ರಾಯ್ಪುರ್: ವಿವಾಹಿತ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ವ್ಯಕ್ತಿಯೊಬ್ಬ ಆಕೆ ಅದನ್ನು ಪ್ರತಿಭಟಿಸಿದಾಗ ಕೋಪದ ಭರದಲ್ಲಿ ಆಕೆಯ ನಾದಿನಿಯ ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಜೀವಂತವಾಗಿ ಸುಟ್ಟು ಹಾಕಿದ ಅಮಾನುಷ ಘಟನೆ ಛತ್ತೀಸ್ಗಡ್ನ ದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಘುಸಿದ್ಧಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಉತೈ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ವರದಿಯ ಪ್ರಕಾರ 22 ವರ್ಷದ ಮಹಿಳೆಯ ಮನೆಗೆ ನುಗ್ಗಿದ ಮಹಾವೀರ್ ಎಂಬ ಆರೋಪಿ ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಆಕೆಯ ನಾದಿನಿಯ ಮಕ್ಕಳಾದ ಮೋಹನ್ (3) ಮತ್ತು ಭುವನೇಶ್ವರಿ ಜತೆ ಇದ್ದರು. ಆತನ ದುಷ್ಕೃತ್ಯವನ್ನು ಆಕೆ ಧೈರ್ಯವಾಗಿ ಪ್ರತಿಭಟಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ಆಕೆಯ ಜತೆ ಇದ್ದ ಪುಟ್ಟ ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಪ್ರಿ ಗ್ರಾಮದ ನಿವಾಸಿಯಾಗಿದ್ದ ಯುವತಿಯನ್ನು ಕೇವಲ ಒಂದು ತಿಂಗಳ ಹಿಂದೆ ಕಸಿದೀ ಎಂಬ ಗ್ರಾಮದ ಯುವಕನ ಜತೆ ಮದುವೆ ಮಾಡಲಾಗಿತ್ತು. ಆಕೆಯ ಗಂಡನ ಮನೆಯಲ್ಲೇ ಈ ದುಷ್ಕೃತ್ಯ ನಡೆದಿದೆ.
ಮಹಿಳೆಯ ಪ್ರಕಾರ ಆರೋಪಿ ಮಹಾವೀರ್ ಆಕೆಯ ತವರು ಗ್ರಾಮದವನಾಗಿದ್ದು, ಸೋಮವಾರ ಮಧ್ಯಾಹ್ನ ಏಕಾಯೇಕಿ ಆಕೆಯ ಮನೆಗೆ ನುಗ್ಗಿದ ಆತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆತನನ್ನು ತಡೆಯಲು ಆಕೆ ಸಫಲಳಾದಾಗ ಕೋಪಗೊಂಡ ಆತ ಅಲ್ಲೇ ಇದ್ದ ಪುಟ್ಟ ಮಕ್ಕಳನ್ನು ದಹಿಸಿ ಪೈಶಾಚಿಕತೆಯನ್ನು ಮೆರೆದಿದ್ದಾನೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.