ರಾಷ್ಟ್ರೀಯ

ರೈಲಿನಲ್ಲಿ ಸರಪಳಿ ಎಳೆವ ಪ್ರಕ್ರಿಯೆಗೆ ಇನ್ನೂ ಪೂರ್ಣ ವಿರಾಮ

Pinterest LinkedIn Tumblr

Pull-Chain

ಬರೇಲಿ, ಜೂ.9: ರೈಲಿನಲ್ಲಿ ಪ್ರಯಾಣಿಸುವಾಗ ತುರ್ತು ಸಂದರ್ಭದಲ್ಲಿ ಸರಪಳಿ ಎಳೆದು ರೈಲು ನಿಲ್ಲಿಸುವ ಸೌಲಭ್ಯವನ್ನು ನಿಲ್ಲಿಸಿ, ಪಱ್ಯಾಯವಾಗಿ ನೇರವಾಗಿ ರೈಲು ಚಾಲಕರಿಗೆ ಮೊಬೈಲ್ ಕರೆ ಮಾಡುವ ಸೌಲಭ್ಯ ಒದಗಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ.

ತುರ್ತು ಸಂದರ್ಭದಲ್ಲಿ ಬಳಸಲು ಇದ್ದ ಸರಪಳಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಪ್ರಯಾಣಿಕರು ತಮಗೆ ಬೇಕಾದ ಕಡೆ ರೈಲು ನಿಲ್ಲಿಸಿ ಇಳಿದು ಹೋಗುತ್ತಿದ್ದರು. ಇದರಿಂದಾಗಿ ರೈಲು ಸಂಚಾರ ವಿಳಂಬವಾಗುತ್ತಿದೆ. ಅಲ್ಲದೇ, ರೈಲ್ವೆ ಇಲಾಖೆಗೆ ಸುಮಾರು 3 ಸಾವಿರ ಕೋಟಿ ರೂ. ನಷ್ಟವಾಗುತ್ತಿತ್ತು. ಇದನ್ನು ತಡೆಯಲು ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಈಶಾನ್ಯ ರೈಲ್ವೆ ವಲಯದ ಇಜ್ವತ್‌ನಗರ ಘಟಕಗಳಲ್ಲಿ ಚೈನ್‌ಗಳ ವ್ಯವಸ್ಥೆ ತೆಗೆಯುವ ಕೆಲಸ ಆರಂಭವಾಗಿದ್ದು, ಹೊಸದಾಗಿ ತಯಾರಿಸುವ ಭೋಗಿಗಳಲ್ಲಿ ಸರಪಳಿ ಸೌಲಭ್ಯ ಕಲ್ಪಿಸಲಾಗುತ್ತಿಲ್ಲ ಎಂದು ಇಲಾಖೆ ತಿಳಿಸಿದೆ.

ರೈಲಿನಲ್ಲಿ ಪ್ರಯಾಣಿಸುವಾಗ ತುರ್ತು ಪರಿಸ್ಥಿತಿ ಎದುರಾದರೆ ನೇರವಾಗಿ ರೈಲು ಚಾಲಕರಿಗೆ ಮೊಬೈಲ್ ಫೋನ್ ಕರೆ ಮಾಡಿ ಶೀಘ್ರವಾಗಿ ಮಾಹಿತಿ ತಿಳಿಸಿ ರೈಲು ನಿಲ್ಲಿಸುವಂತೆ ಮನವಿ ಮಾಡಿದರೆ ಚಾಲಕರು ಪರಿಸ್ಥಿತಿ ಅರಿತು ರೈಲು ನಿಲ್ಲಿಸಲಿದ್ದಾರೆ ಎಂದು ಇಲಾಖೆ ಹೇಳಿದೆ.

ಹೊಸದಾಗಿ ತಯಾರಾಗುತ್ತಿರುವ ಭೋಗಿಗಳಲ್ಲಿ ರೈಲು ಚಾಲಕರ ಮೊಬೈಲ್ ಸಂಖ್ಯೆಯನ್ನು ಎಲ್ಲರಿಗೂ ಗೋಚರಿಸುವ ರೀತಿಯಲ್ಲಿ ಮುದ್ರಿಸಲಾಗುವುದು. ಆ ಸಂಖ್ಯೆಗೆ ನೇರವಾಗಿ ಕರೆ ಮಾಡಿ ಮಾಹಿತಿ ತಿಳಿಸಬಹುದಾಗಿದೆ.

Write A Comment