ಆಗ್ರಾ, ಏ.1- ತಾನು ಮಾಡಿದ ಕೆಲಸಕ್ಕೆ ಕೂಲಿ ಕೇಳಿದ ಯುವಕನನ್ನು ಅಮಾನವೀಯವಾಗಿ ಥಳಿಸಿ ಕೊಲೆ ಮಾಡಿರುವ ದಾರುಣ ಘಟನೆ ಇಂದು ಬೆಳಿಗ್ಗೆ ಇಲ್ಲಿ ನಡೆದಿದೆ. ಕೂಲಿ ಕೇಳಿ ಪ್ರಾಣ ಕಳೆದುಕೊಂಡ ಯುವಕನನ್ನು ಆಗ್ರಾ ಪಟ್ಟಣದ ಆರ್.ಯಾದವ್ ಎಂದು ಗುರುತಿಸಲಾಗಿದೆ. ಕೇವಲ 100ರೂ. ಕೂಲಿ ಕೇಳಿದ್ದಕ್ಕೆ ಸ್ಥಳೀಯ ಗುತ್ತಿಗೆದಾರ ಮೋಹನ್ ಈ ದುಷ್ಕೃತ್ಯ ಎಸಗಿದ್ದಾನೆ. ಈ ಘಟನೆಯಿಂದ ಆಕ್ರೋಶಗೊಂಡ ಜನತೆ ಒಟ್ಟಾಗಿ ಹಂತಕ ಮೋಹನ್ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದರು. ನಂತರ ಸ್ಥಳಕ್ಕೆ ದಾವಿಸಿದ ಪೊಲೀಸರು ಉದ್ರಿಕ್ತ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿ ರಬ್ಬರ್ ಗುಂಡು ಹಾರಿಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಾಲೀಕನ ಹಲ್ಲೆಯಿಂದ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕಿವಿ, ಮೂಗುಗಳಿಂದ ರಕ್ತಸ್ರಾವವಾಗಿದ್ದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.