ಪಟ್ನಾ: ಭಿಕ್ಷುಕರಿಗಾಗಿ, ಭಿಕ್ಷುಕರಿಂದ, ಭಿಕ್ಷುಕರೇ ನಡೆಸುವ ಬ್ಯಾಂಕನ್ನು ಎಲ್ಲಾದರೂ ನೋಡಿದ್ದೀರಾ? ಇದನ್ನು ನೋಡಬೇಕಾದರೆ ನೀವು ಬಿಹಾರಕ್ಕೆ ಹೋಗಬೇಕು.
ಹೌದು, ಬಿಹಾರದ ಗಯಾ ನಗರದಲ್ಲಿ ಭಿಕ್ಷುಕರ ಗುಂಪೊಂದು ಸೇರಿ ತಮಗಾಗಿ ಬ್ಯಾಂಕ್ ಆರಂಭಿಸಿದ್ದಾರೆ. ಮಂಗಳ ಎಂಬ ಹೆಸರಿನ ಈ ಬ್ಯಾಂಕ್‌ನ ಎಲ್ಲಾ ವಿಭಾಗಗಳಲ್ಲೂ ಭಿಕ್ಷುಕರೇ ಕಾರ್ಯ ನಿರ್ವಹಿಸುತ್ತಾರೆ.
ಗಯಾ ನಗರದಲ್ಲಿರುವ ಮಂಗಳಗೌರಿ ಮಂದಿರದಲ್ಲಿ ಭಿಕ್ಷೆ ಬೇಡುತ್ತಿದ್ದ ಇವರಿಗೆ ಕಾಡುತ್ತಿದ್ದ ಆರ್ಥಿಕ ಭದ್ರತೆಗೆ ಪರಿಹಾರವಾಗಿ ಈ ಬ್ಯಾಂಕ್ ಜನ್ಮತಳೆದಿದೆ. ಒಟ್ಟು 40 ಮಂದಿ ಭಿಕ್ಷುಕರು ಈ ಬ್ಯಾಂಕ್‌ನ ಸದಸ್ಯರು.
‘ನನಗೆ ಖಾತೆಗಳು ಮತ್ತು ಬ್ಯಾಂಕ್‌ನ ಇತರ ಕೆಲಸಗಳನ್ನು ನಿರ್ವಹಿಸುವಷ್ಟು ವಿದ್ಯೆ ಇದೆ. ಪ್ರತಿ ಮಂಗಳವಾರ, ಎಲ್ಲಾ ಸದಸ್ಯರು (ಭಿಕ್ಷುಕರು) ₨ 20 ಠೇವಣಿ ಮಾಡುವಂತೆ ಸೂಚಿಸಲಾಗಿದೆ. ಇದು ವಾರಕ್ಕೆ ₨ 800 ಆಗುತ್ತದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ರಾಜ್‌್ ಕುಮಾರ್ ಮಾಂಜಿ ಹೇಳಿದರು.
‘ಎಷ್ಟೋ ಮಂದಿ ಭಿಕ್ಷುಕರು ಬ್ಯಾಂಕ್ ಖಾತೆ ಇಲ್ಲದೆ, ಬಿಪಿಎಲ್ ಕಾರ್ಡ್ (ಬಡತನ ರೇಖೆಗಿಂತ ಕೆಳಗಿರುವ) ಅಥವಾ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬ ಭಿಕ್ಷುಕನು ಬ್ಯಾಂಕ್ ಖಾತೆಯನ್ನು ಹೊಂದಬೇಕು’ ಎಂದರು.
‘ನನಗೆ ತುರ್ತು ಸಂದರ್ಭದಲ್ಲಿ ಈ ಬ್ಯಾಂಕ್‌ನಿಂದ ಸಹಾಯವಾಗಿದೆ. ಅಗತ್ಯ ಸಮಯಕ್ಕೆ ದೊರೆತ ಸಾಲದಿಂದ ಹಣಕ್ಕಾಗಿ ಪರಿತಪಿಸುವುದು ತಪ್ಪಿತು. ಮಕ್ಕಳು ಈ ವೃತ್ತಿಯಲ್ಲಿ ಬೆಳೆಯುವುದು ನಮಗಿಷ್ಟವಿಲ್ಲ. ಅವರಿಗೆ ಉತ್ತಮ ಶಿಕ್ಷಣ ನೀಡಿ ಬೇರೆ ವೃತ್ತಿಯಲ್ಲಿ ಮುನ್ನಡೆಯುವಂತೆ ರೂಪಿಸುತ್ತೇವೆ’ ಎಂದು ಅವರು ವಿವರಿಸಿದರು.