ರಾಷ್ಟ್ರೀಯ

ಮರುಕಳಿಸಿದ ದೆಹಲಿಯ ನಿರ್ಭಯಾ ಅತ್ಯಾಚಾರ, ಕೊಲೆಯಂತ ಹೀನ ಕೃತ್ಯ; ಪಂಜಾಬ್ ನಲ್ಲಿ ಯುವಕರ ಕಿರುಕುಳದಿಂದ ಪಾರಾಗಲು ಬಸ್ಸಿನಿಂದ ಜಿಗಿದ ಬಾಲಕಿ ಸಾವು

Pinterest LinkedIn Tumblr

ಚಂಡೀಗಡ(ಐಎಎನ್ಎಸ್‌): ಯುವಕರ ಕಿರುಕುಳದಿಂದ ಪಾರಾಗಲು ಚಲಿಸುತ್ತಿದ್ದ ಖಾಸಗಿ ಬಸ್ಸಿನಿಂದ ಹೊರಕ್ಕೆ ಜಿಗಿದ 13ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಪಂಜಾಬ್‌ನ ಮೊಗಾ ಟೌನ್‌ನಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬಸ್‌ ನಿರ್ವಾಹಕ ಸೇರಿದಂತೆ ಕೆಲವು ಯುವಕರು ಕಿರುಕುಳ ನೀಡುತ್ತಿದ್ದರಿಂದ ಬಾಲಕಿ ಹಾಗೂ ಆಕೆಯ ತಾಯಿ ಬಸ್‌ನಿಂದ ಹೊರಕ್ಕೆ ಜಿಗಿದಿದ್ದರಿಂದ ಬಾಲಕಿ ಮೃತಪಟ್ಟಿದ್ದು ಆಕೆಯ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ನಡೆದ ಘಟನೆಯಲ್ಲಿ ಬಾಲಕಿ ಮೃತಪಟ್ಟಿದ್ದಾಗಿ ವೈದ್ಯರು ಧೃಡಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆಕೆಯ ತಾಯಿಯನ್ನು ಚಿಕಿತ್ಸೆಗಾಗಿ ಮೊಗಾದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಬಸ್ಸನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪ್ರಾರಂಭಿಸಿದ್ದು, ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದೇವೆ ಹಾಗೂ ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಬುಧವಾರ ರಾತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿ ನೀಡಿರುವ ಹೇಳಿಕೆಯ ಪ್ರಕಾರ ಬಾಲಕಿ ಹಾಗೂ ಆಕೆಯ ತಾಯಿ ಕಿರುಕುಳದಿಂದ ತಪ್ಪಿಸಿಕೊಳ್ಳಲು ಬಸ್ಸಿನಿಂದ ಕೆಳಗಿಳಿಯಲು ಪ್ರಯತ್ನಿಸುತ್ತಿದ್ದಂತೆ ಚಾಲಕ ಬಸ್ಸಿನ ವೇಗವನ್ನು ಹೆಚ್ಚಿಸಿದ್ದಾನೆ.

‘ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯಾರೊಬ್ಬರೂ ಅವರ ನೆರವಿಗಾಗಿ ಧಾವಿಸಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.
(ಪ್ರಜಾವಾಣಿ)

Write A Comment