ಭುವನೇಶ್ವರ್: ಮಕ್ಕಳಿಲ್ಲದ ದಂಪತಿ ಪವಿತ್ರ ಜಲದಲ್ಲಿ ಸ್ನಾನ ಮಾಡಿದರೆ ತಮಗೆ ಮಗುವಾಗುತ್ತದೆಂಬ ನಂಬಿಕೆಯಿಂದ ಹರಾಜು ವೇಳೆ 41 ಸಾವಿರ ರೂ. ತೆತ್ತು ಒಂದು ಕೊಡ ನೀರನ್ನು ಖರೀದಿಸಿದ್ದಾರೆ.
ಭುವನೇಶ್ವರದ ಲಿಂಗರಾಜ ದೇವಾಲಯದ ಬಾವಿಯಲ್ಲಿನ ಈ ನೀರಿನಿಂದ ಸ್ನಾನ ಮಾಡಿದರೆ ಮಕ್ಕಳಾಗುತ್ತದೆಂಬ ಪ್ರತೀತಿಯಿದ್ದು, ಪ್ರತಿ ವರ್ಷ ಆಶೋಕಾಷ್ಟಮಿ ದಿನದಂದು ಪವಿತ್ರ ಜಲದ ಹರಾಜು ನಡೆಸಲಾಗುತ್ತದೆ.
ಇದಕ್ಕಾಗಿ ನೂರಾರು ಮಂದಿ ದಂಪತಿಗಳು ಅಲ್ಲಿ ಸೇರಿದ್ದು, ಅಂತಿಮವಾಗಿ 41 ಸಾವಿರ ರೂ. ಕೂಗಿದ ದಂಪತಿಗಳಿಗೆ ಮೊದಲ ಕೊಡಪಾನ ನೀಡಲಾಯಿತು. ಎರಡನೇ ಕೊಡಪಾನದಲ್ಲಿದ್ದ ಪವಿತ್ರ ಜಲ 11,500 ಸಾವಿರ ರೂ. ಗಳಿಗೆ ಹರಾಜಾಗಿದೆ. ಕಳೆದ ವರ್ಷ ಮೊದಲ ಪವಿತ್ರ ಜಲ 21 ಸಾವಿರ ರೂ.ಗಳಿಗೆ ಹರಾಜಾಗಿತ್ತು.
ಲಿಂಗರಾಜ ದೇವಾಲಯದ ಆವರಣದಲ್ಲಿರುವ ಬಾವಿಯಲ್ಲಿನ ನೀರು ಅತ್ಯಂತ ಪವಿತ್ರವೆಂದು ಭಕ್ತರು ನಂಬಿಕೆ ಹೊಂದಿದ್ದು, ವರ್ಷಕ್ಕೊಮ್ಮೆ ಮಾತ್ರ ಈ ಬಾವಿಯಿಂದ ನೀರನ್ನು ತೆಗೆದುಕೊಳ್ಳಲಾಗುತ್ತದೆ. ದೇವಸ್ಥಾನದ ಆವರಣದಲ್ಲಿಯೇ ಸ್ನಾನಗೃಹ ನಿರ್ಮಿಸಲಾಗಿದ್ದು, ಈ ಪವಿತ್ರ ಜಲದಿಂದ ಸ್ನಾನ ಮಾಡಿ ಪೂಜೆ ಸಲ್ಲಿಸಿದರೆ ಮಕ್ಕಳಾಗುವುದು ಖಚಿತ ಎಂಬ ನಂಬಿಕೆ ಭಕ್ತರಲ್ಲಿದೆ.