ರಾಷ್ಟ್ರೀಯ

ದಿಲ್ಲಿಯ ಶೇ.80ರಷ್ಟು ಕಟ್ಟಡಗಳು ಭೂಕಂಪವನ್ನು ತಾಳಿಕೊಳ್ಳಲಾರವು!

Pinterest LinkedIn Tumblr

New-Delhi

ಹೊಸದಿಲ್ಲಿ, ಎ.27: ದಿಲ್ಲಿಯು ಭೂಕಂಪ ವಲಯ-4ರಲ್ಲಿದ್ದು, ಅಲ್ಲಿ ಭೂಕಂಪಗಳು ಸಂಭವಿಸುವ ಸಾಧ್ಯತೆ ಅಧಿಕವಿದೆ. ಆದಾಗ್ಯೂ, ನಗರವು ಅವುಗಳನ್ನೆದುರಿಸಲು ಯಾವುದೇ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ದೇಶದ ರಾಜಧಾನಿಯನ್ನೇನಾದರೂ ಭಾರೀ ಭೂಕಂಪವೊಂದು ನಡುಗಿಸಿದಲ್ಲಿ, ಅಲ್ಲಿರುವ ಶೇ.80ರಷ್ಟು ಕಟ್ಟಡಗಳು ಅದನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿಲ್ಲವೆಂದು ತಜ್ಞರು ಹೇಳುತ್ತಾರೆ.

ಯಾವುದೇ ಪ್ರಕೃತಿ ವಿಕೋಪವು ಜನರನ್ನು ನೇರವಾಗಿ ಬಾಧಿಸದಿದ್ದಲ್ಲಿ ಅದು ಬೇಗನೆ ಮರೆತು ಹೋಗುತ್ತದೆ. ಈಗಿರುವ ಕಟ್ಟಡಗಳನ್ನೇ ಭೂಕಂಪವನ್ನು ತಾಳಿಕೊಳ್ಳುವಂತೆ ಮಾಡುವ ಯೋಜನೆಯೊಂದಿತ್ತು. ಆದರೆ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲವೆಂದು ನಿರ್ಮಾಣ ಎಂಜಿನಿಯರ್‌ಗಳ ಭಾರತೀಯ ಸಂಘದ ಅಧ್ಯಕ್ಷ ಮಹೇಶ್ ಟಂಡನ್ ತಿಳಿಸಿದ್ದಾರೆ.

ದಿಲ್ಲಿಯು ಇದುವರೆಗೆ ಸೌಂದರ್ಯಪ್ರಜ್ಞೆಗೆ ಗಮನ ನೀಡಿದೆಯೇ ಹೊರತು ಕಟ್ಟಡಗಳ ಸುರಕ್ಷೆಗಲ್ಲ. ಹಿಂದಿನ ಸರಕಾರಗಳು ಈ ಬಗ್ಗೆ ಗಂಭೀರವಾಗಿರಲಿಲ್ಲ. ತಾವು ಕಟ್ಟಡಗಳು ಹೇಗೆ ಸುಂದರವಾಗಿ ಕಾಣಬಹುದೆಂದು ಚಿಂತಿಸಿದ್ದೇವೆಯೇ ಹೊರತು, ಅವೆಷ್ಟು ಸುರಕ್ಷಿತ ಎಂಬುದರ ಬಗ್ಗೆಯಲ್ಲ. ಅದಕ್ಕೆ ನಿರ್ಮಾಣ ಎಂಜಿನಿಯರ್ ಹೊಣೆಗಾರನೇ ಹೊರತು ವಾಸ್ತುತಜ್ಞನಲ್ಲ. ದಿಲ್ಲಿಯ ಪು ನಾರಚಿತ ಕಟ್ಟಡ ಉಪನಿಬಂಧನೆಗಳು ಶೀಘ್ರದಲ್ಲೇ ಅಧಿಸೂಚಿತವಾಗಲಿವೆ. ಆದರೆ, ಅವುಗಳನ್ನು ವಾಸ್ತುತಜ್ಞರು ರಚಿಸಿದ್ದಾರೆಯೇ ಹೊರತು ನಿರ್ಮಾಣ ಎಂಜಿನಿಯರ್‌ಗಳಲ್ಲ ಎಂದವರು ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ ದಿಲ್ಲಿಯು ಹಳೆಯ ಕಟ್ಟಡಗಳನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಸಿತ್ತು. ಆದರೆ, 2010ರ ಕಾಮನ್ವೆಲ್ತ್ ಕ್ರೀಡಾಕೂಟವು ಅಧಿಕಾರಿಗಳು ಹಾಗೂ ಸಂಪನ್ಮೂಲವನ್ನು ಹೆಚ್ಚು ಜರೂರಿನ ಕೆಲಸಗಳೆಡೆಗೆ ತಿರುಗಿಸಿತು. ದಿಲ್ಲಿಯ ಪ್ರಕೃತಿ ವಿಕೋಪ ಪ್ರಬಂಧನ ಪ್ರಾಧಿಕಾರ, ಜಿಯೊಹಝಾರ್ಡ್ ಇಂಟರ್ನ್ಯಾಶನಲ್ ಯುಎಸ್‌ಎಐಡಿ ಹಾಗೂ ಇತರ ಭಾಗಿದಾರರು. ಪ್ರಮುಖ ಕಟ್ಟಡಗಳ ಸಮೀಕ್ಷೆ ಹಾಗೂ ಗಟ್ಟಿಗೊ ಳಿಸುವಿಕೆಗೆ ಸಿಡಬ್ಲುಡಿಯ ಸಾಮರ್ಥ್ಯ ಹೆಚ್ಚಿಸಲು ಪ್ರಯತ್ನಿಸಿವೆಯೆಂದು ಜೆ.ಇ. ರೋಜರ್ಸ್, ಎಲ್.ಟಿ. ಟೋಬಿನ್ ಹಾಗೂ ಎಚ್. ಕುಮಾರ್ 2008ರಲ್ಲಿ ಬರೆದಿರುವ ‘ಈಗಿರುವ ಕಟ್ಟಡಗಳ ಭೂಕಂಪದ ಅಪಾಯವನ್ನು ಕಡಿಮೆ ಮಾಡಲು ಭಾರತದ ದಿಲ್ಲಿಯ ಕಟ್ಟಡ ಸಾಮರ್ಥ್ಯ’ ಎಂಬ ಪ್ರಬಂಧ ಹೇಳಿದೆ.

ದಿಲ್ಲಿ ವಿಧಾನಸೌಧ, ದಿಲ್ಲಿ ಪೊಲೀಸ್ ಮುಖ್ಯಾಲಯ, ಲುಡ್ಲೊ ಕ್ಯಾಸಲ್ ಸ್ಕೂಲ್, ಗುರುತೇಘ್ ಬಹದ್ದೂರ್ ಆಸ್ಪತ್ರೆಯ ಒಂದು ವಾರ್ಡ್ ಕಟ್ಟಡ ಹಾಗೂ ಸಂಬಂಧಿತ ರಚನೆಗಳು ಹಾಗೂ 5, ಶಾಮನಾಥ ಮಾರ್ಗದ ವಿಭಾಗೀಯ ಆಯುಕ್ತರ ಕಚೇರಿ ಸಂಕೀರ್ಣದ ಹಲವು ಕಟ್ಟಡಗಳನ್ನು ಈ ಯೋಜನೆಯ ಭಾಗವಾಗಿ ಆರಿಸಲಾಗಿತ್ತು. ಆದರೆ, ಕೆಲಸ ಮುಗಿದೇ ಇಲ್ಲವೆಂದು ಸರಕಾರಿ ಮೂಲಗಳು ತಿಳಿಸಿವೆ.

ಯಮುನಾ ನದಿಯ ಪೂರ್ವ ತೀರದಲ್ಲಿರುವ ಮೃದು, ಆಳವಾದ ಮೆಕ್ಕಲು ಮಡ್ಡಿ ಮಣ್ಣು, ಹಿಮಾಲಯದ ಭೂಕಂಪದ ಅಲೆಗಳನ್ನು ವೃದ್ಧಿಸಿ, ಪೂರ್ವದಿಲ್ಲಿಗೆ ಹಾನಿಯುಂಟು ಮಾಡುವ ನಿರೀಕ್ಷೆಯಿದೆ. ದಿಲ್ಲಿಯಲ್ಲಿ ಒಂದೋ ಸಾಕಷ್ಟು ಒತ್ತದಿರುವ ಕಾಂಕ್ರೀಟ್ ಅಥವಾ ಸಡಿಲವಾದ ಇಟ್ಟಿಗೆಗಳಿಂದ ನಿರ್ಮಿಸಿರುವ ಭಾರೀ ದುರ್ಬಲ ಕಟ್ಟಡಗಳು ಅನೇಕವಿವೆ. ಹಳೆದಿಲ್ಲಿ ಹಾಗೂ ಪೂರ್ವದಿಲ್ಲಿಯ ನಿಬಿಡ ನೆರೆಹೊರೆಗಳಲ್ಲಿ ಅನಿರ್ದಿಷ್ಟ ವಿನ್ಯಾಸಗಳ ಭಾರೀ ದುರ್ಬಲ ಬಹುಮಹಡಿ ಕಟ್ಟಡಗಳಿವೆ. ಈ ಕಟ್ಟಡಗಳನ್ನು ಉರುಳಿಸಲು ಭಾರೀ ದೊಡ್ಡ ಭೂಕಂಪವೇನೂ ಸಂಭವಿಸಬೇಕಾಗಿಲ್ಲ. ಇದಲ್ಲದೆ, ಅನೇಕ ಕಟ್ಟಡಗಳನ್ನು ಕಾನೂನುಬಾಹಿರವಾಗಿ ಹಾಗೂ ಗುಣಮಟ್ಟ ನಿಯಂತ್ರಣವಿಲ್ಲದೆ ಕಟ್ಟಲಾಗಿದೆಯೆಂದು ಪ್ರಬಂಧ ತಿಳಿಸಿದೆ.

ನೂರು ಅಥವಾ ಹೆಚ್ಚು ಜನರಿರುವ ಎಲ್ಲ ಕಟ್ಟಡಗಳು, ಅವು ಯಾವ ವಿಧದ ಭೂಕಂಪ ವರ್ಗದಲ್ಲಿವೆಯೆಂಬುದನ್ನು ತಿಳಿಸುವ ಫಲಕಗಳನ್ನು ಹೊಂದಿರಬೇಕೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಆದರೆ, ಅಂತಹ ಫಲಕಗಳು ಎಲ್ಲಿಯೂ ಕಾಣಿಸುವುದಿಲ್ಲ.

ಆಸ್ಪತ್ರೆಗಳಂತಹ ಜೀವರೇಖೆಯ ಕಟ್ಟಡಗಳು ಭೂಕಂಪದ ಬಳಿಕವೂ ಹಾನಿಯಾಗದೆ ಉಳಿಯುವಂತಿರಬೇಕು. ಕಚೇರಿಗಳಂತಹ ಇತರ ವರ್ಗಗಳ ಕಟ್ಟಡಗಳಿಗೆ ಲಘು ಹಾನಿಯಾದರೂ, ಉರುಳಿಬೀಳದಂತಿರಬೇಕು. ದಿಲ್ಲಿಯಲ್ಲಿ ಸುಯೋಜಿತವಾದ ಹಾಗೂ ಭೂಕಂಪವನ್ನು ತಾಳಿಕೊಳ್ಳುವಂತೆ ಪರ್ಯಾಪ್ತವಾಗಿ ವಿನ್ಯಾಸಿಸಲಾದ ಕಟ್ಟಡಗಳಿಲ್ಲ. ಸುಯೋಜಿತವಾದವುಗಳು ಭೂಕಂಪ ತಾಳಿಕೊಳ್ಳುವ ವಿನ್ಯಾಸ ಹೊಂದಿಲ್ಲ. ದಿಲ್ಲಿಯ ಶೇ.80 ಕಟ್ಟಡಗಳು ಈ ಎರಡರಲ್ಲಿ ಯಾವುದಾದರೊಂದು ವರ್ಗಕ್ಕೆ ಸೇರಿದವುಗಳಾಗಿವೆ.

ಪ್ರತಿವರ್ಷ ಅಸಂಖ್ಯಾತ ಭೂಕಂಪಗಳನ್ನೆದುರಿ ಸುತ್ತಿರುವ ಜಪಾನ್‌ನಲ್ಲಿ ಕಟ್ಟಡಗಳು ಹೆಚ್ಚು ಸ್ಥಿತಿಸ್ಥಾಪಕತ್ವ ಹೊಂದಿವೆ. ಏಕೆಂದರೆ, ಅಲ್ಲಿ ಕಡ್ಡಾಯವಾಗಿ ನಿರ್ಮಾಣ ನಿಬಂಧನೆಗಳನ್ನು ಅನುಸರಿಸಲಾಗುತ್ತಿದೆ. ದಿಲ್ಲಿಯಲ್ಲಿ ಎಲ್ಲ ಫ್ಲೈಓವರ್‌ಗಳು ಹಾಗೂ ಈಗ ಹೊಸ ಆಸ್ಪತ್ರೆ ಕಟ್ಟಡಗಳನ್ನು ಭೂಕಂಪ ಪ್ರತಿರೋಧಿಗಳನ್ನಾಗಿ ಮಾಡಲಾಗುತ್ತಿದೆ. ಆದರೆ, ಭೂಕಂಪ ಪ್ರತಿರೋಧಿಗಳೆಂದು ಪ್ರತಿಪಾದಿಸಲಾಗುತ್ತಿದ್ದರೂ ಖಾಸಗಿ ಕಟ್ಟಡಗಳಲ್ಲಿ ಗುಣಮಟ್ಟ ನಿಯಂತ್ರಣವಿಲ್ಲವೆಂದು ಪಿಡಬ್ಲುಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Write A Comment