ರಾಷ್ಟ್ರೀಯ

ಹೇಗಾಯಿತು ನೇತಾಜಿ ಸುಭಾಷ್‌ಚಂದ್ರಬೋಸ್ ಅಂತ್ಯ..?

Pinterest LinkedIn Tumblr

Nethaji-Bose

ಸುಭಾಷ್‌ಚಂದ್ರಬೋಸ್ ಈ ಭಾರತ ಕಂಡ ಅಪ್ರತಿಮ ಸೇನಾನಿ. ತಮ್ಮ ಇಂಡಿಯನ್ ಆರ್ಮಿ ಮೂಲಕ ಅಂದಿನ ಬ್ರಿಟಿಷ್ ಆಳರಸರ ಎದೆ ನಡುಗಿಸಿದ ಧೀರ. ಮಹಾ ದೇಶಭಕ್ತನಾದಂತೆಯೇ, ಮಹಾನ್ ಸಂಘಟಕನೂ ಹೌದು. ದೇಶದಲ್ಲಿ ಗಾಂಧೀಜಿ ಮತ್ತವರ ಸಹ ಹೋರಾಟಗಾರರು ಅಹಿಂಸೆಯ ಮೂಲಕವೇ ಬ್ರಿಟಿಷರನ್ನು ದೇಶದಿಂದ ಓಡಿಸುವ ಸಂಕಲ್ಪ ಮಾಡಿದಾಗ ನೇತಾಜಿಯವರ ಬಲ ಪ್ರಯೋಗದ ವಾದಕ್ಕೆ ಹಿನ್ನಡೆಯಾಯಿತು. ಎಲ್ಲರೂ ಅಂದಿನ ಆ ಸಂಗ್ರಾಮಕ್ಕೆ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸೆ ಹಾದಿಯನ್ನೇ ಅಪ್ಪಿಕೊಂಡರು.

ಈ ಹಿನ್ನೆಲೆಯಲ್ಲಿ ಬೋಸ್ ಜಪಾನ್, ಜರ್ಮನಿ ಮುಂತಾದ ಹೊರರಾಷ್ಟ್ರಗಳಲ್ಲಿ ಸಂಚರಿಸಿ ಸೈನ್ಯ ಕಟ್ಟಿದರು. ಭಾರತದಲ್ಲಿ ಅಹಿಂಸಾ ಹೋರಾಟ ನಡೆಸುತ್ತಿದ್ದ ಒಂದು ಶಕ್ತಿಗೆ ಪರ್ಯಾಯ ಶಕ್ತಿಯಾಗಿ ಸುಭಾಷ್‌ಚಂದ್ರಬೋಸ್ ಬೆಳೆದರು. ಆಗ ಬೋಸ್ ಜರ್ಮನಿಯಲ್ಲಿದ್ದರು. ಬೋಸ್ ಎಂದರೆ ಬ್ರಿಟಿಷರಿಗೂ ಭಯವಿತ್ತು. ಅದಕ್ಕಿಂತ ಹೆಚ್ಚಾಗಿ ಭಾರತದ ಕೆಲ ನಾಯಕರಿಗೆ ನೇತಾಜಿಯವರ ನಾಯಕತ್ವದ ಬಗ್ಗೆ ಆತಂಕವಿತ್ತು. ಬಹುಶಃ ಇದೇ ನೇತಾಜಿ ಸುಭಾಷ್‌ಚಂದ್ರಬೋಸರ ನಿಗೂಢ ಸಾವಿಗೆ ಕಾರಣವಾಗಿರಬಹುದು ಎಂಬುದು ಒಂದು ವಾದವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷಗಳೇ ಕಳೆದಿವೆ. ಆದರೆ, ನೇತಾಜಿ ಸಾವಿನ ರಹಸ್ಯವನ್ನು ಮಾತ್ರ ಬಯಲು ಮಾಡಲು ನಮ್ಮಿಂದ ಆಗಲಿಲ್ಲ. ಬೋಸ್ ನಿಜವಾಗಿಯೂ ವಿಮಾನ ಅಪಘಾತದಲ್ಲಿ ಮೃತಪಟ್ಟರೇ ಅಥವಾ ಸಹಜ ಸಾವನ್ನಪ್ಪಿದರೇ ಅಥವಾ ಇನ್ನೂ ಮೂರನೆ ಕಾರಣ ಏನಾದರೂ ಇದೆಯೇ ಎಂಬುದು ಬಯಲಾಗಲೇ ಇಲ್ಲ. ಇದಕ್ಕೆ ಕಾರಣ, ಸ್ವತಂತ್ರ್ಯ ಭಾರತದ ನೂತನ ಸರ್ಕಾರಕ್ಕೆ (ನೆಹರೂ ಸರ್ಕಾರ) ಈ ವಿಷಯ ಪ್ರಿಯವಾಗಿರಲಿಲ್ಲ. ಅದಿರಲಿ, ಒಂದು ಮೂಲದ ಪ್ರಕಾರ, ಸುಭಾಷ್‌ಚಂದ್ರರ ಅಂತ್ಯದ ಬಗ್ಗೆ ಪ್ರಮುಖವಾಗಿ ಮೂರು ಕಾರಣಗಳು ಲಭ್ಯವಿವೆ. ಒಂದು ಮೂಲದಂತೆ ನೇತಾಜಿ ಅವರು ತನ್ನ ಪೋಷಕ ರಾಷ್ಟ್ರವಾಗಿದ್ದ ಜಪಾನ್ ಶರಣಾಗತಿಗೆ ನಿರ್ಧರಿಸಿದ ಬೆನ್ನಲ್ಲೇ, ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮರಣಿಸುತ್ತಾರೆ.

ಎರಡನೆ ವರದಿ ಪ್ರಕಾರ, 1945ರ ಆಗಸ್ಟ್ ನಂತರ ಬೋಸ್-ರಷ್ಯಾ (ಅಂದಿನ ಯುಎಸ್‌ಎಸ್‌ಆರ್)ದಲ್ಲಿಯೇ ಇದ್ದರು. ಹಾಗಾಗಿ ತೈಪೆ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರಲಿಲ್ಲ. ಇನ್ನು ಮೂರನೆಯದು ಅಚ್ಚರಿಯ ವಿಷಯ. ಈ ಎಲ್ಲ ದಂತಕಥೆಗಳ ನಂತರ ಸುಭಾಷ್‌ಚಂದ್ರಬೋಸ್ ಸಂತ ವೇಷಧಾರಿಯಾಗಿ ಭಾರತದಲ್ಲೇ ಸಂಚರಿಸುತ್ತಿದ್ದರು..! ಮೇಲ್ನೋಟಕ್ಕೆ ಈ ಮೂರೂ ಹೇಳಿಕೆಗಳು ಒಪ್ಪುವಂತೆಯೇ ಇವೆ. ಬಹುತೇಕ ಭಾರತೀಯರು ಒಪ್ಪಿಕೊಂಡೂ ಆಗಿದೆ. ಆದರೆ, ಇನ್ನೂ ನಾಲ್ಕನೆಯ ಕಾರಣವೂ ಇದೆ ಎನ್ನುತ್ತವೆ ಕೆಲ ದಾಖಲೆಗಳು. ಆದೆಂದರೆ, ಸ್ವಾತಂತ್ರ್ಯಾ ನಂತರದಲ್ಲಿ ಸುಭಾಷ್‌ಚಂದ್ರಬೋಸರು ತಮಗೆ ಪ್ರತಿಸ್ಪರ್ಧಿಯಾಗಬಹುದು ಎಂಬ ರಾಜಕೀಯ ದೂರಾಲೋಚನೆಯಿಂದ ಅಂದಿನ ನಾಯಕರು (ನೆಹರೂ..?) ಅವರೇ ಇದರಲ್ಲಿ ಪಾತ್ರ ವಹಿಸಿದ್ದರು ಎನ್ನಲಾಗಿದೆ. 1945ರ ಆಗಸ್ಟ್‌ನಿಂದ ರಷ್ಯಾದಲ್ಲೇ ವಾಸ್ತವ್ಯವಿದ್ದರು ನೇತಾಜಿ. ಈ ಸಂದರ್ಭದಲ್ಲೇ ಅಂದಿನ ಸೋವಿಯತ್ ರಷ್ಯಾ ಒಕ್ಕೂಟದ ಅಧ್ಯಕ್ಷರಾಗಿದ್ದ ಜೋಸೆಫ್ ಸ್ಟಾಲಿನ್ ಅವರ ನೆರವಿನಿಂದ ನೇತಾಜಿಯವರ ಅಂತ್ಯ ಕಾಣಿಸಲಾಯಿತು ಎಂಬ ಕಥೆಯೂ ಇದೆ.

ಒಟ್ಟಾರೆ ಅಸಾಧಾರಣ ಸಾಮರ್ಥ್ಯ-ಧೈರ್ಯಸ್ಥ ಹಾಗೂ ಮೇಧಾವಿಯೂ ಆಗಿದ್ದ ರಾಷ್ಟ್ರಪ್ರೇಮಿಯೊಬ್ಬರ ಅಂತ್ಯ ಹೇಗಾಯಿತು ಎಂಬುದು ಭಾರತೀಯರಿಗೆ ತಿಳಿಯಲಿಲ್ಲ. ಅದನ್ನು ತಿಳಿದುಕೊಳ್ಳುವುದು ಅವರಿಗೆ ಮುಖ್ಯವಾಗಲೂ ಇಲ್ಲ. ಪುಡಿನಾಯಕರಿಗೆಲ್ಲ ಹುಲಿವೇಷ ತೊಡಿಸಿ ಮೆರೆಸುವ ಭಾರತೀಯರು ಅದೇಕೋ ಸುಭಾಷರ ಬಗ್ಗೆ ಹೆಚ್ಚು ಆಸಕ್ತಿಯನ್ನೇ ವಹಿಸಲಿಲ್ಲ. ಇದು ಈ ದೇಶದ ದುರಂತಗಳಲ್ಲೊಂದು ಎನ್ನಬಹುದು. ಈ ಎಲ್ಲ ಅಂಶಗಳನ್ನೂ ಗಮನಿಸಿದಾಗ ನಮ್ಮ ಆ ಕಾಲದ ಸರ್ಕಾರಗಳು ನೇತಾಜಿ, ಭಗತ್‌ಸಿಂಗ್‌ರಂಥ ಮುಂಚೂಣಿ ನಾಯಕರ ಬಗ್ಗೆ ಯಾವ ರೀತಿ ನಡೆದುಕೊಂಡವು ಎಂಬ ಅಂಶ ಪ್ರಸ್ತುತವಾಗುತ್ತದೆ. ಮಹಾನ್ ದೇಶಪ್ರೇಮಿಗಳ ಬಗ್ಗೆ ಬೇಹುಗಾರಿಕೆ ನಡೆಸುವ ಅಗತ್ಯ ಏಕಾಗಿ ಅಂದಿನ ನಾಯಕರಿಗಿತ್ತು ಎಂಬುದೂ ಸ್ಪಷ್ಟವಾಗುತ್ತದೆ.

Write A Comment