ರಾಷ್ಟ್ರೀಯ

ಕಾಶ್ಮೀರದಲ್ಲಿ ಪಿಡಿಪಿಗೆ ಬೆಂಬಲ : ಮೋದಿಗೆ ಆರ್‌ಎಸ್‌ಎಸ್ ತರಾಟೆ

Pinterest LinkedIn Tumblr

Modi_Bhagwat

ನವದೆಹಲಿ,ಮಾ.8: ಜಮ್ಮುಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಕಾರಾಗೃಹದ ಲ್ಲಿದ್ದ ಪ್ರತ್ಯೇಕತಾವಾದಿ ನಾಯಕ ಮಸರತ್ ಅಲಂ ಅವರನ್ನು ಬಿಡುಗಡೆ ಮಾಡಿರುವುದು ಈಗ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ಸಯೀದ್ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ಪಾಕಿಸ್ತಾನ ಮತ್ತು ಉಗ್ರರನ್ನು ಪ್ರಶಂಸಿಸಿ ಆರ್‌ಎಸ್‌ಎಸ್ ಕೆಂಗಣ್ಣಿಗೆ ಗುರಿಯಾಗಿದ್ದರಲ್ಲದೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದರು. ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸುತ್ತಲೇ ಇರುವ ಮೊಹಮ್ಮದ್ ಸಯೀದ್ ಅವರ ಕ್ರಮವನ್ನು ಆರ್‌ಎಸ್‌ಎಸ್ ಖಾರವಾಗಿ ಪ್ರಶ್ನಿಸಿದೆ.

ಜಮ್ಮುಕಾಶ್ಮೀರದಲ್ಲಿ ಪಿಡಿಪಿ ಜೊತೆ ಮೈತ್ರಿ ಸರ್ಕಾರ ರಚಿಸುವ ಅಗತ್ಯವಿತ್ತೆ ಎಂದು ಪ್ರಶ್ನಿಸಿರುವ ಆರ್‌ಎಸ್‌ಎಸ್ ಈ ಕುರಿತಂತೆ ತನ್ನ ಮುಖವಾಣಿಯಲ್ಲಿ ಈ ವಿಚಾರ ಕುರಿತಂತೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕೇಳಿದೆ.

ಈ ಹಿನ್ನೆಲೆಯಲ್ಲಿ ಜಮ್ಮಕಾಶ್ಮೀರದಲ್ಲಿ ಪಿಡಿಪಿಗೆ ನೀಡಿರುವ ಬೆಂಬಲವನ್ನು ಬಿಜೆಪಿ ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆರ್‌ಎಸ್‌ಎಸ್ ನಾಯಕರು ಪ್ರಧಾನಿ ಮೋದಿ ಮೇಲೆ ಒತ್ತಡ ಹೇರಿದ್ದಾರೆ. ಪ್ರತ್ಯೇಕತಾವಾದಿ ಸಂಘಟನೆಯಾಗಿರುವ ಹುರಿಯತ್ ಕಾನ್ಫರೆನ್ಸ್‌ನ ಮುಂಚೂಣಿ ನಾಯಕನಾಗಿದ್ದ ಮಸರತ್ ಅಲಂ ಈ ಹಿಂದೆ ಜಮ್ಮುಕಾಶ್ಮೀರದಲ್ಲಿ ನಡೆದ ಗಲಭೆಗಳು ಹಾಗೂ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ.

ಕಣಿವೆ ರಾಜ್ಯದಲ್ಲಿ 2010ರ ಸಂದರ್ಭ ನಡೆದಿದ್ದ ವಿವಿಧ ಗಲಭೆಗಳು, ಭದ್ರತಾ ಪಡೆಗಳ ಮೇಲಿನ ಹಲ್ಲೆ ಮತ್ತು ಇತರ ಸಮಾಜಘಾತುಕ ಕೃತ್ಯಗಳಲ್ಲಿ ಮಸರತ್ ಪ್ರಮುಖ ಪಾತ್ರ ವಹಿಸಿದ್ದ. ಈ ಗಲಭೆಗಳಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 112 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಇಂದಿಗೂ ಕೂಡ ಮಸರತ್ ಅಲಂ ತನ್ನ ಪ್ರತ್ಯೇಕತಾವಾದಿ ಹೋರಾಟವನ್ನು ಮುಂದುವರೆಸಿದ್ದು , ಭಾರತ ವಿರೋಧಿ ನಿಲುವು ತಳೆದಿರುವ ವ್ಯಕ್ತಿ. ಮುಸ್ಲೀಂ ಲೀಗ್ ಅಧ್ಯಕ್ಷನೂ ಆಗಿರುವ ಮಸರತ್ ಹಲವು ಉಗ್ರಗಾಮಿ ಸಂಘಟನೆಗಳಿಗೆ ಬೆನ್ನೆಲುಬಾಗಿದ್ದು, ಭಾರತದ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಲೇ ಬಂದಿದ್ದಾನೆ. ಇವನನ್ನು ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಬಂಧಿಸಿ ಕಾರಾಗೃಹದಲ್ಲಿಡಲಾಗಿತ್ತು. ಬಂಧನಕ್ಕೂ ಮೊದಲು ನಾಪತ್ತೆಯಾಗಿದ್ದ ಮಸರತ್ ಅಲಂ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು.

ಸಿಎಂ ಮುಫ್ತಿ ಹೇಳಿಕೆಗೆ ಅನಂತ್ ಖಂಡನೆ
ಬೆಂಗಳೂರು: ಜಮ್ಮು-ಕಾಶ್ಮೀರದ ಚುನಾವಣೆ ಸಂಬಂಧ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ನೀಡಿರುವ ಹೇಳಿಕೆಯನ್ನು ನಮ್ಮ ಪಕ್ಷ ಖಂಡಿಸುತ್ತದೆ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ತಿಳಿಸಿದರು.

ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದರು. ಗಡಿಯಲ್ಲಿ ಕೆಲಸ ಮಾಡುವ ವೀರಯೋಧರು ಹಗಲು-ರಾತ್ರಿ ಕಾರ್ಯನಿರ್ವಹಿಸಿ ಚುನಾವಣೆಯಲ್ಲಿ ಶಾಂತಿ ಕಾಪಾಡುವಂತಹ ಮಹತ್ತರ ಪಾತ್ರ ನಿರ್ವಹಿಸುತ್ತಾರೆ ಎಂದು ತಿಳಿಸಿದರು.

ದಾಬೋಲ್‌ನಿಂದ ಬೆಂಗಳೂರಿಗೆ ಕೊಳವೆ ಮಾರ್ಗದ ಮೂಲಕ ಅನಿಲ ಪೂರೈಕೆ ಮಾಡುತ್ತಿರುವ ಪ್ರದೇಶದಲ್ಲಿ ಸುತ್ತಮುತ್ತಲಲ್ಲಿ ರೈಲು ಸಂಪರ್ಕ, ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿದರೆ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಲು ಸಿದ್ಧ ಎಂದು ಹೇಳಿದರು.

ಉತ್ತರ ಭಾರತದಲ್ಲಿ ಸಾಕಷ್ಟು ರಸಗೊಬ್ಬರ ಕಾರ್ಖಾನೆಗಳಿವೆ. ಹತ್ತು ವರ್ಷಗಳಲ್ಲಿ 55 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ದೇಶಾದ್ಯಂತ 9 ರಸಗೊಬ್ಬರ ಕಾರ್ಖಾನೆ ಪ್ರಾರಂಭಿಸಲಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ದೇಶ ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಿದೆ. ಜತೆಗೆ 10 ವರ್ಷಗಳಲ್ಲಿ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುವಷ್ಟರ ಮಟ್ಟಿಗೆ ಅಭಿವೃದ್ಧಿ ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟರು.

Write A Comment