ರಾಷ್ಟ್ರೀಯ

ಬೇಕಾಗಿದ್ದಾರೆ: 4.12 ಕೋಟಿ ವಧುಗಳು!: ಕೋಟ್ಯಂತರ ವರರಿಗೆ ಮದುವೆಗೆ ಹೆಣ್ಣಿಲ್ಲ

Pinterest LinkedIn Tumblr

Same-Sex-Marriage-d

ಲಕ್ನೊ: ನೀವು 21, 30 ಇಲ್ಲವೇ 40ರ ಹರೆಯದವರಾಗಿದ್ದು, ಮನೆಯಲ್ಲಿ ಹೆಂಡತಿಯೊಬ್ಬಳನ್ನು ಹೊಂದಿದ್ದರೆ, ನೀವು ಬಹಳ ಅದೃಷ್ಟವಂತರೆಂದೇ ತಿಳಿಯಿರಿ. ಮದುವೆಯಾಗುವ ವಯೋಮಾನದ ದೇಶದ 6.50 ಕೋಟಿ ಪುರುಷರ ಪೈಕಿ 4.12 ಕೋಟಿ ಗಂಡಸರಿಗೆ ವಧುಗಳೇ ಸಿಗುತ್ತಿಲ್ಲ. ಈ ಪುರುಷರಿಗೆ ಬಲವಂತದ ಬ್ರಹ್ಮಚರ್ಯೆ ಬಿಟ್ಟು ಬೇರೆ ದಾರಿಯಿಲ್ಲ!
ದೇಶದ ಜನತೆಯ ವೈವಾಹಿಕ ಸ್ಥಿತಿಗತಿಯ ಕುರಿತಂತೆ ಇತ್ತೀಚೆಗೆ ಬಿಡುಗಡೆಯಾಗಿರುವ ಜನಗಣತಿಯ ವರದಿಗಳು ಈ ಆಘಾತಕಾರಿ ಮಾಹಿತಿಯನ್ನು ಬೆಳಕಿಗೆ ತಂದಿವೆ.

ದೇಶದಲ್ಲಿ 20ರ ವಯೋಮಾನದ 5.63 ಕೋಟಿ ಯುವಕರಿದ್ದಾರೆ. ಇದಕ್ಕೆ ಪ್ರತಿಯಾಗಿ ಕೇವಲ 2.07 ಕೋಟಿ ಯುವತಿಯರು ಮಾತ್ರ ಇದ್ದಾರೆ. ಅಂದರೆ, 3.55 ಕೋಟಿ ವಧುಗಳ ಕೊರತೆ ಇದೆ ಅಂದ ಹಾಗಾಯಿತು.

ಅದೇರೀತಿ, 30ರ ವಯೋಮಾನದ 70.1 ಲಕ್ಷ ಗಂಡಸರಿದ್ದರೆ, ಕೇವಲ 22.1 ಲಕ್ಷ ಮಾತ್ರ ಮಹಿಳೆಯರಿದ್ದಾರೆ. ಅಂದರೆ, 47.91 ಲಕ್ಷ ವಧುಗಳ ಕೊರತೆ ಇದೆ ಎಂದು ಜನಗಣತಿಯ ಮಾಹಿತಿಗಳು ತಿಳಿಸುತ್ತವೆ.

40ರ ಹರೆಯದ ಪುರುಷರು- ಮಹಿಳೆಯರ ವಿಚಾರದಲ್ಲೂ ಅಂತರ ಕಂಡುಬಂದಿದೆ. ಈ ವಯೋಮಾನದಲ್ಲಿ 16.92 ಲಕ್ಷ ಪುರುಷರಿದ್ದರೆ, ಕೇವಲ 8.67 ಲಕ್ಷ ಮಹಿಳೆಯರಿದ್ದಾರೆ. ಅಂದರೆ, 8.25 ಲಕ್ಷ ಮಹಿಳೆಯರ ಕೊರತೆ ಇದೆ ಎಂದು ತಿಳಿದು ಬರುತ್ತದೆ.

ಈ ಮಾಹಿತಿಗಳನ್ನೆಲ್ಲ ಒಗ್ಗೂಡಿಸಿದರೆ, 6.50 ಕೋಟಿ ಪುರುಷರಿಗೆ ಕೇವಲ 2.38 ಕೋಟಿ ವಧುಗಳು ಮಾತ್ರ ಲಭ್ಯರಿದ್ದಾರೆ ಎಂಬುದು ತಿಳಿದುಬರುತ್ತದೆ. ಅಂದರೆ, ಐವರಲ್ಲಿ ಮೂವರು ಪುರುಷರಿಗೆ ವಿವಾಹಭಾಗ್ಯ ದುರ್ಲಭವೇ ಸರಿ. ಆದ್ದರಿಂದ ಈ ಪುರುಷರಿಗೆ ಬಲವಂತದ ಬ್ರಹ್ಮಚರ್ಯೆ ಅನಿವಾರ್ಯವೂ ಹೌದು!

1970, 80 ಮತ್ತು 90ರ ದಶಕಗಳಲ್ಲಿ ಲಕ್ಷಾಂತರ ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಿದ ಪರಿಣಾಮವಾಗಿ ಈಗ ಪುರುಷರು ಮತ್ತು ಮಹಿಳೆಯರ ಸಂಖ್ಯೆ ನಡುವೆ ಭಾರೀ ಅಂತರ ಉಂಟಾಗಿದೆ. ದೇಶದಲ್ಲಿನ ಭಾರೀ ಅಸಂತುಲಿತ ಲಿಂಗಾನುಪಾತದ ಪರಿಸ್ಥಿತಿಯಿಂದಾಗಿ ವಧುಗಳು ನಾಪತ್ತೆಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ ಸಾವಿರ ಪುರುಷರಿಗೆ 908 ಮಹಿಳೆಯರು ಇದ್ದಾರೆ. ನೈಸರ್ಗಿಕ ಲಿಂಗಾನುಪಾತಕ್ಕೆ (ಸಾವಿರಕ್ಕೆ 954) ಹೋಲಿಸಿದರೂ ನಮ್ಮ ದೇಶದಲ್ಲಿನ ಪರಿಸ್ಥಿತಿ ಹೀನಾಯವಾಗಿದೆ.

ಕಳೆದು ಹೋಗಿರುವ ಕೆಲವು ದಶಕಗಳಲ್ಲಿ ಹೆಣ್ಣು ಭ್ರೂಣಗಳನ್ನು ಕರುಣೆಯಿಲ್ಲದೆ ಹತ್ಯೆ ಮಾಡಿದ್ದರಿಂದಾಗಿ ಇಂದಿನ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ಅವಧಿಯಲ್ಲಿ ಲಿಂಗ ನಿರ್ಧಾರ ಪರೀಕ್ಷೆಗಳು ದೇಶದಲ್ಲಿ ತಲೆ ಎತ್ತಿದ್ದವು. ಅದೀಗ ಗ್ರಾಮೀಣ ಪ್ರದೇಶಗಳಿಗೂ ಹಬ್ಬುತ್ತಿದೆ ಎಂದು ವೈದ್ಯೆ ಡಾ.ನೀಲಿಮಾ ಸಿಂಗ್ ಬೊಟ್ಟು ಮಾಡಿ ತೋರಿಸುತ್ತಾರೆ.

Write A Comment