ಮುಂಬೈ: ಟಾಟಾ ಸಮೂಹವು 1999 ರಲ್ಲಿ ತನ್ನ ಕಾರು ತಯಾರಿಕಾ ಘಟಕವನ್ನು ಅಮೆರಿಕದ ಫೋರ್ಡ್ ಕಂಪೆನಿಗೆ ಮಾರಾಟ ಮಾಡಲು ಉದ್ದೇಶಿಸಿತ್ತು. ಈ ಕುರಿತು ಮಾತುಕತೆ ನಡೆಸಲು ಹೋದ ರತನ್ ಟಾಟಾ ಮತ್ತು ತಂಡವನ್ನು ಫೋರ್ಡ್ ಕಂಪೆನಿಯ ಆಡಳಿತ ಮಂಡಳಿ ಅವಮಾನಿಸಿ ಕಳುಹಿಸಿತ್ತು ಎಂದು ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಕಾರು ವ್ಯವಹಾರದ ಬಗ್ಗೆ ನಿಮಗೇನೂ ಗೊತ್ತಿಲ್ಲ. ನೀವು ಪ್ರಯಾಣಿಕ ಕಾರು ತಯಾರಿಕೆ ಪ್ರಾರಂಭಿಸಿದ್ದಾದರೂ ಯಾಕೆ? ಎಂದು ಫೋರ್ಡ್ ಕಂಪೆನಿಯ ಅಧಿಕಾರಿಗಳು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ಟಾಟಾದ ಕಾರು ತಯಾರಿಕೆ ಘಟಕ ಖರೀದಿಸುವ ಮೂಲಕ ನಾವು ನಿಮಗೆ ಮಹಾ ಉಪಕಾರ ಮಾಡುತ್ತಿದ್ದೇವೆ ಎನ್ನುವ ಹಾಗೆ ಅವರು ಮಾತನಾಡಿದ್ದರು. ತಕ್ಷಣವೇ ನಾವು ನಿರ್ಧಾರ ಬದಲಿಸಿ ವಾಪಸ್ ಬಂದವು. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಮುಂದೆ 9 ವರ್ಷಗಳ ಬಳಿಕ ನಾವು ಅದೇ ಫೋರ್ಡ್ ಕಂಪೆನಿಯ ಜಾಗ್ವಾರ್ ಅಂಡ್ ಲ್ಯಾಂಡ್ ರೋವರ್ (ಜೆಎಲ್‌ಆರ್) ಘಟಕವನ್ನು ಖರೀದಿಸಿದೆವು’ ಎಂದು ಈಗ ಟಾಟಾ ಕ್ಯಾಪಿಟಲ್‌ನ ಮುಖ್ಯಸ್ಥ ರಾಗಿರುವ ಪ್ರವೀಣ್ ಖಾಂಡ್ಲೆ ಹೇಳಿದ್ದಾರೆ.
ರತನ್ ಟಾಟಾ ಅವರು ಫೋರ್ಡ್ ಕಂಪೆನಿ ಜತೆಗೆ ಮಾತುಕತೆಗೆ ತೆರಳಿದ್ದ ವೇಳೆ ಅವರ ತಂಡದಲ್ಲಿ ಖಾಂಡ್ಲೆ ಕೂಡ ಇದ್ದರು. ಗುರುವಾರ ಇಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭವೊಂದರಲ್ಲಿ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಫೋರ್ಡ್ ಕಂಪೆನಿ ಜತೆಗಿನ ವ್ಯವಹಾರ ಮುರಿದುಬಿದ್ದ ಕಾರಣ, ಅಂದು ಸಂಜೆ ವಾಪಸ್ ಬರುವಾಗ ಮೂರು ಗಂಟೆ ಅವಧಿಯ ವಿಮಾನ ಪ್ರಯಾಣದುದ್ದಕ್ಕೂ ರತನ್ ಟಾಟಾ ಸಂಪೂರ್ಣ ಮಂಕಾಗಿದ್ದರು. ಮುಂದೆ ಏನು ಮಾಡಬೇಕು ಎಂದು ಅವರು ಗಂಭೀರವಾಗಿ ಯೋಚಿಸುತ್ತಿದ್ದರು ಎಂದು ಖಾಂಡ್ಲೆ ಸ್ಮರಿಸಿಕೊಂಡಿದ್ದಾರೆ.
9 ವರ್ಷಗಳ ಬಳಿಕ ಟಾಟಾ ಸಮೂಹ ‘ಜೆಎಲ್‌ಆರ್’ ಘಟಕ ಖರೀದಿಸುವಾಗ, ಫೋರ್ಡ್ ಕಂಪೆನಿಯ ಅಧ್ಯಕ್ಷ ಬಿಲ್ ಫೋರ್ಡ್ ಅವರು ರತನ್ ಟಾಟ ಅವರಿಗೆ ಧನ್ಯವಾದ ಹೇಳಿದರು. ‘ಜೆಎಲ್‌ಆರ್’ ಖರೀದಿಸುವ ಮೂಲಕ ನೀವು ನಿಜವಾಗಿಯೂ ನಮಗೆ ದೊಡ್ಡ ಉಪಕಾರ ಮಾಡುತ್ತಿದ್ದೀರಿ’ ಎಂದು ಅವರು ಹೇಳಿದರು.
ಹೀಗೆ ಹೇಳಿ ಖಾಂಡ್ಲೆ ಮಾತು ಮುಗಿಸಿದಾಗ ಸಭೆಯಲ್ಲಿ ದೊಡ್ಡ ಮಟ್ಟದ ಕರತಾಡನ.