ಜೈಪುರ್: ಹಿಂದೂವೊಬ್ಬರ ಮನೆಯಲ್ಲಿದ್ದ ಸುಮಾರು 700 ವರ್ಷಗಳಷ್ಟು ಹಿಂದಿನ ಮುಸ್ಲಿಂ ರ ಧರ್ಮ ಗ್ರಂಥ ಖುರಾನ್ ಅನ್ನು ಗನ್ ತೋರಿಸಿ ಬೆದರಿಕೆ ಒಡ್ಡಿ ಕದ್ದೊಯ್ದಿರುವ ಘಟನೆ ರಾಜಸ್ಥಾನದ ಭೀವಾರ್ ಪಟ್ಟಣದಲ್ಲಿ ನಡೆದಿದೆ.
ಜೈದೇವ್ ಪ್ರಸಾದ್ ಶರ್ಮಾ ಎಂಬವರಿಗೆ ಅವರ ಸ್ನೇಹಿತರೊಬ್ಬರು ಈ ಖುರಾನ್ ಅನ್ನು ಕೊಡುಗೆಯಾಗಿ ನೀಡಿದ್ದು, ಇದನ್ನು ಅತ್ಯಂತ ಪ್ರೀತಿಯಿಂದ ಕಾಪಾಡಿಕೊಂಡು ಬಂದಿದ್ದರು. ಮೂರು ದಿನಗಳ ಹಿಂದೆ ಇದನ್ನು ನೋಡುವ ನೆಪದಲ್ಲಿ ಮೂವರು ಆಗಂತುಕರು ಮನೆಗೆ ಬಂದಿದ್ದರು.
ಇದನ್ನು ಅವರಿಗೆ ತೋರಿಸುತ್ತಿದ್ದ ಜೈದೇವ್ ಪ್ರಸಾದ್ ಶರ್ಮಾ ಫೋನ್ ಬಂದ ಕಾರಣ ಮಾತನಾಡುತ್ತಿರುವ ವೇಳೆ ಆಗಂತುಕರು ಗನ್ ತೋರಿಸಿ ಬೆದರಿಕೆ ಹಾಕಿ ಖುರಾನ್ ಅನ್ನು ಎತ್ತಿಕೊಂಡು ತಾವು ತಂದಿದ್ದ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಈ ಸಂಬಂಧ ಜೈದೇವ್ ಪ್ರಸಾದ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಖುರಾನ್ ಅನ್ನು ತಾವು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಇಚ್ಚಿಸಿರಲಿಲ್ಲವೆಂದು ಹೇಳಿರುವ ಜೈದೇವ್ ಪ್ರಸಾದ್ ಶರ್ಮಾ, ಮುಂದೆ ತಮ್ಮ ಮಗಳಿಗೆ ಉಡುಗೊರೆಯಾಗಿ ಇದನ್ನು ನೀಡಲು ಬಯಸಿದ್ದೆ ಎಂದಿದ್ದಾರೆ. ಖುರಾನ್ ಪುರಾತನವಾಗಿರುವ ಕಾರಣ ಬೆಲೆ ಬಾಳುತ್ತದೆಂಬ ಕಾರಣಕ್ಕೆ ಕಳ್ಳರು ಇದನ್ನು ತೆಗೆದುಕೊಂಡು ಹೋಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.