ರಾಷ್ಟ್ರೀಯ

ಪ.ಬಂ. ಚುನಾವಣೆ: ಗುಂಡೇಟಿಗೆ ಒಬ್ಬ ಬಲಿ

Pinterest LinkedIn Tumblr

pash

ಕೋಲ್ಕತ್ತ : ಪಶ್ಚಿಮ ಬಂಗಾಳದ 91 ನಗರ ಪಾಲಿಕೆಗಳಿಗೆ ಶನಿವಾರ ನಡೆಯುತ್ತಿರುವ ಚುನಾವಣೆಯಲ್ಲಿ ಹಿಂಸಾಚಾರ ಘಟನೆಗಳು ನಡೆದಿವೆ. ಬರ್ದ್ವಾನ್‌ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಗುಂಡಿಗೆ ಬಲಿಯಾಗಿದ್ದರೆ, ಉತ್ತರ 24 ಪರಗಣ ಜಿಲ್ಲೆಯಲ್ಲಿ ಗುಂಡೇಟಿನಿಂದ ಮತ್ತೊಬ್ಬರು ಗಾಯಗೊಂಡಿದ್ದಾರೆ.  ಮತ್ತೊಂದೆಡೆ, ಮೊದಲ ಎರಡು ಗಂಟೆಗಳಲ್ಲಿ ಶೇಕಡ 16ರಷ್ಟು ಮತದಾನವಾಗಿದೆ.

ಬರ್ದ್ವಾನ್‌ ಜಿಲ್ಲೆಯ ಕಟ್ವಾ ಬಸ್‌ ನಿಲ್ದಾಣ ಸಮೀಪದ ಮತಗಟ್ಟೆಯೊಂದರಲ್ಲಿ ಬ್ಲಾಂಕ್‌ ರೇಂಜ್‌ ಪಾಯಿಂಟ್‌ನಿಂದ ಹಾರಿಸಲಾದ ಗುಂಡಿಗೆ 30 ವರ್ಷದ ಇಂದ್ರಜಿತ್ ಸಿಂಗ್ ಬಲಿಯಾಗಿದ್ದಾರೆ. ಅವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ.

ಘಟನೆ ಸಂಬಂಧ ವರದಿ ನೀಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸೌಮಿತ್ರಾ ಮೋಹನ್‌ ಅವರು ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಾರ್ಡ್‌ ನಂಬರ್ 14ರಲ್ಲಿ ಜನ ದಟ್ಟನೆಯನ್ನು ನಿಯಂತ್ರಿಸುತ್ತಿದ್ದ ಪಕ್ಷದ ಬೆಂಬಲಿಗ ಸಿಂಗ್ ಅವರನ್ನು ಗ್ಯಾಂಗ್‌ಸ್ಟರ್‌ನೊಬ್ಬ ಗುಂಡಿಟ್ಟು ಕೊಂದಿದ್ದಾನೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ಇನ್ನು, ಉತ್ತರ 24 ಪರಗಣ ಜಿಲ್ಲೆಯ ತಿತಾಗಡ್‌ನ ವಾರ್ಡ್‌ನಂಬರ್ 6ರಲ್ಲಿ ಆಂಧ್ರ ವಿದ್ಯಾಲಯದ ಎದುರು ಸರತಿಯಲ್ಲಿ ನಿಂತಿದ್ದ 55 ವರ್ಷದ ಪಂಚು ಸೋನ್ಕರ್‌ ಎಂಬುವರು ಗುಂಡು ತಗುಲಿ ಗಾಯಗೊಂಡಿದ್ದಾರೆ. ಅವರ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ಬಿ.ಎನ್.ಬೋಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

16 ರಷ್ಟು ಮತದಾನ: ಮತ್ತೊಂದೆಡೆ, ‘ಮೊದಲ ಎರಡು ಗಂಟೆಗಳಲ್ಲಿ ಶೇಕಡ 16ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿವಿಧ ಭಾಗಗಳಲ್ಲಿ ಹಿಂಸಾತ್ಮಕ ಘಟನೆಗಳು ವರದಿಯಾಗಿವೆ. ಹಿಂಸಾತ್ಮಕ ಘಟನೆಯ ವಿವರ ಸಿಗುತ್ತಿದ್ದಂತೆಯೇ ಕ್ರಮಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ’ ಎಂದು ರಾಜ್ಯ ಚುನಾವಣಾ ಆಯುಕ್ತ ಸವ್ಯಸಾಚಿ ಘೋಷ್ ತಿಳಿಸಿದ್ದಾರೆ.

Write A Comment