ರಾಷ್ಟ್ರೀಯ

ಸಾವಿನಲ್ಲೂ ಒಂದಾದ ನೂರು ವರ್ಷ ಬಾಳಿದ ದಂಪತಿ…!

Pinterest LinkedIn Tumblr

saal_ki_prem_kahani_pkg

ಲಖಿಂಪುರ್‌ಖೇರಿ (ಉತ್ತರ ಪ್ರದೇಶ), ಮೇ 6- ಸುಮಾರು ಒಂದು ಶತಮಾನದ ಕಾಲ ಸತಿ-ಪತಿಗಳಾಗಿ ಒಟ್ಟಿಗೇ ಬಾಳಿ ಕೊನೆಗೆ ಒಂದೇ ದಿನ ಇಬ್ಬರೂ ವಿಧಿವಶರಾದ ಗಾಢ ಪ್ರೀತಿಯ ದ್ಯೋತಕವಾಗಿದ್ದ ಗಂಡ-ಹೆಂಡತಿಯ ಒಂದು ಪ್ರೇಮಕಥೆಯಿದು. ಉತ್ತರ ಪ್ರದೇಶದ ಲಖಿಂಪುರ್‌ಖೇರಿ ಜಿಲ್ಲೆಯ ಬಿಚುಲಿ ಎಂಬ ನೇಪಾಳ ಗಡಿಯ ಕುಗ್ರಾಮವೊಂದರಲ್ಲಿ ಅರಳಿದ ಪ್ರೀತಿಯ ಹೂವುಗಳು ಫಕೀರ ಮತ್ತು ರಾಧಿಕಾ. 103 ವರ್ಷದ ರಾಧಿಕಾ ಶನಿವಾರ ರಾತ್ರಿ ಹೃದಯಾಘಾತದಿಂದ ಶಿವನ ಪಾದ ಸೇರಿದಳು. ತನ್ನ ಪ್ರೀತಿಯ ಪತ್ನಿ ಅಗಲಿಕೆ ಸಹಿಸಲಾಗದ 107 ವರ್ಷದ ಫಕೀರ,

ರಾಧಿಕಾ ಮೃತಪಟ್ಟು ಕೆಲವೇ ಸಮಯದಲ್ಲಿ ಪತ್ನಿಯ ಮೃತದೇಹದ ಪಕ್ಕ ಕುಳಿತಿದ್ದವನು ಹಾಗೇ ನೆಲಕ್ಕುರುಳಿದ. ಅವನ ಪ್ರಾಣಪಕ್ಷಿ ಹಾರಿಹೋಗಿತ್ತು.

107 ವರ್ಷದ ಮುಸ್ಲಿಂ ಸಮುದಾಯದ ಫಕೀರನಿಗೆ ಆಗ 20ರ ಹರೆಯ. 103 ವರ್ಷದ ಹಿಂದೂ ಹುಡುಗಿ ರಾಧಿಕಾಳಿಗೆ ಆಗಿನ್ನೂ 16ರ ಎಳೆ ಹರೆಯ. ಇಬ್ಬರೂ ಪ್ರೀತಿಸಿದರು. ಮದುವೆಯೂ ಆದರು. ಬರೋಬ್ಬರಿ 88 ವರ್ಷಗಳ ಕಾಲ ಜೋಡಿ ಗಿಳಿಗಳಂತೆ ಬದುಕಿದರು. ಬದುಕಿರುವವರೆಗೂ ಒಂದು ಕ್ಷಣವೂ ಒಬ್ಬರನ್ನೊಬ್ಬರು ಬಿಟ್ಟು ಅಗಲಿದ್ದಿಲ್ಲ. ಅಂತ್ಯ ಕಾಲದಲ್ಲೂ ಒಟ್ಟಾಗೇ ಪಯಣಿಸಿದವು ಆ ಅಚಲ ಪ್ರೀತಿಯ ಜೀವಗಳು. ವಿಶೇಷವೆಂದರೆ, ಈ ಪ್ರೀತಿಯ ಅಮೂರ್ತರೂಪವಾದ ದಂಪತಿಗೆ ಮಕ್ಕಳಿಲ್ಲ. ಊರಿನ ಎಲ್ಲ ಹಿಂದೂ-ಮುಸ್ಲಿಂ ಸಮುದಾಯದವರೂ ಒಟ್ಟಾಗಿ ಅತ್ಯಂತ ಸಂತೋಷದಿಂದ ಅಂತ್ಯ ಸಂಸ್ಕಾರ ನೆರವೇರಿಸಿದರು. ಯಾರೂ ಒಂದು ಹನಿ ಕಣ್ಣೀರು ಹಾಕಿಲ್ಲ. ಏಕೆಂದರೆ, ಆ ದಂಪತಿ ಸಾರ್ಥಕ ಬದುಕಿನ ಸಾಕ್ಷಿಗಳಾಗಿದ್ದರು. ಆ ದಂಪತಿಗೆ, ಅವರ ಪ್ರೀತಿಗೆ ಸಲಾಂ…

Write A Comment