ರಾಷ್ಟ್ರೀಯ

ಜಯಲಲಿತಾ ಕುರಿತು ನಿಮಗೆಷ್ಟು ಗೊತ್ತು..?

Pinterest LinkedIn Tumblr

5319jayalalithaa_650x400_71432320366

ಜೆ. ಜಯಲಲಿತಾ ಐದನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಾವೇರಿ ವಿಚಾರದಲ್ಲಿ ಪದೇ ಪದೇ ಕರ್ನಾಟಕದೊಂದಿಗೆ ಕ್ಯಾತೆ ತೆಗೆಯುವ ಖ್ಯಾತಿ ಹೊಂದಿರುವ ಜಯಲಲಿತಾರನ್ನು ಹಠಮಾರಿ ಹೆಣ್ಣು ಎಂದೇ ಭಾವಿಸಲಾಗುತ್ತದೆ. ಅವರ ಕುರಿತ ಒಂದಿಷ್ಟು ವಿವರಗಳು ಓದುಗರಿಗಾಗಿ.

1948 ಫೆಬ್ರವರಿ 24 ರಂದು ಮೈಸೂರಿನಲ್ಲಿ ಜಯರಾಮ್ ಹಾಗೂ ಸಂಧ್ಯಾ ದಂಪತಿಗಳ ಪುತ್ರಿಯಾಗಿ ಜನಿಸಿದ ಜಯಲಲಿತಾರವರು ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡಿದ್ದರು. ಜಯಲಲಿತಾ ಅವರಿಗೆ ಎರಡು ವರ್ಷವಾಗಿದ್ದಾಗಲೇ ತಂದೆ ಮೃತಪಟ್ಟಿದ್ದು ಜೀವನ ನಿರ್ವಹಣೆಗಾಗಿ ತಾಯಿ ಸಂಧ್ಯಾ ತಮಿಳು ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಹೀಗಾಗಿ ಜಯಲಲಿತಾರನ್ನು ಚೆನ್ನೈಗೆ ಕರೆಸಿಕೊಂಡ ತಾಯಿ ಸಂಧ್ಯಾ ಅಲ್ಲಿನ ಚರ್ಚ್ ಪಾರ್ಕಿನಲ್ಲಿರುವ ಶಾಲೆಗೆ ಸೇರಿಸಿದ್ದರು. ಜಯಲಲಿತಾ ಅವರಿಗೆ 15 ವರ್ಷವಾಗಿದ್ದಾಗಲೇ ಚಿತ್ರರಂಗವನ್ನು ಪ್ರವೇಶಿಸಿದ್ದು ಅವರ ಪ್ರಥಮ ಚಿತ್ರ ಕನ್ನಡದ ‘ಚಿನ್ನದ ಗೊಂಬೆ’ ಎಂಬುದು ಗಮನಾರ್ಹ. ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು ಆಗಿನ ಕಾಲದಲ್ಲೇ ಚಿತ್ರವೊಂದರಲ್ಲಿ ಸ್ಕರ್ಟ್ ಧರಿಸುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದರು.

ತಮಿಳು ಚಿತ್ರರಂಗದ ಅನಭಿಷಿಕ್ತ ದೊರೆಯಾಗಿದ್ದ ಎಂ.ಜಿ. ರಾಮಚಂದ್ರನ್ ಅವರ ಸಂಪರ್ಕಕ್ಕೆ ಬಂದ ಮೇಲೆ ಜಯಲಲಿತಾರ ನಸೀಬೆ ಬದಲಾಯಿತು. ಈ ಜೋಡಿ ತಮಿಳು ಚಿತ್ರ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 28 ಚಿತ್ರಗಳಲ್ಲಿ ಇವರಿಬ್ಬರು ನಾಯಕ- ನಾಯಕಿಯಾಗಿದ್ದರೆಂದರೇ ಈ ಜೋಡಿಯ ಜನಪ್ರಿಯತೆಯನ್ನು ಊಹಿಸಬಹುದಾಗಿದೆ.

ಎಂಜಿಆರ್ ಎಐಡಿಎಂಕೆ ಪಕ್ಷ ಸ್ಥಾಪಿಸಿದ ಬಳಿಕ 1982 ರಲ್ಲಿ ಜಯಲಲಿತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಆಗ ಜಯಲಲಿತಾರಿಗೆ 34 ವರ್ಷ ವಯಸ್ಸಾಗಿತ್ತು. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಜಯಲಲಿತಾರನ್ನು ಈ ಕಾರಣಕ್ಕಾಗಿಯೇ ಎಂಜಿಆರ್, ಎಐಎಡಿಎಂಕೆ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದರು.

ಎಂಜಿಆರ್ ನಿಧನದ ಬಳಿಕ ಎಂಜಿಆರ್ ಪತ್ನಿ ಜಾನಕಿ ಹಾಗೂ ಜಯಲಲಿತಾರ ನಡುವೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆದಿದ್ದು, ಅಂತಿಮವಾಗಿ ಇದರಲ್ಲಿ ಜಯಲಲಿತಾ ಜಯಶಾಲಿಯಾದರು. 1991 ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಜಯಲಲಿತಾ ಇದುವರೆಗೆ ಆನೇಕ ಏಳುಬೀಳುಗಳನ್ನು ಕಂಡಿದ್ದು, ಇದೀಗ ಐದನೇ ಬಾರಿಗೆ ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ.

Write A Comment