ರಾಷ್ಟ್ರೀಯ

ಒಂದುಗೂಡಿದ್ದ ಜನತಾಪರಿವಾರ ವಿಲೀನಕ್ಕೆ ಮತ್ತೆ ವಿಘ್ನ

Pinterest LinkedIn Tumblr

Janatha-Priwar

ನವದೆಹಲಿ, ಮೇ 11-ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಎಲ್ಲಾ ವೈಮನಸ್ಸುಗಳನ್ನು ಮರೆತು ಒಂದುಗೂಡಿದ್ದ ಜನತಾಪರಿವಾರ  ವಿಲೀನಕ್ಕೆ  ಮತ್ತೆ ವಿಘ್ನ ಎದುರಾಗಿದೆ. ಕಳೆದ ಏಪ್ರಿಲ್ 15ರಂದು ಎಸ್‌ಪಿ, ಆರ್‌ಜೆಡಿ, ಜೆಡಿಯು, ಐಎಲ್‌ಡಿ ಪಕ್ಷಗಳ ವಿಲೀನಕ್ಕೆ ಆಯಾ ಪಕ್ಷಗಳ ನಾಯಕರು ಸಮ್ಮತಿಸಿದ್ದರು. ಇದು ಮುಂದಿನ ಹೊಸ ರಾಜಕೀಯ ಮುನ್ನುಡಿಗೆ ಮನ್ವಂತರ ಬರೆಯಲಿದೆ ಎಂದು ವ್ಯಾಖ್ಯಾನಿಸಲಾಗಿತ್ತು.  ಆದರೆ  ಇದೀಗ  ಜನತಾ ಪರಿವಾರದ ವಿಲೀನಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದೆ

. ಇದರಿಂದ ಬಿಹಾರ ವಿಧಾನಸಭೆ ಮುಗಿಯುವವರೆಗೂ ಒಗ್ಗೂಡುವುದು ಅನುಮಾನ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಸಮಾಜವಾದಿ ಪಕ್ಷದ ಮುಖಂಡ ರಾಮ್‌ಗೋಪಾಲ್ ಯಾದವ್ ಹೇಳಿರುವಂತೆ ಜನತಾ ಪರಿವಾರದ ನಾಯಕರು ವಿಲೀನವಾಗಿ ಒಂದು ತಿಂಗಳು ಕಳೆದಿದೆ. ಯಾವುದೇ ರಾಜಕೀಯ ಪಕ್ಷ ವಿಲೀನವಾದಾಗ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಬೇಕು. ಈವರೆಗೂ ಜೆಡಿಯು, ಆರ್‌ಜೆಡಿ, ಎಸ್‌ಪಿ, ಐಎಲ್‌ಡಿ ಪಕ್ಷಗಳು ವಿಲೀನವಾಗಿರುವುದರ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರವನ್ನೇ ಬರೆದಿಲ್ಲ. ನಮ್ಮ ಪಕ್ಷ ಇಂತಹ ರಾಜಕೀಯ ಪಕ್ಷದೊಂದಿಗೆ ವಿಲೀನವಾಗಲು ತೀರ್ಮಾನಿಸಿದೆ. ಇನ್ನು ಮುಂದೆ ನಮ್ಮ ಪಕ್ಷಕ್ಕೆ ಹೊಸ ಚಿಹ್ನೆ ನೀಡಬೇಕೆಂದು ಆಯಾ ಪಕ್ಷಗಳ ಅಧ್ಯಕ್ಷರು ಮನವಿ ಮಾಡಿಕೊಳ್ಳಬೇಕು.

ಆದರೆ ಸಮಾಜವಾದಿ ಪಕ್ಷದ ಮುಲಾಯಮ್‌ಸಿಂಗ್ ಯಾದವ್, ಜೆಡಿಎಸ್‌ನ ಎಚ್.ಡಿ.ದೇವೇಗೌಡ, ಆರ್‌ಜೆಡಿಯ ಲಾಲೂಪ್ರಸಾದ್ ಯಾದವ್, ಐಎಲ್‌ಡಿ ಓಂಪ್ರಕಾಶ್ ಚೌತಾಲಾ ಚುನಾವಣಾ ಆಯೋಗಕ್ಕೆ ಪತ್ರವನ್ನೇ ಬರೆದಿಲ್ಲ. ಹೀಗಾಗಿ ಜನತಾ ಪರಿವಾರದ ವಿಲೀನ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ ಎಂಬ ಅನುಮಾನ ಮೂಡಿದೆ. ಅಲ್ಲದೆ, ಈ ವರ್ಷದಂತೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಒಂದು ವೇಳೆ ಆಯೋಗಕ್ಕೆ ಎಲ್ಲಾ ಪತ್ರ ವ್ಯವಹಾರಗಳನ್ನು ಮುಗಿಸಿ ಇಲ್ಲಿನ ಪ್ರಕ್ರಿಯೆ ಮುಗಿದರೂ ಹೊಸ  ಚಿಹ್ನೆ ಪಡೆದುಕೊಳ್ಳಬೇಕು. ಇದು ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಜೆಡಿಯು ಆತಂಕವ್ಯಕ್ತಪಡಿಸಿದೆ. ಹೊಸ ಚಿಹ್ನೆಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಸಾಕಷ್ಟು ಸಮಯಾವಕಾಶ ಬೇಕಾಗುವುದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಅನುಮಾನವನ್ನು ಜೆಡಿಯು ಮುಖಂಡರು ವ್ಯಕ್ತಪಡಿಸಿದ್ದಾರೆ.

Write A Comment