ನವದೆಹಲಿ,ಮಾ.31-ರೈಲ್ವೆ ಇಲಾಖೆಯನ್ನು ಸಮರ್ಪಕವಾಗಿ ನಿಭಾಯಿಸಲು ವಿಫಲವಾಗಿರುವ ಸಚಿವ ಸುರೇಶ್‌ಪ್ರಭು ಕಾರ್ಯವೈಖರಿಗೆ ಪ್ರಧಾನಿ ಮೋದಿ ಮೊದಲ ಬಾರಿ ಕಿಡಿಕಾರಿದ್ದಾರೆ. ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ವಿಫಲವಾಗುತ್ತಿರುವುದು ಹಾಗೂ ಪದೇ ಪದೇ ತಮ್ಮ ಕಾರ್ಯಾಲಯಕ್ಕೆ ಬರುತ್ತಿರುವ ದೂರಿನಿಂದ ಬೇಸರಗೊಂಡು ಸುರೇಶ್‌ಪ್ರಭು ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ರೈಲುಗಳು ಬಾರದಿರುವುದು, ನಿಲ್ದಾಣದಲ್ಲಿ ಸ್ವಚ್ಚತೆ ಇಲ್ಲದಿರುವುದು,
ಶೌಚಾಲಯಗಳ ದುರ್ನಾತ, ಕುಡಿಯುವ ನೀರು ಇಲ್ಲದಿರುವುದು, ಗಬ್ಬುನಾರುತ್ತಿರುವ ನಿಲ್ದಾಣ ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ಪ್ರತಿ ದಿನ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.
ಈ ದೂರುಗಳನ್ನು ರೈಲ್ವೆ ಇಲಾಖೆಗೆ ವರ್ಗಾಯಿಸಲಾಗಿದ್ದು, ಖುದ್ದು ಪ್ರಧಾನಿಯೇ ರೈಲ್ವೆ ಸಚಿವರು ಮತ್ತು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾಗಿ ವರದಿಯಾಗಿದೆ. ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಸಚಿವರು ಮತ್ತು ಇಲಾಖೆಯ ಪ್ರಥಮ ಕರ್ತವ್ಯ. ಪ್ರತಿದಿನ ನೀವು ದೇಶದ ಯಾವ ಯಾವ ಭಾಗಗಳಲ್ಲಿ ಏನು ಸಮಸ್ಯೆ ಇದೆ ಎಂಬುದನ್ನು ಅಧಿಕಾರಿಗಳ ಮೂಲಕ ಮಾಹಿತಿ ಪಡೆಯಬೇಕು. ಇಲ್ಲದಿದ್ದರೆ ಇಲಾಖೆ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಸಲಹೆ ಮಾಡಿದ್ದಾರೆ. ಪ್ರತಿ ದಿನ ಕೊಟ್ಯಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅವರ ಸುರಕ್ಷತೆ ಕಾಪಾಡುವುದು ನಿಮ್ಮ ಜವಾಬ್ದಾರಿ. ಇಲಾಖೆಯಲ್ಲಿ ನೀವು ಕೈಗೊಂಡಿರುವ ಸುಧಾರಣೆಗಳು ಏನೇನೂ ಸಾಲದು ಎಂದು ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.