ಹೈದರಾಬಾದ್, ಏ.12- ಆತ ಒಂದು ಕಾಲದಲ್ಲಿ ಬಹುಕೋಟಿ ಒಡೆಯ. ಬಯಸಿದ್ದೆಲ್ಲ ಬೇಕು ಎಂದಾಗ ಸೇವೆ ಮಾಡಲು ನೂರೆಂಟು ಆಳುಕಾಳುಗಳು. ಆದರೆ, ಇಂದು 50ರೂಪಾಯಿಗಾಗಿ ಕೂಲಿ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದು ಯಾವುದೇ ಸಿನಿಮಾದ ಕಥೆಯೂ ಅಲ್ಲ, ಧಾರಾವಾಹಿಯ ಮುನ್ನುಡಿಯೂ ಅಲ್ಲ. ಕಾರ್ಪೊರೇಟ್ ಜಗತ್ತನ್ನೇ ತಲ್ಲಣಗೊಳಿಸಿದ್ದ ಬಹುಕೋಟಿ ಸತ್ಯಂ ಕಂಪ್ಯೂಟರ್ ಹಗರಣದ ಪ್ರಮುಖ ಆರೋಪಿ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಮಲಿಂಗರಾಜು ಜೀವನದ ಕಥೆ.
ಹೈದರಾಬಾದ್‌ನ ಚಂಚಲಗುಡ ವಿಶೇಷ ಸಿಬಿಐ ನ್ಯಾಯಾಲಯದಲ್ಲಿರುವ ಸತ್ಯಂರಾಜುಗೆ ಪ್ರತಿದಿನ 50ರೂಪಾಯಿ ಕೂಲಿ ನೀಡಲಾಗುತ್ತದೆ. ಈ 50 ರೂಪಾಯಿ ಗಳಿಕೆ ಮಾಡಬೇಕಾದರೆ ಆತ ಜೈಲಿನಲ್ಲಿ ನಿಗದಿಪಡಿಸಿದ ಕೆಲಸವನ್ನು ಮಾಡಬೇಕು.
4148 ಸಂಖ್ಯೆಯ ಕೈದಿಯಾಗಿರುವ ರಾಮಲಿಂಗರಾಜುಗೆ ಜೈಲಿನ ನಿಯಮದಂತೆ ಪ್ರತಿದಿನ 50ರೂಪಾಯಿ ಕೂಲಿ ನೀಡಲಾಗುತ್ತಿದೆ. ಇದರಲ್ಲಿ ಸೋಪು, ಟೂತ್‌ಪೇಸ್ಟ್, ಬಿಸ್ಕೆಟ್, ಬ್ರೆಡ್, ನೀರಿನ ಬಾಟಲ್ ಹಾಗೂ ಕ್ಯಾಂಟಿನ್‌ಗೆ 25ರೂಪಾಯಿ ನೀಡಬೇಕು. ಉಳಿದ 25 ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಸದ್ಯಕ್ಕೆ ಚಂಚಲಗುಡದಲ್ಲಿ 10 ಆರೋಪಿಗಳಿದ್ದು, ರಾಮಲಿಂಗರಾಜು ಸೇರಿದಂತೆ ಎಲ್ಲರಿಗೂ 50ರೂ. ಕೂಲಿ ನಿಗದಿಪಡಿಸಲಾಗಿದೆ. ಪ್ರತಿಯೊಬ್ಬ ಆರೋಪಿಯೂ ತಮಗಿಷ್ಟವಾದ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬೇಕು. ಬಟ್ಟೆ ತೊಳೆಯುವುದು, ತೋಟಗಾರಿಕೆ, ಬಡಗಿ, ಕಲ್ಲು ಒಡೆಯುವುದು, ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು ಸೇರಿದಂತೆ ಯಾವುದಾದರೊಂದು ಕೆಲಸವನ್ನು ಮಾಡಲೇಬೇಕೆಂಬ ನಿಯಮವಿದೆ.
ತಮಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ವಿನಾಯಿತಿ ನೀಡಬೇಕೆಂದು ರಾಮಲಿಂಗರಾಜು ಮನವಿ ಮಾಡಿಕೊಂಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಅವರಿಗೆ ಸಣ್ಣ ಕೆಲಸವೊಂದನ್ನು ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ರಾಮಲಿಂಗರಾಜುಗೆ ಜೈಲಿನ ಸ್ವಚ್ಛತೆ ಮಾಡುವ ಕೆಲಸವನ್ನು ನೀಡಲಾಗಿದೆ. ಇದರಂತೆ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ದಿನಕ್ಕೆ ಮೂರು ಬಾರಿ ಜೈಲಿನ ಆವರಣದಲ್ಲಿ ಕಸ ಗುಡಿಸುವುದು, ಕಸ ವಿಲೇವಾರಿ ಮಾಡುವ ಕೆಲಸ ನೀಡಲಾಗಿದೆ. ಉಳಿದ ಸಹೋದರರು ಮತ್ತು ಇತರೆ ಆರೋಪಿಗಳಿಗೆ ಬೇರೆ ಬೇರೆ ರೀತಿಯ ಕೆಲಸ ನಿಗದಿಪಡಿಸಲಾಗಿದೆ.