ಪಣಜಿ: ಗೋವಾದಲ್ಲಿ ನೀರುಡುಗೆ (ಬಿಕಿನಿ) ರದ್ದುಪಡಿಸಿ ಅಲ್ಲಿನ ಸರಕಾರವೇ ಇಕ್ಕಟ್ಟಿಗೆ ಸಿಲುಕಿದ್ದನ್ನು ಕೇಳಿದ್ದಿರಿ ಇದೀಗ ಇಲ್ಲಿನ ಗ್ರಾಮವೊಂದು ಸಾರ್ವಜನಿಕ ಚುಂಬನಕ್ಕೆ ನಿಷೇಧ ಹೇರುವ ಮೂಲಕ ಸುದ್ದಿಯಲ್ಲಿದೆ.
ಹಸಿರು ಹೊದಿಕೆಯನ್ನೇ ಹೊದ್ದು ಮಲಗಿರುವ ಸಲ್ವಾದೊರ್ ದೊ ಮುಂಡೊ ಗ್ರಾಮದಲ್ಲಿ ಈಗ ಸಾರ್ವಜನಿಕವಾಗಿ ಚುಂಬಿಸುವುದು, ಕುಡಿಯುವುದು, ಧೂಮಪಾನ ಸೇರಿದಂತೆ ಹಲವು ಚಟುವಟಿಕೆಗಳಿಗೆ ಇಲ್ಲಿನ ಪಂಚಾಯಿತಿಯು ನಿಷೇಧ ಹೇರಿದೆ.
”ಗ್ರಾಮದ ಸುತ್ತಲೂ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಹಳ್ಳಿಗರು ಇದನ್ನು ನೋಡಿ ರೋಸಿಹೋಗಿದ್ದರು. ಜನರು ಪದೇ ಪದೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ,” ಎಂದು ಗ್ರಾಮಪಂಚಾಯಿತಿಯ ಉಪ ಸರ್‌ಪಂಜ್ ರೀನಾ ಫರ್ನಾಂಡೀಸ್ ತಿಳಿಸಿದ್ದಾರೆ.
”ಪ್ರವಾಸಿಗರೇ, ದಯವಿಟ್ಟು ನಮ್ಮ ಗ್ರಾಮವನ್ನು ಸ್ವಚ್ಛವಾಗಿಡಲು ಸಹಕರಿಸಿ. ಗ್ರಾಮದ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಚುಂಬಿಸಬೇಡಿ. ಮದ್ಯ ಸೇವನೆ ಬೇಡ. ಸಿಗರೇಟ್ ಸೇದಬೇಡಿ. ನಿಮ್ಮ ಮ್ಯೂಸಿಕ್ ಸಿಸ್ಟ್‌ಂ ಸೌಂಡ್ ಮಿತಿಯಲ್ಲಿರಲಿ. ಈ ಎಲ್ಲಾ ಚಟುವಟಿಕೆಗಳೂ ಇಲ್ಲಿ ನಿಷೇಧ. ಪಂಚಾಯಿತಿ ಕಾನೂನು ಮುರಿದವರಿಗೆ ದಂಡ ಹಾಕಲಾಗುವುದು,” ಎಂಬ ಪೋಸ್ಟರ್ ಎಲ್ಲೆಡೆ ರಾರಾಜಿಸುತ್ತಿದೆ.
ನಿಷೇಧದ ಕುರಿತು ಗ್ರಾಮದ ಸುತ್ತಲೂ ಹಾಕಿರುವ ಪೋಸ್ಟರ್‌ಗಳು ಹಾಗೂ ಬ್ಯಾನರ್‌ಗಳು ವಾಟ್ಸ್ಯಾಪ್‌ನಲ್ಲಿ ಹರಿದಾಡಿದ ಬೆನ್ನಿಗೇ ಸಲ್ವಾದೊರ್ ಗ್ರಾಮವು ಸುದ್ದಿಯಲ್ಲಿದೆ.
ಕಿಸ್ ಮಾಡುವುದರಲ್ಲಿ ತಪ್ಪೇನಿದೆ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಫರ್ನಾಂಡಿಸ್ ಅವರು ಉತ್ತರಿಸುವುದು ಹೀಗೆ. ”ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದನ್ನು ಸಮಾಜ ಒಪ್ಪುತ್ತದೆ. ಆದರೆ, ಸಾರ್ವಜನಿಕವಾಗಿ ಚುಂಬಿಸುವುದನ್ನು ನಮ್ಮ ವ್ಯವಸ್ಥೆ ಎಂದೂ ಒಪ್ಪುವುದಿಲ್ಲ. ಪ್ರೀತಿಯನ್ನು ವ್ಯಕ್ತಪಡಿಸಲು ಚುಂಬನವೊಂದೇ ಮಾರ್ಗವಲ್ಲ. ಸೆಕ್ಸ್ ಎಂಬುದು ನಾಲ್ಕು ಕೋಣೆಯೊಳಗಿದ್ದರೇ ಚೆಂದ,” ಎಂದು ಫರ್ನಾಂಡಿಸ್ ಸಮರ್ಥಿಸಿಕೊಂಡಿದ್ದಾರೆ.