ರಾಷ್ಟ್ರೀಯ

ವ್ಯವಸ್ಥೆ ಸರಿಪಡಿಸುವುದು ನಮ್ಮ ಉದ್ದೇಶವಾಗಿತ್ತು: ವರ್ಷದ ಹಿಂದಿನ ನೆನೆಪುಗಳನ್ನು ಮೆಲುಕು ಹಾಕಿದ ಮೋದಿ

Pinterest LinkedIn Tumblr

Narenedra-Modi-Looks-Back-On-His-First-Year-in-Prime-Ministers-Office

ನವದೆಹಲಿ: ಜನಪ್ರಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಮತ್ತಷ್ಟು ಕಷ್ಟಗಳನ್ನು ತಂದುಕೊಳ್ಳುವ ಬದಲು ಇರುವ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶ ನಮ್ಮ ಸರ್ಕಾರದ್ದಾಗಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.

ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಒಂದು ವರ್ಷ ಪೂರೈಸಿರುವ ಸಂದರ್ಭ ಕುರಿತಂತೆ ಗುರುವಾರ ಸುದ್ಧಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಮ್ಮ ಸರ್ಕಾರ ಸಾಧನೆ, ವಿರೋಧ ಪಕ್ಷಗಳ ಟೀಕೆ, ಸರ್ಕಾರ ಜಾರಿಗೆ ತಂದ ಅಭಿಯಾನ, ಜಿಎಸ್ ಟಿ ಮಸೂದೆ ಹಾಗೂ ಇನ್ನಿತರೆ ವಿಷಯಗಳ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ.

ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ನಾಗರೀಕ ಸೇವಾ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿತ್ತು. ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಕೆಲ ಬಾಹ್ಯ ಅಸಂವಿಧಾನಿಕ ಶಕ್ತಿಗಳು ಮತ್ತು ಕೆಲ ಒಳಗಿನ ಮಂತ್ರಿಗಳ ಗುಂಪಿನ ಕಾರ್ಯಾಚರಣೆಯಿಂದಾಗಿ ಕ್ಯಾಬಿನೆಟ್ ವ್ಯವಸ್ಥೆ ಕೂಡ ಹಾಳಾಗಿತ್ತು. ಇವುಗಳನ್ನೆಲ್ಲಾ ಸರಿಪಡಿಸುವುದು ಸವಾಲಿನ ಕೆಲಸವಾಗಿತ್ತು. ಈ ಎಲ್ಲಾ ಹದಗೆಟ್ಟ ವ್ಯವಸ್ಥೆಯನ್ನು  ಪುನಃ ಸ್ಥಾಪಿಸಲು ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಯಿತು.

ಸಂದರ್ಶನದಲ್ಲಿ ಹೊಸ ಯೋಜನೆಗಳನ್ನು ಏಕೆ ಕೈಗೊಳ್ಳಲಿಲ್ಲ ಎಂಬ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಪ್ರಚಾರ ಮಾಡಬಹುದು. ಆದರೆ, ಇದು ಜನರನ್ನು ಮೂರ್ಖರನ್ನಾಗಿಸುವ ಕೆಲಸವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಹಾಗಾಗಿ ಇರುವ ಯೋಜನೆಗಳನ್ನೇ ಯಶಸ್ವಿಗೊಳಿಸುವ ಉದ್ದೇಶದಿಂದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿಲ್ಲ ಎಂದಿದ್ದಾರೆ.

ಇದೇ ವೇಳೆ ಯಶಸ್ವಿ ದೇಶವಾಗಿಸುವ ಕುರಿತಂತೆ ಮಾತನಾಡಿರುವ ಅವರು, ಒಂದು ದೇಶವನ್ನು ಮುನ್ನಡೆಸಬೇಕಾದರೆ ಒಂದು ಗುಂಪಾಗಿ ಒಗ್ಗಟ್ಟಿನಿಂದ ಮುನ್ನಡೆಸಬೇಕು. ಅಂದರೆ, ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳು ಒಂದು ಗುಂಪು, ಕ್ಯಾಬಿನೆಟ್ ಮಂತ್ರಿಗಳು ಮತ್ತು ರಾಜ್ಯ ಮಂತ್ರಿಗಳು ಒಂದು ಗುಂಪು ಹಾಗೂ ಕೇಂದ್ರ ನಾಗರೀಕ ಸೇವಕರು ಹಾಗೂ ರಾಜ್ಯ ನಾಗರೀಕ ಸೇವಕರು ಒಂದು ಗುಂಪಾಗಿ ಕೆಲಸ ಮಾಡಬೇಕು ಹೀಗಾದರೆ ಒಂದು ದೇಶವನ್ನು ಯಶಸ್ವಿಯಾಗಿ ಅಭಿವೃದ್ಧಿ ಕಾರ್ಯದತ್ತ ಸಾಗಿಸಬಹುದು. ಪ್ರತೀ ನಿತ್ಯ ನಾನು ಹೊರ ನಾಗರೀಕರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಇಂದು ಒಂದು ರೀತಿಯಲ್ಲಿ ನಂಬಿಕೆ ಹಾಗೂ ಮಾನಸಿಕವಾಗಿ ಧೈರ್ಯವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

Write A Comment