ಕೋಹಿಮ, ಮಾ.8: ನಾಗಾಲ್ಯಾಂಡ್‌ನ ಧೀಮಾಪುರದಲ್ಲಿ ನಡೆದ ಅತ್ಯಾಚಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದು, ರಾಜ್ಯ ಹಾಗೂ ಅಸ್ಸಾಂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಾಗೇ ಮುಂದುವರಿದಿದೆ. ಹತ್ಯೆಗೊಳಗಾದ ಅತ್ಯಾಚಾರ ಆರೋಪಿ ಸಯ್ಯದ್ ಫರೀದ್‌ಖಾನ್ ಕುಟುಂಬ ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯ ನಿವಾಸಿಗಳಾಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ.
ನಾಗಾಬುಡಕಟ್ಟು ಜನಾಂಗದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಫೆ.25ರಂದು ಬಂಧಿತವಾಗಿದ್ದ ಖಾನ್ ಧೀಮಾಪುರದ ಕೇಂದ್ರ ಕಾರಾಗೃಹದಲ್ಲಿದ್ದ ಉದ್ರಿಕ್ತ ಗುಂಪು ಮಾ.5ರಂದು ಕಾರಾಗೃಹಕ್ಕೆ ನುಗ್ಗಿ ಅವನನ್ನು ಹೊರಗೆಳೆದುತಂದು ಬೆತ್ತಲೆ ಮೆರವಣಿಗೆ ಮಾಡಿ ಹೊಡೆದು ಸಾಯಿಸಿದ್ದರು. 35 ವರ್ಷದ ಫರೀದ್‌ಖಾನ್‌ಗೆ ಅವಮಾನ ಮಾಡಿ ಕೊಲೆ ಮಾಡಿರುವುದರ ಹಿಂದೆ ಯಾರದೋ ಷಡ್ಯಂತ್ರವಿದೆ ಎಂಬುದು ಅವನ ಕುಟುಂಬದವರ ಆರೋಪವಾಗಿದೆ. ಒಂದು ವೇಳೆ ಅವನು ತಪ್ಪು ಮಾಡಿದ್ದರೆ ಕಾನೂನು ಅವನಿಗೆ ಶಿಕ್ಷೆಕೊಡುತ್ತಿತ್ತು. ಜನರೇ ಏಕೆಕೊಲ್ಲಬೇಕಿತ್ತು ಎಂಬುದು ಅವರ ಪ್ರಶ್ನೆ.
ಸದ್ಯ 6 ಜನರನ್ನು ಬಂಧಿಸಿರುವ ಪೊಲೀಸರು ಘಟನೆಯ ಫೋಟೋಗಳು, ವಿಡಿಯೋಗಳ ಪರಿಶೀಲನೆ ನಡೆಸಿದ್ದು, ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
