ಅಹ್ಮದಾಬಾದ್: ಪತ್ನಿ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಒತ್ತಡ ಹೇರುತ್ತಿದ್ದ ಪತಿಯೊಬ್ಬ ನಿರಾಕರಿಸಿದ ಕಾರಣಕ್ಕೆ ಆಕೆಯ ಮೇಲೆ ಬರ್ಬರವಾಗಿ ಅತ್ಯಾಚಾರವೆಸಗಿ ಕೈ ಕಾಲು ಕಟ್ಟಿ ಬೆತ್ತಲೆಯಾಗಿ ಮನೆಯಲ್ಲಿ ಕೂಡಿ ಹಾಕಿದ್ದ ಘಟನೆ ನಡೆದಿದೆ.
ಅಹ್ಮದಾಬಾದಿನ ಶಹಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 36 ವರ್ಷದ ಮಹಿಳೆಗೆ ಈ ಮೊದಲೇ ಎರಡು ವಿವಾಹವಾಗಿದ್ದು ಶಹಾಪುರದ ವ್ಯಕ್ತಿಯನ್ನು ಮೂರನೇ ಬಾರಿಗೆ ವಿವಾಹವಾಗಿದ್ದಳು. ಎರಡನೇ ಪತಿಯಿಂದ ಒಬ್ಬ ಮಗನೂ ಇದ್ದು ಆತನ ನಿರ್ವಹಣೆಗಾಗಿ ಆಕೆಯ ಹೆಸರಿನಲ್ಲಿ ಕೊಂಚ ಆಸ್ತಿ ಇತ್ತು ಎನ್ನಲಾಗಿದೆ.
ಮಗನನ್ನು ಮಹಿಳೆ ತನ್ನ ಸಹೋದರನ ಮನೆಯಲ್ಲಿ ಬಿಟ್ಟಿದ್ದು, ಮೂರನೇ ಪತಿ ಆಕೆಯ ಹೆಸರಿನಲ್ಲಿರುವ ಆಸ್ತಿಗಾಗಿ ಪೀಡಿಸುತ್ತಿದ್ದನೆನ್ನಲಾಗಿದೆ. ಏಪ್ರಿಲ್ 16 ರಂದು ಪತಿ- ಪತ್ನಿ ನಡುವೆ ಈ ಕುರಿತು ಗಲಾಟೆ ನಡೆದಿದ್ದು, ರೊಚ್ಚಿಗೆದ್ದ ಪತಿ ಆಕೆಯ ಕೈ ಕಾಲು ಕಟ್ಟಿ ಬರ್ಬರವಾಗಿ ಅತ್ಯಾಚಾರವೆಸಗಿರುವುದಲ್ಲದೇ ಬೆತ್ತಲೆಗೊಳಿಸಿ ಮನೆಯಲ್ಲಿಯೇ ಕೂಡಿ ಹಾಕಿ ತೆರಳಿದ್ದಾನೆ.
ತನ್ನ ಬಾಯಿಗೆ ತುರುಕಿದ್ದ ಬಟ್ಟೆಯನ್ನು ಬಿಡಿಸಿಕೊಂಡ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದು, ನೆರವಿಗೆ ಧಾವಿಸಿದ ನೆರೆಹೊರೆಯವರು ಮಹಿಳೆಯನ್ನು ಬಂಧಮುಕ್ತಗೊಳಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಮಹಿಳೆ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಆಕೆಯ ಪತಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.