ಬಡವರನ್ನು ಶಿಕ್ಷಣದಿಂದ ವ್ಯವಸ್ಥಿತವಾಗಿ ಹೊರಗಿಡಲಾಗುತ್ತಿದೆ; ಉದ್ದೇಶಪೂರ್ವಕವಾಗಿಯೇ ಅತ್ಯಂತ ಜಾಣತನದಿಂದ ಅದು ಸಾಮಾನ್ಯ ನಾಗರಿಕರ ಕೈಗೆಟುಕದಂತೆ ಮಾಡಲಾಗುತ್ತಿದೆ. ಕಳೆದ 20 ವರ್ಷಗಳಿಂದಲೂ ನಿಧಾನವಾಗಿ ಈ ಕ್ಷೇತ್ರದಿಂದ ಹಿಂದೆ ಸರಿಯುತ್ತಿರುವ ಸರ್ಕಾರ, ಶಿಕ್ಷಣವನ್ನು ಹೆಚ್ಚು ಹೆಚ್ಚು ಖಾಸಗೀಕರಣಗೊಳಿಸುತ್ತಿದೆ.
ಸರ್ಕಾರಿ ಶಾಲೆಗಳು ಹಣಕಾಸು ಕೊರತೆಯಿಂದ ನರಳುವಂತೆ ಮಾಡಿ, ಕಳಪೆ ಗುಣಮಟ್ಟದ ಶಿಕ್ಷಕರನ್ನು ನೇಮಿಸಿಕೊಂಡು, ಪೋಷಕರು ಅಥವಾ ಶಿಕ್ಷಣ ಇಲಾಖೆಗೆ ಅವರು ಬಾಧ್ಯಸ್ಥರಾಗದಂತಹ ವ್ಯವಸ್ಥಿತ ಕ್ರಮಗಳ ಮೂಲಕ ಖಾಸಗಿ ವಲಯದ ಏಳ್ಗೆಗೆ ಸಹಕರಿಸುತ್ತಿದೆ. ಸರ್ಕಾರಿ ಶಾಲೆಗಳು ಕಟ್ಟಕಡೆ ದಿನಗಳನ್ನು ಎಣಿಸುತ್ತಿವೆ. ಸದ್ಯದಲ್ಲೇ ಅವುಗಳ ಅಂತ್ಯದ ವಿಷಯವನ್ನು ನಾವು ವೃತ್ತಪತ್ರಿಕೆಗಳಲ್ಲಿ ಓದಲಿದ್ದೇವೆ.
ಸರ್ಕಾರಿ ಶಾಲೆಗಳನ್ನು ಇಷ್ಟರಮಟ್ಟಿಗೆ ನಿರ್ಲಕ್ಷ್ಯ ಮಾಡಿ ಅಪರಾಧ ಎಸಗಿದ್ದರ ಪರಿಣಾಮ ಏನಾಗಿದೆ? ಖಾಸಗಿ ವಲಯದಲ್ಲಿ ಅದು ‘ಗುಣಮಟ್ಟ’ದ ಶಿಕ್ಷಣಕ್ಕೆ ಅತಿಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿದೆ. ಶಾಲಾ ಕಾಲೇಜುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ‘ಇಂಗ್ಲಿಷ್ ಮಾಧ್ಯಮ’, ‘ಹೊಸ ಪರಿಕಲ್ಪನೆ’, ‘ಅಂತರರಾಷ್ಟ್ರೀಯ’ ಎಂದೆಲ್ಲ ಕರೆಸಿಕೊಳ್ಳುವ ಶಾಲೆಗಳು ಮತ್ತು ‘ಸಂಯೋಜಿತ’ ಕಾಲೇಜುಗಳು ಪ್ರಮುಖ ಪಟ್ಟಣ, ದೊಡ್ಡ ಹಳ್ಳಿ, ನಗರದ ಹೊರವಲಯ ಸೇರಿದಂತೆ ಎಲ್ಲೆಂದರಲ್ಲಿ ತಲೆಎತ್ತಿವೆ.
ಖಾಸಗೀಕರಣದಿಂದಾಗಿ ವ್ಯವಸ್ಥೆಯಲ್ಲಿ ಶ್ರೇಷ್ಠತೆಯ ಪ್ರಜ್ಞೆ ಮತ್ತು ಶ್ರೇಣೀಕೃತ ವ್ಯವಸ್ಥೆ ಮರುಹುಟ್ಟು ಪಡೆದಿದೆ. ಜಾತಿ ವ್ಯವಸ್ಥೆ ಹೊಸ ಅವತಾರವನ್ನು ಎತ್ತಿ ಬಂದಿದೆ; ಶಿಕ್ಷಣವು ಸವಲತ್ತಿರುವ ಕೆಲವರಿಗಷ್ಟೇ ಮತ್ತು ಹಣಕ್ಕಷ್ಟೇ ದೊರೆಯಬಲ್ಲದು ಎಂಬಂತಾಗಿದೆ. ಜಾತಿ ವ್ಯವಸ್ಥೆಯಲ್ಲಿ ಶಿಕ್ಷಣ ಮೇಲ್ವರ್ಗದವರಿಗೆ ಮಾತ್ರ ಸಿಗುತ್ತಿತ್ತು. ಈಗ ಅದು ಸ್ಥಿತಿವಂತರಿಗೆ ಲಭ್ಯವಾಗುತ್ತಿದೆ.
ಬಡವರನ್ನು ಗುಣಮಟ್ಟದ ಶಿಕ್ಷಣದಿಂದ ಹೊರಗಿಡುತ್ತಿರುವುದರಿಂದ ಅವರು ತಮ್ಮ ಬೆಳವಣಿಗೆಗೆ ಪೂರಕವಾಗುವ ಕೆಲಸಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲ; ಆಗ ಅವರು ತಾವಿದ್ದ ಸ್ಥಿತಿಯಲ್ಲೇ ಇರುತ್ತಾರೆ. ಬಡವರಾಗಿ, ಅಶಿಕ್ಷಿತರಾಗಿ, ಉತ್ತಮ ಕೆಲಸಗಳಿಗೆ ಅನರ್ಹರಾಗಿ, ಒಳ್ಳೆಯ ಬದುಕಿನಿಂದ ವಂಚಿತರಾಗುತ್ತಾರೆ. ಇದು ನಿಶ್ಚಿತವಾಗಿಯೂ ಜಾತಿ ವ್ಯವಸ್ಥೆ ಏನು ಮಾಡಿತ್ತೋ ಅಂತಹುದೇ ಸ್ಥಿತಿ; ಸವಲತ್ತುಗಳುಳ್ಳ ‘ಮೇಲ್ವರ್ಗ’ಗಳನ್ನು ಬಿಟ್ಟು ಉಳಿದವರೆಲ್ಲರಿಗೂ ಉತ್ತಮ ಬದುಕಿನ ಎಲ್ಲ ಮಾರ್ಗಗಳನ್ನೂ ಮುಚ್ಚಿಬಿಟ್ಟಿರುವ ಈ ಸ್ಥಿತಿ, 21ನೇ ಶತಮಾನದಲ್ಲಿ ಆಗಿರುವ ಬಹಿಷ್ಕರಣೆಯ ಮರುಹುಟ್ಟು.
ಸರ್ಕಾರದ ಪಾತ್ರವನ್ನು ನಗಣ್ಯವಾಗಿಸಲು ಸರ್ಕಾರಿ ಸವಲತ್ತುಗಳು ಅಲಭ್ಯವಾಗುವಂತೆ ಮಾಡಲಾಗುತ್ತಿದೆ. ವಿಶ್ವ ಬ್ಯಾಂಕ್‌ನ ಉದ್ದೇಶವೂ ಇದೇ ಆಗಿರುವುದರಿಂದ, ಹಿಂದುಳಿದ ದೇಶಗಳು ಶಾಲಾ ಕಾಲೇಜು, ವಿಶ್ವವಿದ್ಯಾಲಯ, ಆಸ್ಪತ್ರೆ ನಿರ್ವಹಣೆಯಂತಹ ಸಮಾಜ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸರ್ಕಾರದ ಪಾತ್ರವನ್ನು ತಗ್ಗಿಸಬೇಕಾದಂಥ ಒತ್ತಡಕ್ಕೆ ಒಳಗಾಗುತ್ತಿವೆ.
ಹೀಗೆ ಸರ್ಕಾರಿ ಶಾಲೆಗಳನ್ನು, ಸರ್ಕಾರಿ ಆಸ್ಪತ್ರೆಗಳನ್ನು ಯಶಸ್ವಿಯಾಗಿ ನಿರರ್ಥಕಗೊಳಿಸಲಾಗುತ್ತಿದೆ. ಅದೇ ರೀತಿ ಈಗ ವಿಶ್ವವಿದ್ಯಾಲಯಗಳ ಸರದಿ. ಇದೆಲ್ಲ ಹೇಗೆ ಸಾಧ್ಯ? ಯಾರಿಗೂ ಬಾಧ್ಯಸ್ಥರಾಗದಂತೆ ಮಾಡಿ ಸಂಸ್ಥೆ ಅಸಮರ್ಥವಾಗುವಂತೆ ಮಾಡುವುದು; ಆರ್ಥಿಕ ಕೊರತೆ ಉಂಟು ಮಾಡುವುದು, ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ಕಂಪ್ಯೂಟರ್ ಅಥವಾ ಅತ್ಯಾಧುನಿಕ ತಂತ್ರಜ್ಞಾನದಂತಹ ಉನ್ನತ ಸೌಲಭ್ಯಗಳನ್ನು ಕಲ್ಪಿಸದಿರುವುದು…
ಹೀಗೆ ನಿರ್ಲಕ್ಷ್ಯಕ್ಕೆ ಒಳಗಾಗುವ ಸಂಸ್ಥೆಗಳು ದುರ್ಬಲಗೊಳ್ಳುತ್ತಾ ಕಡೆಗೆ ನಿಷ್ಕ್ರಿಯವಾಗುತ್ತವೆ. ಆಗ ಸರ್ಕಾರ ಹೊರಗೆ ಸರಿದು ಖಾಸಗಿ ವಲಯಕ್ಕೆ ಪ್ರವೇಶಾವಕಾಶ ನೀಡಿ ಅದು, ಕಾರ್ಪೊರೇಟ್ ಆಸ್ಪತ್ರೆಗಳಲ್ಲಾದಂತೆ ಕ್ರಮೇಣ ಏಕಸ್ವಾಮ್ಯ ಸಾಧಿಸಲು ಅವಕಾಶ ಮಾಡಿಕೊಡಬಹುದು. ಸರ್ಕಾರಿ ವಿಶ್ವವಿದ್ಯಾಲಯಗಳಿಗೂ ಬಹುತೇಕ ಒಳಗಿಂದೊಳಗೇ ಇಂತಹ ಗತಿ ಎದುರಾಗುತ್ತಿದೆ. ಒಂದು ವೇಳೆ ಅವುಗಳನ್ನು ಮುಚ್ಚದೇ ಇದ್ದರೂ ಅವು ನೀಡುವ ಶಿಕ್ಷಣ ಯುವಜನರ ಭವಿಷ್ಯಕ್ಕೆ ಅಪ್ರಸ್ತುತ ಎನಿಸತೊಡಗುತ್ತದೆ. ಖಾಸಗಿ ಶಾಲೆಗಳಂತೆಯೇ ಖಾಸಗಿ ಮತ್ತು ವಿದೇಶಿ ವಿಶ್ವವಿದ್ಯಾಲಯಗಳೂ ‘ಗುಣಮಟ್ಟ’ಕ್ಕೆ ಇನ್ನೊಂದು ಹೆಸರು ಎಂಬಂತೆ ಆಗಲಿವೆ.
ಈಗ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಬರುತ್ತಿರುವವರಲ್ಲಿ ಶೇ 99ರಷ್ಟು ಮಂದಿ ಗ್ರಾಮೀಣ ಭಾಗದವರು ಮತ್ತು ಕೆಳ ವರ್ಗದವರು. ಪ್ರತಿಷ್ಠಿತ ಕುಟುಂಬದ, ನಗರ ಹಿನ್ನೆಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಖಾಸಗಿ ವಿಶ್ವವಿದ್ಯಾಲಯವನ್ನು ಆರಿಸಿಕೊಳ್ಳುತ್ತಾರೆ ಅಥವಾ ವಿದೇಶಗಳಿಗೆ ತೆರಳುತ್ತಾರೆ. ಹೀಗೆ ಗುಣಮಟ್ಟದ ಉನ್ನತ ಶಿಕ್ಷಣವು ಶುಲ್ಕ ಕಟ್ಟಲಾಗದವರ ಕೈಗೆ ನಿಲುಕದ ನಕ್ಷತ್ರವಾಗುತ್ತದೆ. ಇದಕ್ಕೆ ಇಂದಿನ ಖಾಸಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳೇ ಉದಾಹರಣೆ.
ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸೀಟಿಗೆ ಲಕ್ಷಾಂತರ ರೂಪಾಯಿ, ಸ್ನಾತಕೋತ್ತರ, ಸೂಪರ್ಸ್ಪೆಷಾಲಿಟಿ ಕೋರ್ಸುಗಳ ಸೀಟಿಗಂತೂ ಕೋಟ್ಯಂತರ ರೂಪಾಯಿಯನ್ನೇ ತೆರಬೇಕಾಗಿದೆ. ಈ ಮೂಲಕ, ಕೆ.ಜಿ.ಯಿಂದ ಪಿ.ಜಿ.ವರೆಗೂ ಶಿಕ್ಷಣವನ್ನು ಉಳ್ಳವರಷ್ಟೇ ಪಡೆಯಬಹುದಾದ ಐಷಾರಾಮಿ ಸವಲತ್ತನ್ನಾಗಿ ಮಾಡಲಾಗುತ್ತಿದೆ. ಸಾಮಾನ್ಯರಿಗೆ ಆಗುತ್ತಿರುವ ಇಂತಹ ಶೈಕ್ಷಣಿಕ ಬಹಿಷ್ಕರಣಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವವರು ಹೆಣ್ಣು ಮಕ್ಕಳು. ಈ ಪುರುಷ ಪ್ರಧಾನ ಸಮಾಜದಲ್ಲಿ ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಖರ್ಚು ಮಾಡಲು ಇಚ್ಛಿಸುವುದಿಲ್ಲ. ಹೀಗಾಗಿ ಗಂಡು ಮಕ್ಕಳನ್ನು ಸಾವಿರಾರು ರೂಪಾಯಿ ಶುಲ್ಕ ತೆತ್ತು ಖಾಸಗಿ, ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುವ ಮತ್ತು ಹೆಣ್ಣು ಮಕ್ಕಳನ್ನು ಶುಲ್ಕರಹಿತ ಅಥವಾ ಕಡಿಮೆ ಶುಲ್ಕದ ಸರ್ಕಾರಿ ಶಾಲೆಗಳಿಗೆ ಸೇರಿಸುವ ಪರಿಪಾಠ ಹೆಚ್ಚುತ್ತಿದೆ.
ಪೋಷಕರ ದೃಷ್ಟಿಯಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಕಿಲ್ಲ. ಆದರೆ ಮದುವೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಬರಬಹುದು ಎಂಬ ಕಾರಣಕ್ಕೆ ಕೆಲ ಪೋಷಕರು ಅವರಿಗೆ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನಾದರೂ ಕೊಡಿಸುತ್ತಾರೆ. ಹಳ್ಳಿಗಳಲ್ಲಿ ಮತ್ತು ‘ಹಿಂದುಳಿದ’ ಜಾತಿಗಳಲ್ಲೂ ಅಶಿಕ್ಷಿತ ಹೆಣ್ಣು ಮಕ್ಕಳ ಮದುವೆ ಸುಲಭವಲ್ಲ. ಕೆಲ ಬಡ ಕುಟುಂಬಗಳಲ್ಲಿ ಹೆಣ್ಣು ಮಕ್ಕಳನ್ನು ದುಡಿಯಲು ಕಳುಹಿಸಿ ಅವರು ತರುವ ಹಣವನ್ನು ಗಂಡು ಮಕ್ಕಳ ಖಾಸಗಿ ಶಾಲೆಯ ಖರ್ಚಿಗೆ ಬಳಸಿಕೊಳ್ಳಲಾಗುತ್ತಿದೆ.
ಇದಕ್ಕಿಂತ ಹೆಚ್ಚಿನ ಅನ್ಯಾಯ ಇನ್ಯಾವುದಾದರೂ ಇದೆಯೇ? ಇಂತಹ ಶಿಕ್ಷಣ ಕೇವಲ ಗುಮಾಸ್ತರು, ಕಾನ್‌್ಸಟೆಬಲ್‌ಗಳು ಮತ್ತು ಗೃಹ ರಕ್ಷಕರನ್ನಷ್ಟೇ ಸೃಷ್ಟಿಸುತ್ತದೆ. ವಸಾಹತುಶಾಹಿ ಆಡಳಿತಗಾರರು ಆಡಳಿತ ನಡೆಸಲು ತಮಗೆ ಬೇಕಾದ ಗುಮಾಸ್ತರು, ಕೆಳ ದರ್ಜೆಯ ನೌಕರರನ್ನು ಸೃಷ್ಟಿಸಲು ಅಗತ್ಯವಾಗುವಂತೆ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದ್ದರು. ಅಂತಹ ವ್ಯಕ್ತಿಗಳು ಅವರ ಅಧಿಕಾರಕ್ಕೆ ಕುತ್ತು ತರುತ್ತಿರಲಿಲ್ಲ ಅಥವಾ ಅವರಿಂದ ಅಧಿಕಾರ ಕಿತ್ತುಕೊಳ್ಳಲು ಹವಣಿಸುತ್ತಿರಲಿಲ್ಲ.
ಬ್ರಿಟಿಷ್ ಆಡಳಿತಗಾರರಂತೆಯೇ ಇರುವ ನಮ್ಮ ಆಡಳಿತಗಾರರೂ ಈಗ ಅದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಶ್ರೇಷ್ಠ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ ನಡೆಸುವ ಅಥವಾ ಸರ್ಕಾರದ ಬೆಂಬಲದಲ್ಲಿ ನಡೆಯುವ ವಿಶ್ವವಿದ್ಯಾಲಯಗಳನ್ನು ಒಳಗೊಂಡ ಎರಡು ಗುಂಪುಗಳನ್ನು ಸೃಷ್ಟಿಸಲಾಗುತ್ತಿದೆ. ಅನುಕೂಲಸ್ಥರು ಐಎಎಸ್, ಐಎಫ್‌ಎಸ್, ಐಪಿಎಸ್ ಮತ್ತು ಐಆರ್‌ಎಸ್‌ಗಳಿಗೆ ಹೋದರೆ, ಬೋಧನೆ ಅಥವಾ ಸಂಶೋಧನೆ ಸಾಧ್ಯವಾಗದ ಸರ್ಕಾರಿ ವಿಶ್ವವಿದ್ಯಾಲಯಗಳ ನಮ್ಮ ಮಕ್ಕಳು ಗುಮಾಸ್ತರು, ಪೊಲೀಸ್ ಕಾನ್‌್ಸಟೆಬಲ್‌ಗಳು ಮತ್ತು ಗೃಹರಕ್ಷಕರಾಗುತ್ತಾರೆ.
ಹಾಗೆಂದ ಮಾತ್ರಕ್ಕೆ ಖಾಸಗಿ ಶಿಕ್ಷಣ ಯಾವಾಗಲೂ ಉತ್ತಮ ಗುಣಮಟ್ಟದ್ದೇ ಆಗಿರುತ್ತದೆ ಎಂದುಕೊಳ್ಳುವಂತಿಲ್ಲ. ಈ ಕ್ಷೇತ್ರದಲ್ಲೂ, ಅಧಿಕ ಶುಲ್ಕ ವಿಧಿಸಿಯೂ ಗುಣಮಟ್ಟದ ಶಿಕ್ಷಣ ನೀಡದ ವೃತ್ತಿಪರ ಮತ್ತಿತರ ಖಾಸಗಿ ಕಾಲೇಜುಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಪೋಷಕರು ಹಾಗೂ ವಿಶ್ವವಿದ್ಯಾಲಯ ನಿಯಂತ್ರಕರ ಎದುರು ಬಿಂಬಿಸಿಕೊಂಡರೂ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಾದ ಮೂಲಸೌಲಭ್ಯ ಅಥವಾ ಸಿಬ್ಬಂದಿಯನ್ನೇ ಅವು ಹೊಂದಿರುವುದಿಲ್ಲ. ಮೂಲತಃ ಹಣ ಮಾಡುವುದೇ ಅವುಗಳ ದಂಧೆಯಾಗಿರುತ್ತದೆ.
ಅದೇ ರೀತಿ, ಸಾಮಾನ್ಯ ಜನರ ಆಶೋತ್ತರಗಳನ್ನೇ ಬಂಡವಾಳ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡುವ ಭರವಸೆಯೊಂದಿಗೆ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳೂ ನಾಯಿಕೊಡೆಗಳಂತೆ ತಲೆ ಎತ್ತಿವೆ. ಇಲ್ಲಿ ಕಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಎಷ್ಟು ವಿಷಾದಕರ ಸ್ಥಿತಿಯಲ್ಲಿ ಇರುತ್ತದೆ ಎಂಬುದನ್ನು ಹಲವಾರು ವರದಿಗಳು ಮತ್ತು ಅಧ್ಯಯನಗಳು ಹೊರಗೆಡಹಿವೆ. 8ನೇ ತರಗತಿಯ ವಿದ್ಯಾರ್ಥಿಯ ಮಟ್ಟ ಸರಳವಾದ ಕೂಡುವ ಲೆಕ್ಕಕ್ಕಷ್ಟೇ ಸೀಮಿತಗೊಂಡರೆ, ಯಾವ ಭಾಷೆಯಲ್ಲೂ ಸರಿಯಾಗಿ ಒಂದು ವಾಕ್ಯವನ್ನೂ ಬರೆಯಲಾಗದ ಸ್ಥಿತಿಯಲ್ಲಿ ಪದವೀಧರರು ಇರುವ ಉದಾಹರಣೆಗಳಿವೆ.
ಉನ್ನತ ಶಿಕ್ಷಣ ವಲಯ ಅಪ್ರಾಮಾಣಿಕತೆ, ಮೋಸ ಹಾಗೂ ಭ್ರಷ್ಟಾಚಾರದ ಕೂಪವಾಗಿದೆ. ಕೋಟ್ಯಂತರ ರೂಪಾಯಿ ವ್ಯವಹಾರದ ಈ ಕ್ಷೇತ್ರ ಜನರಿಗೆ, ಅದರಲ್ಲೂ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನಂಬಿಕೆದ್ರೋಹ ಎಸಗುತ್ತಿದೆ.
ಇಲ್ಲಿ ಎಲ್ಲವೂ ಮಾರಾಟಕ್ಕೆ ಇರುತ್ತದೆ ಮತ್ತು ಹಣಕ್ಕಾಗಿ ಯಾವ ಬಗೆಯ ಹೊಂದಾಣಿಕೆಯನ್ನಾದರೂ ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಸುಲಲಿತವಾಗಿ ಉತ್ತರಗಳನ್ನು ಬರೆಯಬಹುದು, ಉನ್ನತ ಅಂಕಗಳನ್ನು ಗಳಿಸಬಹುದು, ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಪಡೆದುಕೊಳ್ಳಬಹುದು, ಶೇ 100ರಷ್ಟು ತೇರ್ಗಡೆಯ ಸಾಧನೆ ಮಾಡಬಹುದು. ಹಣದಿಂದ ಎಲ್ಲವೂ ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಹೊಸ ತಂತ್ರವಾಗಿ ಇಲ್ಲಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ, ಅತ್ಯುತ್ತಮ ಗ್ರಂಥಾಲಯ, ದೃಶ್ಯ– ಶ್ರಾವ್ಯ ಕೋಣೆ, ಪ್ರತಿ ತರಗತಿಯಲ್ಲೂ ಅತ್ಯಾಧುನಿಕ ಬೋಧನಾ ಸಲಕರಣೆಗಳು, ಹವಾನಿಯಂತ್ರಣ ವ್ಯವಸ್ಥೆ, ತಮ್ಮ ಮಕ್ಕಳ ಮೇಲೆ ನಿಗಾ ಇರಿಸಲಾಗಿದೆ ಅಥವಾ ಅವರು ಸುರಕ್ಷಿತವಾಗಿದ್ದಾರೆ ಎಂದು ಪೋಷಕರನ್ನು ನಂಬಿಸಲು ಸಿ.ಸಿ ಟಿ.ವಿ ಕ್ಯಾಮೆರಾಗಳ ಅಳವಡಿಕೆ, ಆಡಳಿತ ಮಂಡಳಿಯಲ್ಲಿ ಪ್ರತಿಷ್ಠಿತರನ್ನು ಒಳಗೊಳ್ಳುವುದು, ಯೂಟ್ಯೂಬ್ನಂತಹ ಸಾಮಾಜಿಕ ಮಾಧ್ಯಮದಲ್ಲಿ ಸಂಸ್ಥೆಯನ್ನು ಪ್ರಚುರಪಡಿಸುವುದು ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸಲಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರತಿ ಕೋರ್ಸ್‌ಗೂ ಒಂದಷ್ಟು ಲಕ್ಷ ರೂಪಾಯಿ ಶುಲ್ಕ ಇದ್ದೇ ಇರುತ್ತದೆ.
ಈ ಬಗೆಯ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಶಿಕ್ಷಕರಿಗೆ ಹೆಚ್ಚಿನ ಮಹತ್ವ ಇರದು. ಹಾಗಿದ್ದರೆ ಅವರ ಶೈಕ್ಷಣಿಕ ಗುಣಮಟ್ಟ ಅಥವಾ ಅರ್ಹತೆಯಾದರೂ ಎಂಥದ್ದು? ಇಲ್ಲೇ ಆಡಳಿತ ಮಂಡಳಿಗಳು ತಮ್ಮ ಖರ್ಚಿಗೆ ಕತ್ತರಿ ಹಾಕಿಕೊಳ್ಳುವುದು. ‘ಕಾಸಿಗೆ ತಕ್ಕ ಕಜ್ಜಾಯ’ ಎಂಬಂತೆ ಅವು ಸಾಧಾರಣ ಗುಣಮಟ್ಟದ ಶಿಕ್ಷಕರನ್ನು ನೇಮಿಸಿಕೊಂಡು ಅತ್ಯಲ್ಪ ವೇತನ ನೀಡುತ್ತವೆ.
ಪದವಿ ತರಗತಿಯ ಭಾಷಾ ಶಿಕ್ಷಕಿಗೆ ತನ್ನ ಅಡುಗೆಯವರಿಗೆ ಆಕೆ ನೀಡುವುದಕ್ಕಿಂತಲೂ ಕಡಿಮೆ ವೇತನವನ್ನು ನೀಡಲಾಗುತ್ತದೆ! ಆದರೂ ಮನೆಯಿಂದ ಹೊರಗೆ ಬರಬಹುದು ಎಂಬ ಕಾರಣಕ್ಕೆ ಆಕೆ ಆ ಕೆಲಸದಲ್ಲಿ ಮುಂದುವರಿಯುತ್ತಾಳೆ. ಇಂತಹ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಲಿಯುವ ಬಹುತೇಕ ವಿದ್ಯಾರ್ಥಿಗಳ ಕಾರು ಚಾಲಕರೇ ಈ ಉಪನ್ಯಾಸಕರಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿರುತ್ತಾರೆ! ಪ್ರತಿ ವಿದ್ಯಾರ್ಥಿಯ ಬಳಿಯೂ ಸ್ಮಾರ್ಟ್ ಫೋನ್ ಇದ್ದರೆ, ಬೆರಳೆಣಿಕೆಯ ಶಿಕ್ಷಕರಿಗಷ್ಟೇ ಅದನ್ನು ಖರೀದಿಸುವ ಸಾಮರ್ಥ್ಯ ಇರುತ್ತದೆ. ಹೀಗೆ ಹೆಚ್ಚು ದುಡಿದು ಕಡಿಮೆ ಗಳಿಸುವ ಶಿಕ್ಷಕರದು ಆಡಳಿತ ಮಂಡಳಿ ಅಥವಾ ವಿದ್ಯಾರ್ಥಿಗಳಿಂದ ಅನಾದರಕ್ಕೆ ಒಳಗಾಗುವ ಸ್ಥಿತಿ.
ನ್ಯಾಕ್‌ನಿಂದ ಉನ್ನತ ಶ್ರೇಣಿಯ 4 ಸ್ಟಾರ್‌ಗಳ ಮಾನ್ಯತೆ ಪಡೆದಿರುವ ಹೈದರಾಬಾದ್‌ನ ಖ್ಯಾತ ಕಾಲೇಜೊಂದು ಮಾಧ್ಯಮ, ಸಂವಹನ ಅಥವಾ ಪ್ರಚಲಿತ ವಿದ್ಯಮಾನಗಳ ಗಂಧಗಾಳಿಯೇ ಇಲ್ಲದ ಉಪನ್ಯಾಸಕರೊಬ್ಬರನ್ನು ಸಮೂಹ ಸಂವಹನ ಬೋಧಿಸಲು ನೇಮಿಸಿಕೊಂಡಿದೆ. ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ವಿಮೋಚನಾ ಪ್ರತಿಮೆಯನ್ನು ಅಲ್‌ಕೈದಾ ಸಂಘಟನೆ ವಿಮಾನ ಡಿಕ್ಕಿ ಹೊಡೆಸಿ ಕೆಳಗುರುಳಿಸಿತು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ!
ಇದು ಕಾಲೇಜುಗಳ ನೇಮಕಾತಿ ನೀತಿಯನ್ನಷ್ಟೇ ತಿಳಿಸುವುದಿಲ್ಲ, ಆ ವ್ಯಕ್ತಿ ಸ್ನಾತಕೋತ್ತರ ಪದವಿ ಹಂತದಲ್ಲಿ ಪಡೆದಿರುವ ಶಿಕ್ಷಣದ ಗುಣಮಟ್ಟವನ್ನೂ ಅರುಹುತ್ತದೆ. ಹಾಗಿದ್ದರೆ ಆ ಸಂಸ್ಥೆ ತನ್ನ ಏಕೈಕ ಗುರಿಯಾದ ಅತ್ಯುನ್ನತ ಶೇಕಡಾವಾರು ತೇರ್ಗಡೆ ಪ್ರಮಾಣವನ್ನು ಸಾಧಿಸಿದ್ದಾದರೂ ಹೇಗೆ? ಇಂತಹ ಉಪನ್ಯಾಸಕರು ಬೋಧಿಸಿದರೆ ವಿದ್ಯಾರ್ಥಿಗಳು ತೇರ್ಗಡೆಯಾಗುವಷ್ಟು ಅಂಕ ಗಳಿಸಬಲ್ಲರೇ?
ಇವೆಲ್ಲ ಚಿಂತಿಸಬೇಕಾದ ಸಂಗತಿಗಳೇ ಅಲ್ಲ. ಏಕೆಂದರೆ ಆಡಳಿತ ಮಂಡಳಿಯ ಬಳಿ ಇವೆಲ್ಲಕ್ಕೂ ತಕ್ಕ ಉತ್ತರ ಇದೆ. ಮೊಬೈಲ್‌ಗಳ ನೆರವಿನಿಂದ ಅವರು ಪರೀಕ್ಷೆ ಬರೆಸಬಲ್ಲರು. ಆದರೆ ಪ್ರಯೋಗಾಲಯಗಳೇ ಇಲ್ಲದೆ ವಿದ್ಯಾರ್ಥಿಗಳು ಪ್ರಯೋಗಗಳನ್ನು ಮಾಡಿರುವುದಿಲ್ಲ ಅಲ್ಲವೇ? ಅದಕ್ಕೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪರೀಕ್ಷೆ ವೇಳೆ ಹಣ ಕೊಟ್ಟು, ವಿನಮ್ರರಾದ ಪರೀಕ್ಷಕರನ್ನು ಹೊರಗಿನಿಂದ ಕರೆತರಲಾಗುತ್ತದೆ. ಇಷ್ಟಾದರೂ ಅಂತಿಮ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆಯದಿದ್ದರೆ? ಅದಕ್ಕೂ ಚಿಂತೆ ಬೇಡ. ಶಿಕ್ಷಕರು ಇರುವುದು ಏತಕ್ಕೆ? ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಅವರು ಎಲ್ಲ ಉತ್ತರಗಳನ್ನೂ ಸರಾಗವಾಗಿ ಬರೆಯುತ್ತಾರೆ. ಅಲ್ಲಿಗೆ ಕೆಲಸ ಮುಗಿಯಿತು. ಮತ್ತಿನ್ಯಾಕೆ ಚಿಂತೆ?
ಬೋಧನೆಯ ಮಟ್ಟವೇ ಇಂತಿರುವಾಗ ತಮ್ಮ ವಿಷಯಗಳಲ್ಲಿ ಏನೇನೂ ಪ್ರಭುತ್ವ ಇರದವರು, ಉದ್ಯೋಗ ನೇಮಕಕ್ಕೆ ಅನರ್ಹರು ಎಂದೆಲ್ಲ ವಿದ್ಯಾರ್ಥಿಗಳನ್ನು ಜರಿಯುವುದು ಏತಕ್ಕೆ? ತಮ್ಮ ಶಿಕ್ಷಕರ ಅಪ್ರಾಮಾಣಿಕ ಮಾರ್ಗಗಳನ್ನಷ್ಟೇ ಅನುಕರಿಸುತ್ತಿರುವ ಅವರನ್ನು, ಎಲ್ಲಕ್ಕೂ ಸುಲಭವಾದ ಅಗ್ಗದ ಮಾರ್ಗಗಳನ್ನೇ ಹುಡುಕುತ್ತಾರೆ ಎಂದು ದೂಷಿಸುವುದು ಸರಿಯೇ? ಅಪ್ರಾಮಾಣಿಕರನ್ನು ನೋಡಿಕೊಂಡೇ ಬೆಳೆಯುವ ಅವರು ಅದಕ್ಕಿಂತ ಭಿನ್ನರಾಗಿರಲು ಹೇಗೆ ಸಾಧ್ಯ? ಪ್ರಾಮಾಣಿಕತೆ ಎಂದರೇನೆಂಬುದೇ ತಿಳಿಯದಿರುವಾಗ ಅಥವಾ ನೋಡಿಯೂ ಗೊತ್ತಿಲ್ಲದಿರುವಾಗ ಅವರು ಅದನ್ನು ಅನುಸರಿಸುವುದಾದರೂ ಹೇಗೆ?
ಹೀಗೆ ಒಂದೆಡೆ ನಮ್ಮ ಶಿಕ್ಷಣ ವ್ಯವಸ್ಥೆಯು ಪೋಷಕರು, ಬೋಧಕರು, ವಿದ್ಯಾರ್ಥಿಗಳು ಎಲ್ಲರನ್ನೂ ಮೂರ್ಖರನ್ನಾಗಿ ಮಾಡುತ್ತಿದ್ದರೆ, ಇನ್ನೊಂದೆಡೆ, ಶಾಲಾ ಕಾಲೇಜು ಆಡಳಿತ ಮಂಡಳಿಗಳು ಮಾತ್ರ ನಿರಾಯಾಸವಾಗಿ ಹಣ ಬಾಚಿಕೊಳ್ಳುತ್ತಿವೆ.