ರಾಷ್ಟ್ರೀಯ

ಒಲ್ಲದ ಮದುವೆ ನಿಲ್ಲಿಸಿದ ಜಾರ್ಖಂಡ್‌ ಸಿಎಂ

Pinterest LinkedIn Tumblr

das

ರಾಂಚಿ: ಇಷ್ಟವಿಲ್ಲದ ಮದುವೆ ನಿಲ್ಲಿಸುವುದು ಹೇಗೆ ? ಜಾರ್ಖಂಡ್‌ನ ಪಾಲಿಟೆಕ್ನಿಕ್‌ ವಿದ್ಯಾರ್ಥಿನಿ ಡಾಲಿ ಕುಮಾರಿಯ ಈ ಪ್ರಶ್ನೆಗೆ ಪರಿಹಾರ ನೀಡಿದವರು ರಾಜ್ಯದ ಮುಖ್ಯಮಂತ್ರಿ ರಘುವರ್‌ ದಾಸ್‌.

ದಾಸ್‌ ಅವರನ್ನು ಶನಿವಾರ ಭೇಟಿ ಮಾಡಿದ ಡಾಲಿ(17), ಓದು ಮುಂದುವರಿಸುವ ಆಸೆಗೆ ಅಡ್ಡಿಯಾಗಿರುವ ಮದುವೆಯನ್ನು ತಪ್ಪಿಸುವಂತೆ ಮನವಿ ಮಾಡಿದ್ದಳು. ಕೊಡೆರ್ಮಾ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ತಂದೆ ಕೈಲಾಶ್‌ ಕುಮಾರ್‌ ಪಂಡಿತ್‌ ಜತೆ ಮಾತನಾಡುವಂತೆ ಕೋರಿದಳು.

ಶನಿವಾರ ಸಾರ್ವಜನಿಕರ ಕುಂದುಕೊರತೆ ಆಲಿಸುತ್ತಿದ್ದ ಮುಖ್ಯಮಂತ್ರಿ,ಹುಡುಗಿಯ ಮನವಿಗೆ ಸ್ಪಂದಿಸಿ ಪಂಡಿತ್‌ಗೆ ಕರೆ ಮಾಡಿದರು. ಡಾಲಿಯ ಮದುವೆ ಯೋಚನೆ ಕೈ ಬಿಡುವಂತೆ ಮನವಿ ಮಾಡಿದರು.

‘ಮೇ ರಘುವರ್‌ ದಾಸ್‌ ಬೋಲ್‌ ರಹಾ ಹೂಂ…’ (ನಾನು ರಘುವರ್‌ ದಾಸ್‌ ಮಾತನಾಡುತ್ತಿದ್ದೇನೆ) ಎಂಬ ಮಾತು ಕೇಳಿದಾಗ ದಿಗ್ಭ್ರಮೆ ಆಯಿತು. ಮುಖ್ಯಮಂತ್ರಿ ನನಗೆ ಕರೆ ಮಾಡಿದ್ದರು. ಟಿವಿಯಲ್ಲಿ ಮಗಳನ್ನು ನೋಡಿದ ನಂತರ ಎಲ್ಲವೂ ತಿಳಿಯಿತು,’ ಎಂದು ಪಂಡಿತ್‌ ಹೇಳಿದ್ದಾರೆ.

‘ಉನ್ನತ ಶಿಕ್ಷಣದ ಬಗ್ಗೆ ಮಗಳು ಕನಸು ಕಾಣುತ್ತಿದ್ದಾಳೆ. ಆದರೆ, ಮುಂದೆ ಓದಿಸಲು ನನ್ನ ಬಳಿ ಹಣವಿಲ್ಲ. ಮುಂದಿನ ವರ್ಷವೇ ನಿವೃತ್ತಿ. ಮೂವರು ಹೆಣ್ಣು ಮಕ್ಕಳಿಗೆ ಮದುವೆ ಆಗಿದೆ. ಇನ್ನೂ ಇಬ್ಬರೂ ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕಿದೆ. ಕೆಲಸದಲ್ಲಿರುವಾಗಲೇ ಡಾಲಿಯ ಮದುವೆ ಮಾಡುವ ಉದ್ದೇಶದಿಂದ ಒತ್ತಡ ಹೇರಿದ್ದೆ,’ ಎಂದು ಪಂಡಿತ್‌ ತಿಳಿಸಿದ್ದಾರೆ.

ಬಡ ಶಿಕ್ಷಕರ ಮನೆಯ ಪರಿಸ್ಥಿತಿ ತಿಳಿದ ರಘುವರ್‌, ಕುಟುಂಬಕ್ಕೆ ನೆರವಾಗುವುದಾಗಿ ಭರವಸೆ ನೀಡಿದ್ದಾರೆ. ಡಾಲಿ ಶಿಕ್ಷಣಕ್ಕೆ ನೆರವು ನೀಡುವಂತೆ ರಾಂಚಿ ಉಪಾಯುಕ್ತರಿಗೆ ಸೂಚಿಸಿದ್ದಾರೆ.

ಗುಲ್ಮಾ ಬಾಲಕಿ ಪ್ರೇರಣೆ:

ಗುಲ್ಮಾ ಬಾಲಕಿ ಸಾಹಸವನ್ನು ಮುಖ್ಯಮಂತ್ರಿ ಮೆಚ್ಚಿಕೊಂಡಿದ್ದ ಸುದ್ದಿ ಓದಿದ್ದ ಡಾಲಿ ಅವರ ನೆರವು ಪಡೆಯಲು ನಿರ್ಧರಿಸಿದಳು. ಮದುವೆ ನಿರಾಕಿಸಿದ 13 ವರ್ಷದ ಬಿರ್ಸಾಮುನಿ ಕುಮಾರಿ ಆಕೆಯ ಓರಗೆಯವರಿಗೆ ಮಾದರಿಯಾಗಿದ್ದಾಳೆ. ಮದುವೆ ನಿಲ್ಲಿಸಲು ನೆರವು ನೀಡುವಂತೆ ಆಕೆ ಗುಲ್ಮಾ ಜಿಲ್ಲಾಡಳಿತದ ಮೊರೆ ಹೋಗಿದ್ದಳು. ಬಾಲ್ಯ ವಿವಾಹದ ವಿರುದ್ಧ ದನಿ ಎತ್ತಿದ್ದ ಬಿರ್ಸಾ ಕುಮಾರಿಯ ಧೈರ್ಯ ಮೆಚ್ಚಿ ಸಿಎಂ, ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು.

Write A Comment