ರಾಷ್ಟ್ರೀಯ

ಸೋಮನಾಥಪುರದ ಚನ್ನಕೇಶವ ದೇವಾಲಯದ ಶಿಲ್ಪ ಸೌಂದರ್ಯಕ್ಕೆ ಮಣಿದ ರಾಷ್ಟ್ರಕವಿ ಕುವೆಂಪು

Pinterest LinkedIn Tumblr

psmec31soma_0

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು…’

ಸೋಮನಾಥಪುರದ ಚನ್ನಕೇಶವ ದೇವಾಲಯದ ಶಿಲ್ಪ ಸೌಂದರ್ಯಕ್ಕೆ ಮಣಿದ ರಾಷ್ಟ್ರಕವಿ ಕುವೆಂಪು ಅವರ ಮನಸ್ಸು ಹಾಡಿದ ಅಪೂರ್ವ ಸಾಲುಗಳಿವು. ಹೊಯ್ಸಳರ ಕಾಲದ ಶಿಲ್ಪ ಸಾಧನೆಯ ಅದ್ಭುತ ಕಲಾಕುಸುರಿಯ ಮಾದರಿಗಳಲ್ಲಿ ಸೋಮನಾಥಪುರವೂ ಒಂದು. ಬೇಲೂರು, ಹಳೇಬೀಡಿನ ಶಿಲ್ಪ ಸೌಂದರ್ಯಕ್ಕೆ ಮನಸೋತವರು ಸೋಮನಾಥಪುರದ ಶಿಲ್ಪ ಕಾವ್ಯಕ್ಕೆ ಬೆರಗುಗೊಳ್ಳದೇ ಇರಲು ಸಾಧ್ಯವಿಲ್ಲ.

ಬೆಂಗಳೂರಿನಿಂದ 140 ಕಿ.ಮೀ ದೂರದಲ್ಲಿರುವ ಸೋಮನಾಥಪುರ ಇಲ್ಲಿನ ಚನ್ನಕೇಶವ ದೇವಾಲಯದ ಕಾರಣದಿಂದಲೇ ವಿಶ್ವಪ್ರಸಿದ್ಧಿಯಾದುದು. ಕಾವೇರಿ ನದಿಯ ದಂಡೆಯ ಮೇಲೆ, ಪ್ರಶಾಂತ ಪರಿಸರದಲ್ಲಿರುವ ಈ ದೇವಾಲಯಕ್ಕೆ ಕಾಲಿಟ್ಟವರು ಇಲ್ಲಿನ ಶಿಲ್ಪ ಸಿರಿಯನ್ನು ಕಂಡು ಮನಸೋಲದಿರಲು ಸಾಧ್ಯವೇ ಇಲ್ಲ. ಸೋಮನಾಥಪುರದಲ್ಲಿ ಕಲ್ಲಿನಲ್ಲೇ ಕಾವ್ಯವನ್ನು ಕಡೆದಿರುವ ಶಿಲ್ಪಿಗಳ ಚತುರತೆಗೆ ಅರಸಿಕರೂ ರಸಿಕರಾಗುತ್ತಾರೆ.

ಚನ್ನಕೇಶವ ದೇವಾಲಯ ಮೊದಲಿಗೆ ಸೆಳೆದುಕೊಳ್ಳುವುದು ತನ್ನ ಕುಸುರಿ ಕೆತ್ತನೆಯ ಕಾರಣದಿಂದ. ಇಲ್ಲಿ ಕಲ್ಲನ್ನು ಮೇಣದಂತೆ ಕಡೆದು ನಿಲ್ಲಿಸಿರುವ ಶಿಲ್ಪಿಗಳ ಕುಶಲತೆಗೆ ನಮಿಸಲೇ ಬೇಕು. ಇಲ್ಲಿನ ಕಲ್ಲು ಕಲ್ಲಿನಲ್ಲೂ ಕಾವ್ಯವಿದೆ. ಪ್ರತಿ ನೋಟಕ್ಕೂ ಶಿಲ್ಪ ಸೌಂದರ್ಯ ಮನ ತುಂಬುತ್ತದೆ. ಇಲ್ಲಿನ ಶಿಲ್ಪಕಲಾ ವೈಭವಕ್ಕೆ ಮನದಣಿಯೆ ಮಣಿಯದವರು ವಿರಳ.

ಇಲ್ಲಿರುವ ಶಾಸನಗಳು ದೇವಾಲಯ ಮತ್ತು ಕಲೆ ಹಾಗೂ ವಿದ್ಯೆಗೆ ಆಗರವಾಗಿದ್ದ ಸೋಮನಾಥಪುರದ ಬಗ್ಗೆ ಮಹತ್ವದ ಮಾಹಿತಿ ನೀಡುತ್ತವೆ. ಹೊಯ್ಸಳರ ದೊರೆ ಮುಮ್ಮಡಿ ನರಸಿಂಹನ ದಂಡನಾಯಕನಾಗಿದ್ದ ಸೋಮನಾಥ 1258ರಲ್ಲಿ ಇಲ್ಲಿ ದೇವಾಲಯ ನಿರ್ಮಿಸಿ, ಗ್ರಾಮಕ್ಕೆ ತನ್ನ ಹೆಸರನ್ನೇ ಇಟ್ಟ ಎನ್ನುತ್ತದೆ ಇತಿಹಾಸ.

ವಿಶಾಲವಾದ ಸ್ಥಳದಲ್ಲಿ ನಕ್ಷತ್ರಾಕಾರದ ಜಗಲಿಯ ಮೇಲೆ ನಿರ್ಮಿಸಿರುವ ಚನ್ನಕೇಶವ ದೇವಾಲಯ ಪೂರ್ವಾಭಿಮುಖವಾಗಿದೆ. ಜಗಲಿಯ ಹೊರ ಮೈ ಸುತ್ತ ಸಾಲಾಗಿ ಗಜಶಿಲ್ಪಗಳನ್ನು ಕೆತ್ತಲಾಗಿದೆ. ಸೋಮನಾಥಪುರದ ದೇವಾಲಯದ ಸೌಂದರ್ಯಕ್ಕೆ ಶಿಖರಪ್ರಾಯವಾಗಿರುವುದು ಇಲ್ಲಿನ ಮೂರು ಗೋಪುರಗಳು. ಹೀಗಾಗಿ ದೇವಾಲಯವನ್ನು ‘ತ್ರಿಕೂಟಾಚಲ’ ಎಂದೂ ಕರೆಯುತ್ತಾರೆ. ನಕ್ಷತ್ರಾಕಾರದ ವಿನ್ಯಾಸದ ಮೇಲೆ ರಚಿತವಾಗಿರುವ ಗೋಪುರಗಳು ದೇವಾಲಯದ ರಮ್ಯತೆಯನ್ನು ಹೆಚ್ಚಿಸಿವೆ.

ಹೊಯ್ಸಳ ವಾಸ್ತುಶಿಲ್ಪದ ದೇವಾಲಯಗಳಲ್ಲಿರುವಂತೆ ಇಲ್ಲೂ ಮುಖಮಂಟಪ, ನವರಂಗ, ಗರ್ಭಗೃಹ, ಸುಖನಾಸಿಗಳಿವೆ. ಮಧ್ಯದಲ್ಲಿ ಅಷ್ಟದಿಕ್ಪಾಲಕರು, ಅದರ ಮೇಲೆ 32 ತೊಲೆಗಳಿಂದ ಮಾಡಿದ ಕಮಾನು, ಅದರ ಮಧ್ಯದಲ್ಲಿ ತೂಗಾಡುವ ರೀತಿಯ ಕಮಲದ ಮೊಗ್ಗು ಮನಮೋಹಕ. ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳಿದ್ದು, ಉತ್ತರದಲ್ಲಿ ಜನಾರ್ದನ, ದಕ್ಷಿಣದಲ್ಲಿ ತ್ರಿಭಂಗಿಯಲ್ಲಿ ನಿಂತ ವೇಣುಗೋಪಾಲ ವಿಗ್ರಹಗಳಿವೆ. ಮಧ್ಯದ ಗರ್ಭಗೃಹದಲ್ಲಿ ಯಾವ ವಿಗ್ರಹವೂ ಇಲ್ಲ. ಹಿಂದೆ ಇಲ್ಲಿ ವಿಗ್ರಹ ಇತ್ತೆಂದು ಹೇಳಲಾಗುತ್ತದೆ. ದೇವಾಲಯದಲ್ಲಿ ಹಲವು ಭಗ್ನಗೊಂಡ ವಿಗ್ರಹಗಳನ್ನು ಕಂಡಾಗ ಮನಸ್ಸು ಮುದುಡುತ್ತದೆ.

19ನೆಯ ಶತಮಾನದಲ್ಲಿ ಆಂಗ್ಲವಿದ್ವಾಂಸರು ಈ ದೇವಾಲಯದ ಶಿಲ್ಪಕಲಾವೈಭವ ಕಂಡು ಅದರ ಮಾಹಿತಿ ಮುದ್ರಿಸಿದ ಕಾರಣ ಅಂದಿನ ಮೈಸೂರು ಅರಸರು ಈ ದೇವಾಲಯವನ್ನು ಸ್ವಲ್ಪಮಟ್ಟಿಗೆ ಅಭಿವೃದ್ಧಿಪಡಿಸಿದರು ಎಂದು ಹೇಳಲಾಗುತ್ತದೆ. 1924ರಲ್ಲಿ ಬಿದ್ದುಹೋಗಿದ್ದ ಗೋಡೆಗಳ ದುರಸ್ತಿ ಮಾಡಿ, ದೇವಾಲಯ ಶಿಥಿಲವಾಗದಂತೆ ಭದ್ರಗೊಳಿಸಲಾಗಿದೆ. ದೇವಾಲಯದ ಒಳಭಾಗದ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲೆಂದು 1953ರಲ್ಲಿ ವಿದ್ಯುದ್ದೀಪದ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನಿಂದ ಒಂದು ದಿನದಲ್ಲಿ ಸೋಮನಾಥಪುರಕ್ಕೆ ಹೋಗಿ ಬರಬಹುದು. ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಸಾಗಿ ಮದ್ದೂರಿನಿಂದ ಮಳವಳ್ಳಿಗೆ ಹೋಗಿ ಸಂತೇಮಾಳ, ಬೇವಿನಹಳ್ಳಿ ಮಾರ್ಗವಾಗಿ ಸೋಮನಾಥಪುರ ತಲುಪಬಹುದು.

ದೇವಾಲಯದ ಶಿಲ್ಪರಾಶಿ ಕಣ್ತುಂಬಿಕೊಂಡು ಉಳಿದ ಸಮಯದಲ್ಲಿ ದೇವಾಲಯದ ಹಿಂಭಾಗದಲ್ಲಿರುವ ಕಾವೇರಿ ನದಿಯ ದಂಡೆಯಲ್ಲಿ ಕಾಲ ಕಳೆಯಬಹುದು. ನದಿಯಲ್ಲಿ ಕೆಲವೊಮ್ಮೆ ನೀರಿನ ಸೆಳವು ಹೆಚ್ಚಾಗಿರುವುದರಿಂದ ಇಲ್ಲಿ ನದಿಗೆ ಇಳಿಯದಿರುವುದು ಒಳ್ಳೆಯದು. ಬೆಳಿಗ್ಗೆ ಬೇಗನೆ ಹೊರಟರೆ ಸೋಮನಾಥಪುರ ನೋಡಿಕೊಂಡು ಶ್ರೀರಂಗಪಟ್ಟಣ, ತಿರುಮಕೂಡಲು ನರಸೀಪುರಕ್ಕೂ ಹೋಗಿ ಬರಬಹುದು.

Write A Comment