ಲಖನೌ: ಭಗ್ನಪ್ರೇಮಿಯೊಬ್ಬ ಯುವತಿಯನ್ನು ಕೊಂದು, ಶವವನ್ನು ಕತ್ತರಿಸಿದ ಘಟನೆ ಮಾಸುವ ಮುನ್ನವೇ ಉತ್ತರ ಪ್ರದೇಶದ ಮನು ಜಿಲ್ಲೆಯಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದಿರುವ ಘಟನೆ ನಡೆದಿದೆ.
ಇಲ್ಲಿಂದ 350 ಕಿ.ಮೀ ದೂರದಲ್ಲಿರುವ ಗುಲಾರಿ ಗ್ರಾಮದ ಪ್ರಾಥಮಿಕ ಶಾಲೆಯ ಕೊಠಡಿಯೊಂದರಲ್ಲಿ ಶನಿವಾರ 20 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಶವದ ಮೇಲೆ ಗಾಯದ ಗುರುತುಗಳಿದ್ದು, ಬೇರೆಲ್ಲೋ ಅತ್ಯಾಚಾರ ಎಸಗಿ, ಯುವತಿಯನ್ನು ಕೊಂದು ನಂತರ ಶವವನ್ನು ಶಾಲೆಗೆ ತಂದು ಎಸೆಯಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸೋಮವಾರದವರೆಗೆ ಶಾಲೆ ತೆರೆಯುವುದಿಲ್ಲವಾದ್ದರಿಂದ ಪ್ರಕರಣ ಬೆಳಕಿಗೆ ಬರುವುದಿಲ್ಲ ಎಂಬ ಊಹೆಯ ಮೇಲೆ ಆರೋಪಿಗಳು ಶಾಲಾ ಕೊಠಡಿಯಲ್ಲಿದ್ದ ಬೆಂಚುಗಳ ಕೆಳಗೆ ಶವವನ್ನು ಎಸೆದು ಹೋಗಿದ್ದಾರೆ. ಯುವತಿಯನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. ಹೀಗಾಗಿ ಅಕ್ಕಪಕ್ಕದ ಜಿಲ್ಲೆಯಲ್ಲಿ ಕಳೆದ ಒಂದೆರಡು ದಿನಗಳಲ್ಲಿ ಕಾಣೆಯಾದವರ ಬಗೆಗಿನ ದೂರುಗಳ ಬಗ್ಗೆ ಎಚ್ಚರ ವಹಿಸುವಂತೆ ಆಯಾ ಜಿಲ್ಲಾ ಪೊಲೀಸರಿಗೆ ತಿಳಿಸಲಾಗಿದೆ ಎಂದು ಪೊಲಿಸರು ಹೇಳಿದ್ದಾರೆ.
ಅಲ್ಲದೆ, ಈವರೆಗೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲವೇ ತಿಂಗಳ ಹಿಂದೆ ಲಖನೌ ಬಳಿಯ ಮೋಹನ್ಲಾಲ್ಗಂಜ್ನ ಶಾಲೆಯಲ್ಲಿ ಇದೇ ಸ್ವರೂಪದ ಅತ್ಯಾಚಾರ ಘಟನೆ ನಡೆದಿತ್ತು.
ಯುವತಿಯ ಮೇಲೆ ಅತ್ಯಾಚಾರ ಎಸಗಿ, ಹಲ್ಲೆ ನಡೆಸಿ ಆಕೆಯನ್ನು ಕೊಂದಿದ್ದ ಅತ್ಯಾಚಾರಿಗಳು, ಶವವನ್ನು ಶಾಲೆಯ ಕೊಠಡಿಯಲ್ಲಿ ಎಸೆದು ಹೋಗಿದ್ದರು. ಕಳೆದ ತಿಂಗಳು ಭಗ್ನಪ್ರೇಮಿಯೊಬ್ಬ ಯುವತಿಯನ್ನು ಕೊಂದು, ಶವವನ್ನು ತುಂಡುಗಳಾಗಿ ಕತ್ತರಿಸಿದ್ದ. ಅದನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ, ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದ.
ಬಾಲಕಿಯ ಜನನಾಂಗಕ್ಕೆ ಸರಳು ಚುಚ್ಚಿದ ಆರೋಪಿ
ಅಹಮದಾಬಾದ್ (ಪಿಟಿಐ): ಭದ್ರತಾ ಸಿಬ್ಬಂದಿಯೊಬ್ಬ ಆರು ವರ್ಷದ ಬಾಲಕಿಯ ಜನನಾಂಗಕ್ಕೆ ಕಬ್ಬಿಣದ ಸರಳು ಚುಚ್ಚಿದ ಘಟನೆ ಗುಜರಾತ್‌ನ ಸೋಲಾ ಪ್ರದೇಶದಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ಉತ್ತರ ಪ್ರದೇಶ ಮೂಲದ ಕೌಶಾಲ್ ಅನಿಲ್ಸಿಂಗ್ ಚವಾಣ್‌ನನ್ನು ಬಂಧಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚವಾಣ್ ಮತ್ತು ಸಂತ್ರಸ್ತ ಬಾಲಕಿಯ ಪೋಷಕರ ಮಧ್ಯೆ ಹಳೆ ದ್ವೇಷ ಇತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶ ವರದಿ: ಹತ್ತು ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ನಾಪತ್ತೆಯಾದ ಘಟನೆ ಇಲ್ಲಿನ ನದ್ರಾ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಶೈಲೇಂದ್ರ ಸಿಂಗ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ನಾಪತ್ತೆಯಾಗಿರುವ ಆರೋಪಿ ಬಂಧನಕ್ಕೆ ಶೋಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.