ಮಥುರಾ: ವಿದ್ಯುತ್ ಬಿಲ್ ಕಟ್ಟದ ಕಾರಣಕ್ಕೆ ಪ್ಯೂಸ್ ತೆಗೆಯಲು ಬಂದ ವಿದ್ಯುಚ್ಚಕ್ತಿ ಇಲಾಖೆ ಸಿಬ್ಬಂದಿ ಈ ವೇಳೆ ನಡೆದ ಮಾತಿನ ಚಕಮಕಿ ಸಂದರ್ಭದಲ್ಲಿ ಆಕೆಗೆ ಹೊಡೆದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮಥುರಾ ಜಿಲ್ಲೆಯ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 62 ವರ್ಷದ ಬ್ರಹ್ಮದೇವಿ ಎಂಬ ವಿಧವೆ ಸಾವನ್ನಪ್ಪಿದವರಾಗಿದ್ದಾರೆ. ತಮ್ಮ ಮಗನೊಂದಿಗೆ ವಾಸಿಸುತ್ತಿದ್ದ ಇವರ ಮನೆಗೆ 20,000 ರೂ.ಗಳ ವಿದ್ಯುತ್ ಬಿಲ್ ಬಂದಿತ್ತೆನ್ನಲಾಗಿದೆ.
ಇದನ್ನು ಕಟ್ಟದ ಕಾರಣ ವಿದ್ಯುಚ್ಚಕ್ತಿ ಇಲಾಖಾಧಿಕಾರಿ ನಾಲ್ವರು ಸಿಬ್ಬಂದಿಯೊಂದಿಗೆ ಪ್ಯೂಸ್ ತೆಗೆಯಲು ಬಂದಿದ್ದು, ಮಾತಿನ ಚಕಮಕಿ ಸಂದರ್ಭದಲ್ಲಿ ಆಕೆಗೆ ಹೊಡೆದಿದ್ದಾನೆ. ಕುಸಿದು ಬಿದ್ದ ಬ್ರಹ್ಮ ದೇವಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆಯಿಂದ ರೊಚ್ಚಿಗೆದ್ದ ಅಕ್ಕಪಕ್ಕದ ನಿವಾಸಿಗಳು ವಿದ್ಯುತ್ ಇಲಾಖೆ ನೌಕರರನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ತನ್ನ ತಾಯಿಯ ಸಾವಿಗೆ ವಿದ್ಯುತ್ ಇಲಾಖೆ ನೌಕರರೇ ಕಾರಣವೆಂದು ಆರೋಪಿಸಿ ಬ್ರಹ್ಮದೇವಿಯವರ ಪುತ್ರ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.