ಲಕ್ನೋ: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಜೀವನದಲ್ಲಿ ಇಂದು ಎಷ್ಟು ಹಾಸುಹೊಕ್ಕಾಗಿದೆ ಎಂಬುದಕ್ಕೆ ಈ ದುರಂತವೇ ಸಾಕ್ಷಿಯಾಗಿದೆ. ಚಾಟ್ ಮಾಡುತ್ತಿದ್ದ ತನ್ನ ಮಗನ ಮೊಬೈಲನ್ನು ತಂದೆ ಕಿತ್ತುಕೊಂಡು ಬಿಸಾಡಿದ್ದಕ್ಕೆ ನೊಂದ ಬಾಲಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಲಹಾಬಾದಿನಲ್ಲಿ ಈ ಘಟನೆ ನಡೆದಿದ್ದು, 14 ವರ್ಷದ 9 ನೇ ತರಗತಿ ವಿದ್ಯಾರ್ಥಿಯೊಬ್ಬ ಗುರುವಾರದಂದು ತನ್ನ ಮೊಬೈಲಿನಲ್ಲಿ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿದ್ದನೆನ್ನಲಾಗಿದೆ. ಇದನ್ನು ಗಮನಿಸಿದ ಆತನ ತಂದೆ ಮಗನಿಗೆ ಬೈದು ಓದಿಕೊಳ್ಳುವಂತೆ ಬುದ್ದಿ ಹೇಳಿ ಮೊಬೈಲನ್ನು ಕಿತ್ತುಕೊಂಡು ಹೊರಗೆ ಎಸೆದಿದ್ದಾರೆ.
ಇದರಿಂದ ಮನನೊಂದ ವಿದ್ಯಾರ್ಥಿ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಕೊಂಚ ಹೊತ್ತಿನ ಬಳಿಕ ಗುಂಡಿನ ಸದ್ದು ಕೇಳಿ ಬಂದಿದ್ದು, ಗಾಬರಿಗೊಂಡ ಮನೆಯವರು ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಬಂದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರೊಳಗೆ ಬಾಲಕ ಮೃತಪಟ್ಟಿದ್ದಾನೆ.