ 2008ರ ಮುಂಬೈ ದಾಳಿ ಪ್ರಮುಖ ಆರೋಪಿಗಳಿಗೆ ಪಾಕಿಸ್ಥಾನದ ಕಂಪೆನಿಯೊಂದು ಜಪಾನಿನ 8 ಯಮಹಾ ಇಂಜಿನ್‌ಗಳನ್ನು ಮಾರಾಟ ಮಾಡಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಆ ಕಂಪೆನಿ ಜನರಲ್ ಮ್ಯಾನೇಜರ್ ವಿಚಾರಣೆ ವೇಳೆ ಹೊರಹಾಕಿದ್ದಾನೆ.

ಭಯೋತ್ಪಾದಕ ಹಿಂಸಾಚಾರ ನಡೆಸುತ್ತಿರುವ ಉಗ್ರರಿಗೆ ಅಗತ್ಯವಾದ ಹಣ, ಜನ, ಉಪಕರಣಗಳನ್ನು ಪೂರೈಕೆ ಮಾಡುತ್ತಿರುವ ಮುಂಬೈ ದಾಳಿ ರೂವಾರಿಗಳಿಗೆ ಈ ಇಂಜಿನ್‌ಗಳನ್ನು ಮಾರಾಟ ಮಾಡಲಾಗಿದ್ದು, ಇವರೆಲ್ಲ ಬೇರೆ ಬೇರೆ ಕಡೆ ಇದ್ದು, ಯಾರ ಗಮನಕ್ಕೂ ಬಾರದಂತೆ ನಿಗದಿತ ಸಮಯಕ್ಕೆ ಮುಂಬೈ ನಗರ ಪ್ರವೇಶಿಸಲು ಅನುಕೂಲ ಮಾಡಿಕೊಡಲಾಗಿತ್ತು.

ಈ ಘಟನೆ ಕುರಿತ ಇಬ್ಬರು ಪ್ರಮುಖ ಸಾಕ್ಷಿಗಳ ಪೈಕಿ ಒಬ್ಬನಾಗಿರುವ ಕಂಪೆನಿ ಮ್ಯಾನೇಜರ್‌ನ ವಿಚಾರಣೆ ಭಾರೀ ಬಿಗಿ ಭದ್ರತೆಯಲ್ಲಿ ರಾವಲ್ಪಿಂಡಿಯ ಆಡಿಯಾಲಾ ಕಾರಾಗೃಹದ ನ್ಯಾಯಾಲಯದಲ್ಲಿ ನಿನ್ನೆ ರಹಸ್ಯವಾಗಿ ನಡೆಯಿತು ಎಂದು ಮೂಲಗಳು ಹೇಳಿವೆ.

ಈ ಎಂಟೂ ಯಮಹಾ ಇಂಜಿನ್‌ಗಳೂ ಅಜ್ಮಲ್ ಕಸಬ್ ಸೇರಿದಂತೆ ಉಗ್ರರ ತಂಡದ ಸದಸ್ಯರು ಅಜ್ಞಾತವಾಗಿ ಮುಂಬೈಗೆ ಆಗಮಿಸಲು ಬಳಕೆಯಾಗಿದ್ದವು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಝಕಿ-ಉರ್-ರೆಹ್ಮಾನ್ ಲಖ್ವಿ ಸೇರಿದಂತೆ ಇನ್ನೂ ಏಳು ಮಂದಿ ಆರೋಪಿಗಳು ವಿಚಾರಣೆ ವೇಳೆ ಉಪಸ್ಥಿತರಿದ್ದರಾದರೂ ನಿನ್ನೆ ಅವರ ಹೇಳಿಕೆಗಳನ್ನು ಪಡೆದುಕೊಳ್ಳಲಿಲ್ಲ.

ಪ್ರಸ್ತುತ ಲಖ್ವಿ ಜಾಮೀನಿನ ಮೇಲೆ ಹೊರಗಿದ್ದರೆ, ಅಬ್ದುಲ್ ವಾಜೀದ್, ಮಝಾರ್ ಇಕ್ಬಾಲ್, ಹಮಾದ್ ಅಮೀನ್ ಸಾದಿಕ್, ಶಾಹೀದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೂನಿಸ್ ಅಂಜುಮ್ ಇವರು ಕಳೆದ ಆರು ವರ್ಷಗಳಿಂದ ಸೆರೆಯಲಿದ್ದಾರೆ. 2008ರ ನವೆಂಬರ್‌ನಲ್ಲಿ ನಡೆದಿದ್ದ ಈ ದಾಳಿಯಲ್ಲಿ 166 ಜನ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.

Write A Comment