ರಾಷ್ಟ್ರೀಯ

ಸಂಘಟನೆ ಮತ್ತು ಸಮಾಜ ಸೇವಾ ಕ್ಷೇತ್ರದ ಸಾಧನೆಗೆ ‘ರಾಷ್ಟ್ರೀಯ ಏಕತಾ ಪ್ರಶಸ್ತಿ’ ಸ್ವೀಕರಿಸಿದ ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿ

Pinterest LinkedIn Tumblr

DELHI AWARD PIC 3

ನವ ದೆಹಲಿ: ತಾನು ನಿರಂತರವಾಗಿ ದೇಶ-ವಿದೇಶದಲ್ಲಿ ಗೈದ ಸಂಘಟನೆ-ಸಮುದಾಯ-ಸಮಾಜ ಸೇವಾ ಕ್ಷೇತ್ರದ ಸಾಧನೆಗಳಿಗಾಗಿ ಹಾಗೂ ತನ್ನ ನಿಸ್ವಾರ್ಥವಾದ ನಾಡು-ನುಡಿ ಸೇವೆ, ಸಾಹಿತ್ಯ-ಸಂಸ್ಕೃತಿ-ಸಾಂಘಿಕ ಸೇವೆಗಳಿಗಾಗಿ ಬಹ್ರೈನ್ ವಾಸ್ತವ್ಯದ ಯುವ ಸಾಧಕ, ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿಯವರು ನವ ದೆಹಲಿಯ ಚಾಣಕ್ಯಪುರಿಯ ತೀನ್ ಮೂರ್ತಿ ಭವನದಲ್ಲಿ ಜರಗಿದ ವೈಭವದ ‘ರಾಷ್ಟ್ರೀಯ ಐಕ್ಯತಾ ಉತ್ಸವ’ದಲ್ಲಿ ಪ್ರತಿಷ್ಠಿತ ‘ರಾಷ್ಟ್ರೀಯ ಏಕತಾ ಪ್ರಶಸ್ತಿ’ಯನ್ನು ಹಲವು ರಾಜ್ಯಗಳ ಮಾಜಿ ರಾಜ್ಯಪಾಲ ತಥಾ ಮಾಜಿ ಕೇಂದ್ರ ಸಚಿವರಾದ ಡಾ. ಭೀಷ್ಮ ನಾರಾಯಣ ಸಿಂಗ್ ಅವರಿಂದ ಸ್ವೀಕರಿಸಿದರು.

ರಾಷ್ಟ್ರ ಮಟ್ಟದ ಈ ಪ್ರಶಸ್ತಿಯನ್ನು ಕೊಡಮಾಡುವ ‘ಆಲ್ ಇಂಡಿಯಾ ನ್ಯಾಷನಲ್ ಯೂನಿಟಿ ಕೌನ್ಸಿಲ್’ನ ಸರ್ದಾರ್ ವಲ್ಲಭಭಾಯಿ ಪಟೇಲ್ ಸಂಸ್ಮರಣೆಯ ಸಮ್ಮೇಳನದ ಆದ್ಯ ಭಾಗವಾಗಿದ್ದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೌನ್ಸಿಲ್‍ನ ಅಧ್ಯಕ್ಷರಾಗಿರುವ ಭಾರತದ ಮಾಜಿ ಮುಖ್ಯ ಚುನಾವಣಾಧಿಕಾರಿ ಡಾ. ಜಿ.ವಿ.ಜಿ. ಕೃಷ್ಣಮೂರ್ತಿಯವರು ವಿಜೇತ ಸಾಧಕರಾದ ಅನಿವಾಸಿ ಕನ್ನಡಿಗ ಲೀಲಾಧರ್ ಬೈಕಂಪಾಡಿಯವರಿಗೆ ಅವರ ವಿಶೇಷ ಸೇವೆ ಮತ್ತು ಸಾಧನೆಗಳಿಗಾಗಿ ಚಿನ್ನದ ಪದಕವನ್ನೂ ಪ್ರದಾನಿಸಿ ಗೌರವಿಸಿದರು. ಇತರ ಉನ್ನತ ಮಟ್ಟದ ಗಣ್ಯರಾದ ಕರ್ನಾಟಕದ ಮಾಜಿ ರಾಜ್ಯಪಾಲ ಡಾ. ಟಿ.ಎನ್. ಚತುರ್ವೇದಿ, ಬಿಹಾರ್ ಮತ್ತು ತ್ರಿಪುರಾದ ಮಾಜಿ ರಾಜ್ಯಪಾಲ ಡಾ. ದೇವಾನಂದ ಕೊನ್ವರ್ ಹಾಗೂ ಪಾಂಡಿಚೇರಿಯ ಮಾಜಿ ಲೆ. ಗವರ್ನರ್ ಡಾ. ಇಕ್ಬಾಲ್ ಸಿಂಗ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸರ್ದಾರ್ ಪಟೇಲರ ಬಗ್ಗೆ ವಿಚಾರ ಮಂಡಿಸುತ್ತಾ ಐಕ್ಯತೆಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳನ್ನು ಗೈದು ರಾಷ್ಟ್ರೀಯ ಏಕತಾ ಪ್ರಶಸ್ತಿಗೆ ಪಾತ್ರರಾದ ವಿವಿಧ ರಾಜ್ಯಗಳ ವಿಜೇತ ಸಾಧಕರನ್ನು ಅಭಿನಂದಿಸಿದರು.

DELHI AWARD PIC 0

DELHI AWARD PIC 2

DELHI AWARD PIC 4

ಈ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾದ ಅನಿವಾಸಿ ಕನ್ನಡಿಗ ಲೀಲಾಧರ್ ಬೈಕಂಪಾಡಿಯವರು ಕಳೆದ 17 ವರ್ಷಗಳಿಂದ ಉದ್ಯೋಗ ನಿಮಿತ್ತ ಕೊಲ್ಲಿಯ ಬಹ್ರೈನ್ ದೇಶದಲ್ಲಿ ವಾಸ್ತವ್ಯವಿದ್ದಾರೆ. ಅವರು ಬಹ್ರೈನ್ ಮಾತ್ರವಲ್ಲದೆ ಅವಿಭಜಿತ ದ.ಕ. ಜಿಲ್ಲೆ, ಬೆಂಗಳೂರು ಮತ್ತು ಮುಂಬೈಯಲ್ಲೂ ವಿವಿಧ ಸಮೂಹ ಮತ್ತು ಸಂಘಟನೆಗಳ ಮೂಲಕ ತುಳುವರು, ಕನ್ನಡಿಗರು ಹಾಗೂ ಭಾರತೀಯರಿಗೆ ಸಂಬಂಧಿಸಿದಂತೆ ವಿವಿಧ ಸಾಂಘಿಕ, ಸಾಹಿತ್ಯಿಕ ಹಾಗೂ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ಸದಾ ನಿರತರಾಗಿದ್ದಾರೆ. ಅಂತೆಯೇ ಅವರೋರ್ವ ಯಶಸ್ವಿ ಯುವ ಸಂಘಟಕರಾಗಿ, ಯುವ ಸಾಮಾಜಿಕ ಮುಂದಾಳುವಾಗಿ, ಸಮಾಜ ಸೇವಾ ಕಾರ್ಯಕರ್ತರಾಗಿ ಹಾಗೂ ಪ್ರಗತಿಪರ ಚಿಂತಕರಾಗಿ ನಾಡಿನ ಮತ್ತು ಹೊರನಾಡಿನ ತುಳುವರು, ಕನ್ನಡಿಗರು ಹಾಗೂ ಭಾರತೀಯರ ಮಧ್ಯೆ ಗುರುತಿಸಿಕೊಂಡಿರುತ್ತಾರೆ.

ಬಹ್ರೈನ್‍ನಲ್ಲಿ ಇಂಡಿಯನ್ ಕ್ಲಬ್, ಕರ್ನಾಟಕ ಸೋಶಿಯಲ್ ಕ್ಲಬ್, ಮಹಾರಾಷ್ಟ್ರ ಕಲ್ಚರಲ್ ಸೊಸೈಟಿ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ಇವರು ಸದ್ಯ ಮೊಗವೀರ್ಸ್ ಬಹ್ರೈನ್ ಸಂಸ್ಥೆಯ ದಶಮಾನೋತ್ಸವ ಅವಧಿಯ ಅಧ್ಯಕ್ಷರಾಗಿಯೂ ಸದಾ ಕ್ರಿಯಾಶೀಲರಾಗಿದ್ದಾರೆ. ನಾಡು ಮತ್ತು ಹೊರನಾಡಿನಲ್ಲಿ ಕೆಲವು ಸಾಮಾಜಿಕ ಸಂಘಟನೆಗಳ ಸ್ಥಾಪನೆಯ ರೂವಾರಿಯೂ ಆಗಿರುವ ಇವರು, ತನ್ನದೇ ಸಂಯೋಜಕತ್ವದ ಕಾಂಚನ್ ಪ್ರತಿಷ್ಠಾನದ ಮೂಲಕವೂ ಆಗಾಗ ವೈವಿಧ್ಯಮಯ ಸಾಮಾಜಿಕ ಹಾಗೂ ಜನಪರ ಸೇವಾ ಚಟುವಟಿಕೆಗಳನ್ನು ಗೈಯುತ್ತಿರುತ್ತಾರೆ.

Write A Comment