ರಾಷ್ಟ್ರೀಯ

ಲ್ಯಾಪ್‍ಟಾಪ್‍ ಕೊಡಿಸಲಿಲ್ಲ ಎಂದು ಮನೆಯಿಂದ ಒಂದು ಲಕ್ಷ ಕದ್ದು ಪರಾರಿಯಾದ 12ರ ಬಾಲಕ!

Pinterest LinkedIn Tumblr

laptop_boy

ತಿರುವನಂತಪುರ: ಆಟಿಕೆ ಕೊಡಿಸಲಿಲ್ಲ, ಮೊಬೈಲ್ ಕೊಡಿಸಲಿಲ್ಲವೆಂದು ಹೆತ್ತವರನ್ನು ಗೋಳಿಡುವ ಮಕ್ಕಳ ಕಥೆಯನ್ನು ಕೇಳಿದ್ದೀರಿ. ಆದರೆ, ಇಲ್ಲೊಬ್ಬ 12ರ ಪುಟ್ಟ ಬಾಲಕ ಲ್ಯಾಪ್‍ಟಾಪ್ ಕೊಡಿಸಲಿಲ್ಲವೆಂದು ಮನೆಯಿಂದಲೇ ರು.1 ಲಕ್ಷ ಕದ್ದು ಪರಾರಿಯಾಗಿದ್ದಾನೆ!

ಈ ಘಟನೆ ನಡೆದಿದ್ದು ಕೇರಳದ ಕಲ್ಲಿಕೋಟೆ ಜಿಲ್ಲೆಯ ಕೊಂಡೊಟ್ಟಿಯಲ್ಲಿ. 12 ವರ್ಷದ ಬಾಲಕ ಲ್ಯಾಪ್‍ಟಾಪ್ ಗಾಗಿ ಅಪ್ಪನನ್ನು ಪೀಡಿಸುತ್ತಿದ್ದ. ಹುಡುಗ ಇನ್ನೂ 7ನೇ ತರಗತಿಯವನಾದ್ದರಿಂದ ಅಪ್ಪ ಇದಕ್ಕೆ ಒಪ್ಪಿರಲಿಲ್ಲ. ಕೋಪಗೊಂಡ ಬಾಲಕ ಮನೆಯ ಅಲ್ಮೇರಾದ ಲಾಕರ್ ತೆರೆದು ರು.1 ಲಕ್ಷ ನಗದನ್ನು ತೆಗೆದುಕೊಂಡು ಮನೆಬಿಟ್ಟು ಪರಾರಿಯಾದ. ಅಲ್ಲಿಂದ ಹೋದವನೇ ಮಳಿಗೆಯೊಂದರಲ್ಲಿ ರು.30 ಸಾವಿರ ಕೊಟ್ಟು ಲ್ಯಾಪ್‍ಟಾಪ್ ಖರೀದಿ ಮಾಡಿದ.

ಅದನ್ನು ತನ್ನ ಶಾಲಾ ಬ್ಯಾಗ್‍ನೊಳಗಿಟ್ಟು, ಉಳಿದ ರು.70 ಸಾವಿರದೊಂದಿಗೆ ಪಯಣ ಮುಂದುವರಿಸಿದ. ಕೊಚ್ಚಿಗೆ ಹೋಗಬೇಕೆಂದು ತೀರ್ಮಾನಿಸಿ ಕಲ್ಲಿಕೋಟೆಯಿಂದ ಕೇರಳ ಸರ್ಕಾರಿ ಬಸ್ ಹತ್ತಿದ. ಆದರೆ ಅಲ್ಲೇ ನಿದ್ದೆ ಹೋದ ಕಾರಣ ಮಾರನೇ ದಿನ ಬೆಳಗ್ಗೆ ತಿರುವನಂತಪುರ ತಲುಪಿದ. ಎಚ್ಚರಗೊಂಡ ತಕ್ಷಣ ಮಹಿಳಾ ನಿರ್ವಾಹಕಿಯನ್ನು ಕರೆದು `ಕೊಚ್ಚಿ ಬಂತಾ’ ಎಂದು ಪ್ರಶ್ನಿಸಿದಾಗ, ನಿರ್ವಾಹಕಿಗೆ ಅನುಮಾನ ಮೂಡಿದೆ. ಹೀಗಾಗಿ ಆಕೆ ಹುಡುಗನನ್ನು ವಿಚಾರಿಸತೊಡಗಿದ್ದು, ಕೊನೆಗೆ ಬಾಲಕ ಅಳುತ್ತಾ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ. ನಂತರ ಆತನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು, ಹೆತ್ತವರಿಗೆ ಕರೆ ಮಾಡಿ ವಿಚಾರ ತಿಳಿಸಿ, ಹೆತ್ತವರೊಂದಿಗೆ ಕಳುಹಿಸಿಕೊಡಲಾಯಿತು. ಅಲ್ಲಿಗೆ ಲ್ಯಾಪ್ ಟಾಪ್ ಕಥೆ ಅಂತ್ಯಗೊಂಡಿತು.

Write A Comment