ರಾಷ್ಟ್ರೀಯ

ಮೋದಿ ಗುಣಗಾನ ಮಾಡಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದತ್ತು: ರಾಜಕೀಯ ವಲಯದ ಆಕ್ಷೇಪ

Pinterest LinkedIn Tumblr

dattu

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರು ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನ ಮಾಡಿರುವುದು ರಾಜಕೀಯ ಹಾಗೂ ನ್ಯಾಯಾಂಗ ವಲಯದಲ್ಲಿ ವಿಮರ್ಶೆಗೆ ಕಾರಣವಾಗಿದೆ.

ಪತ್ರಕರ್ತರ ಜತೆ ಶುಕ್ರವಾರ ಸಿಜೆಐ ದತ್ತು ಅವರು ಮಾತನಾಡುತ್ತ, ”ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ಒಳ್ಳೆಯ ವ್ಯಕ್ತಿ, ದೂರದೃಷ್ಟಿಯುಳ್ಳ ಉತ್ತಮ ನಾಯಕ,” ಎಂದು ಬಣ್ಣಿಸಿದ್ದರು.

”ನ್ಯಾಯಾಂಗ ಮತ್ತು ಸರಕಾರದೊಂದಿಗೆ ಉತ್ತಮ ಸಂಬಂಧವಿದೆ. ನಾನು ಸಲ್ಲಿಸಿದ ಪ್ರಸ್ತಾವನೆಗಳಿಗೆ ಸರಕಾರ ಈತನಕ ಇಲ್ಲ ಎಂದು ಹೇಳಿಲ್ಲ. ನ್ಯಾಯಾಂಗಕ್ಕೆ ಸಂಬಂಧಿಸಿದ ಬೇಡಿಕೆಗಳಿಗೆ ಈ ದಿನದವರೆಗೆ ಸರಕಾರದ ಪ್ರತಿಕ್ರಿಯೆ ಉತ್ತಮವಾಗಿದೆ,” ಎಂದು ಸರಕಾರ ಮತ್ತು ನ್ಯಾಯಾಂಗದ ನಡುವಿನ ಉತ್ತಮ ಸಂಬಂಧವನ್ನು ವಿವರಿಸುತ್ತಾ ಮುಖ್ಯ ನ್ಯಾಯಮೂರ್ತಿ ದತ್ತು ಹೇಳಿದ್ದರು.

”ನ್ಯಾಯಾಂಗ ಮತ್ತು ಆಡಳಿತಾಂಗವು ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಆದರೆ ಆಡಳಿತದ ದೃಷ್ಟಿಯಿಂದ ಎರಡರ ಮಧ್ಯೆ ಸಮನ್ವಯ ಇರಬೇಕು.” ಎಂದು ದತ್ತು ಒತ್ತಿ ಹೇಳಿದ್ದರು.

ಸಿಜೆಐ ದತ್ತು ಅವರ ಹೇಳಿಕೆ ಈಗ ಹಲವರಿಂದ ವಿಮರ್ಶೆಗೆ ಒಳಪಡುತ್ತಿದೆ. ದೇಶದ ಮುಖ್ಯ ನ್ಯಾಯಮೂರ್ತಿಯಾದವರು ಹೀಗೆ ಬಹಿರಂಗವಾಗಿ ಪ್ರಧಾನಿಯ ಗುಣಗಾನ ಮಾಡಬಹುದೇ ಎಂಬ ಅಚ್ಚರಿಭರಿತ ಪ್ರಶ್ನೆ ನನ್ನದು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಪ್ರಶ್ನಿಸಿದ್ದಾರೆ.

ಇನ್ನು ಎನ್‌ಸಿಪಿ ನಾಯಕ ಮಜೀದ್ ಮೆನನ್ ಅವರೂ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ”ಒಬ್ಬ ನಿರ್ದಿಷ್ಟ ರಾಜಕಾರಣಿ ಮತ್ತು ಪಕ್ಷದ ನಾಯಕನ ಕುರಿತಾಗಿ ಮುಖ್ಯ ನ್ಯಾಯಮೂರ್ತಿಗಳು ಈ ರೀತಿ ಬಹಿರಂಗ ಹೇಳಿಕೆ ನೀಡುವುದರಿಂದ ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯಕ್ಕೆ ಕಾರಣವಾಗುತ್ತದೆ,” ಎಂದು ಮಜೀದ್ ಮೆನನ್ ಹೇಳಿದ್ದಾರೆ.
—–

ಭಗವತಿ ಪ್ರಕರಣ ನೆನಪಾಯಿತು…
ಸಿಜೆಐ ದತ್ತು ಹೇಳಿಕೆ ನನಗೆ ಮತ್ತೊಬ್ಬ ನಿವೃತ್ತ ಸಿಜೆಐ ಪಿ ಎನ್ ಭಗವತಿ ಅವರ ಪತ್ರವೊಂದನ್ನು ನೆನಪಿಸುತ್ತದೆ. ಅಂದಿನ ಪ್ರಧಾನಿ ಇಂದಿರಾಗಾಂಧಿಗೆ ಪತ್ರ ಬರೆದಿದ್ದ ನ್ಯಾ. ಭಗವತಿ , ‘ಚುನಾವಣೆಯಲ್ಲಿ ಗೆದ್ದು, ಮತ್ತೆ ಪ್ರಧಾನಿಯಾದ ನಿಮ್ಮನ್ನು ನಾನು ಅಭಿನಂದಿಸುತ್ತೇನೆ. ನಿಮ್ಮಲ್ಲಿನ ಸಂಕಲ್ಪ, ಒಳನೋಟ, ಆಡಳಿತದಲ್ಲಿನ ಉತ್ತಮ ಸಾಮರ್ಥ್ಯ, ಬಡವರು ಮತ್ತು ದುರ್ಬಲರ ನೋವಿಗೆ ಮಿಡಿಯುವ ನಿಮ್ಮ ಸ್ವಭಾವ ಇವೆಲ್ಲವೂ ನಿಮ್ಮನ್ನು ಗಟ್ಟಿಗೊಳಿಸಿವೆ. ದೇಶದ ನೌಕೆಯನ್ನು ನೀವು ಗುರಿಯೆಡೆಗೆ ನಡೆಸಲು ಸಮರ್ಥರಿದ್ದೀರಿ’ ಎಂದು ಹೇಳಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿಯಾದವರು ಬಹಿರಂಗವಾಗಿ ಈ ರೀತಿ ಮಾತನಾಡಬಹುದೇ ಎನ್ನುವ ಅಚ್ಚರಿಯ ಪ್ರಶ್ನೆ ನನ್ನದು.
* ಮಾರ್ಕಂಡೇಯ ಕಾಟ್ಜು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ
(ತಮ್ಮ ಬ್ಲಾಗ್‌ನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ)

ಸಿಜೆಐ ಅವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸುತ್ತದೆ. ಜನರ ಮನಸ್ಸಿನಲ್ಲಿ ಶಂಕೆಯನ್ನು ಹುಟ್ಟಿಸುತ್ತವೆ.
* ಮಜೀದ್ ಮೆನನ್, ಎನ್‌ಸಿಪಿ ನಾಯಕ

ನ್ಯಾಯಾಂಗ ಅಸಮಾಧಾನಗೊಂಡಿಲ್ಲ:
ನ್ಯಾಷನಲ್ ಜ್ಯುಡಿಷಿಯಲ್ ಅಪಾಯಿಂಟ್‌ಮೆಂಟ್ ಕಮಿಷನ್ (ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ-ಎನ್‌ಜೆಎಸಿ) ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ನ್ಯಾ. ದತ್ತು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಹೊಸ ವ್ಯವಸ್ಥೆಯಿಂದ ನ್ಯಾಯಾಂಗ ಅಸಮಾಧಾನಗೊಂಡಿದೆ ಎನ್ನುವ ಅಂಶವನ್ನು ನಿರಾಕರಿಸಿದರು. ”ಎನ್‌ಜೆಎಸಿಯಿಂದ ನ್ಯಾಯಾಂಗವು ಅಸಮಾಧಾನಗೊಂಡಿಲ್ಲ. ಸಂಸದರು ತಮ್ಮ ಕೆಲಸವನ್ನು ಮಾಡಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ,” ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಹುದ್ದೆ ತುಂಬುವ ಬಗ್ಗೆ ಮಾತನಾಡಿದ ಅವರು, ”ಸರಕಾರ ಸುತ್ತೋಲೆ ಹೊರಡಿಸಿದ ನಂತರ ಎನ್‌ಜೆಎಸಿ ಕಾರ್ಯನಿರ್ವಹಿಸಲಿದೆ. ಅದು ನಿಯಮಗಳನ್ನು ರೂಪಿಸಲಿದೆ. ಅಲ್ಲಿಯ ತನಕ ಕೊಲಿಜಿಯಂ ಕಾರ್ಯ ಮುಂದುವರಿಯಲಿದೆ,” ಎಂದರು.

ಶಿಶುಕೇಂದ್ರಗಳಿಗೆ ಒಲವು:
ಸುಪ್ರೀಂ ಕೋರ್ಟ್ ಅಂಗಳದಲ್ಲಿ ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರಿಗೆ ನೆರವಾಗುವಂತೆ ಶಿಶುಕೇಂದ್ರಗಳನ್ನು ತೆರೆಯಲು ನಿರ್ಧರಿಸಿರುವುದಾಗಿ ತಿಳಿಸಿದ ನ್ಯಾ. ದತ್ತು, ”ಸುಪ್ರೀಂ ಕೋರ್ಟ್‌ಗೆ ಅನೇಕ ಕಿರಿಯ ತಾಯಂದಿರು ದಿನನಿತ್ಯ ಬಂದು ಹೋಗುತ್ತಾರೆ. ಅವರ ಮಕ್ಕಳ ಬಗ್ಗೆ ನಾವು ಕಾಳಜಿ ವಹಿಸಬೇಕು,” ಎಂದರು. ಸುಪ್ರೀಂ ಕೋರ್ಟ್ ಆವರಣದಲ್ಲಿ ಅವರು ವಕೀಲರು ಮತ್ತು ಕಕ್ಷಿದಾರರಿಗಾಗಿ ಆರೋಗ್ಯ ಕೇಂದ್ರಗಳನ್ನು ಆರಂಭಿಸಲೂ ಮುಂದಾಗಿದ್ದಾರೆ.
**

ಪ್ರಧಾನಿ ಗುಣಗಾನ ಮಾಡಿದ ಸಿಜೆಐ: ಕಾಟ್ಜು ಅಚ್ಚರಿ
ಹೊಸದಿಲ್ಲಿ: ಪ್ರಧಾನಿ ಮೋದಿ ಅವರನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರು ಹೊಗಳಿರುವುದಕ್ಕೆ ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ‘ಸತ್ಯಂ ಬ್ರೂಯಾತ್’ ಎಂಬ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

”ಪ್ರಧಾನಿ ಮೋದಿ ಅವರು ಉತ್ತಮ ನಾಯಕ, ಒಬ್ಬ ಒಳ್ಳೆಯ ಮನುಷ್ಯ, ದೂರದೃಷ್ಟಿ ಉಳ್ಳ ನಾಯಕ ಎಂದು ಸಿಜೆಐ ದತ್ತು ಅವರು ಪತ್ರಕರ್ತರೊಂದಿಗಿನ ಮಾತುಕತೆ ವೇಳೆ ಹೇಳಿದ್ದಾರೆ. ಇದು ನನಗೆ ಹಿಂದಿನ ಸಿಜೆಐ ಪಿ ಎನ್ ಭಗವತಿ ಅವರು ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೊಗಳಿ ಪತ್ರ ಬರೆದಿದ್ದನ್ನು ನೆನಪಿಗೆ ತರುತ್ತಿದೆ. ತಮ್ಮ ಪತ್ರದಲ್ಲಿ ಮುಖ್ಯನ್ಯಾಯಮೂರ್ತಿ ಭಗವತಿ ಅವರು, ‘ನೀವು ದಿಗ್ವಿಜಯ ಸಾಧಿಸಿ ಮತ್ತೆ ಪ್ರಧಾನಿ ಆದದ್ದಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಉಕ್ಕಿನಂತಹ ಇಚ್ಛಾಶಕ್ತಿ, ದೃಢ ನಿಲುವು, ಅಸಾಧಾರಣ ಒಳನೋಟ ಮತ್ತು ಕ್ರಿಯಾಶೀಲ ದೂರದೃಷ್ಟಿ, ಅಮೋಘ ಆಡಳಿತ ಸಾಮರ್ಥ್ಯ ಮತ್ತು ಸುವಿಶಾಲ ಅನುಭವ, ಜನರ ಉಕ್ಕೇರುತ್ತಿರುವ ಪ್ರೀತಿ ಮತ್ತು ವಿಶ್ವಾಸ, ಎಲ್ಲಕ್ಕಿಂತ ಹೆಚ್ಚಾಗಿ, ಬಡವರು ಹಾಗೂ ದುರ್ಬಲರ ನೋವಿಗೆ ಮಿಡಿಯುವ ನಿಮ್ಮ ಹೃದಯವಂತಿಕೆಯ ಬಲದಿಂದ ಈ ದೇಶದ ಹಡಗನ್ನು ನೀವು ದಿಗಂತದ ಗುರಿಯುತ್ತ ಸುರಕ್ಷಿತವಾಗಿ ಹಾಗೂ ಯಶಸ್ವಿಯಾಗಿ ಮುನ್ನಡೆಸಬಲ್ಲಿರಿ ಎಂಬ ಖಾತ್ರಿ ನನಗಿದೆ,’ ಎಂಬುದಾಗಿ ಬರೆದಿದ್ದರು,” ಎಂದು ಕಾಟ್ಜು ಸ್ಮರಿಸಿದ್ದಾರೆ.

”ದೇಶದ ಮುಖ್ಯ ನ್ಯಾಯಮೂರ್ತಿಯೊಬ್ಬರು ಹೀಗೆ ಬಹಿರಂಗವಾಗಿ ಹೀಗೆ ಮಾತನಾಡುವುದು ಉಚಿತವೇ ಎಂದು ಅಚ್ಚರಿಯಾಗಿದೆ. ಹಿರಿಯ ನ್ಯಾಯವಾದಿ ಮತ್ತು ಸಂಸದ ಮಜೀದ್ ಮೆಮೋನ್ ಅವರು ‘ಇಂಥ ಹೇಳಿಕೆಗಳು ಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆ ಹುಟ್ಟಿಸುತ್ತವೆ,’ ಎಂಬುದಾಗಿ ಅಭಿಪ್ರಾಯಪಡುತ್ತಾರೆ,” ಎಂದೂ ಕಾಟ್ಜು ಬ್ಲಾಗ್‌ನಲ್ಲಿ ಬರೆದಿದ್ದಾರೆ.

Write A Comment