ರಾಷ್ಟ್ರೀಯ

ಜಮ್ಮು ಮತ್ತು ಕಾಶ್ಮೀರ: ರಾಷ್ಟ್ರಪತಿ ಆಡಳಿತಕ್ಕೆ ಕೇಂದ್ರ ಶಿಫಾರಸು: ಗೃಹ ಸಚಿವರಿಗೆ ರಾಜ್ಯಪಾಲರಿಂದ ವರದಿ ರವಾನೆ ಹಿನ್ನೆಲೆ

Pinterest LinkedIn Tumblr

Vohra

ಹೊಸದಿಲ್ಲಿ, ಜ.9: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಪ್ರಮುಖ ರಾಜಕೀಯ ಪಕ್ಷಗಳು ಸರಕಾರ ರಚನೆಗೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಕೇಂದ್ರ ಸರಕಾರವು ಶುಕ್ರವಾರ ಶಿಫಾರಸು ಮಾಡಿದೆ.

ರಾಜ್ಯದಲ್ಲಿ ಸರಕಾರ ರಚನೆಯ ಕುರಿತಂತೆ ರಾಜ್ಯಪಾಲ ಎನ್.ಎನ್.ವೋಹ್ರಾ ಗುರುವಾರ ರಾತ್ರಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ವರದಿಯೊಂದನ್ನು ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಕೇಂದ್ರ ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಕಳೆದ ತಿಂಗಳು ವಿಧಾನಸಭಾ ಚುನಾವಣೆ ನಡೆದಿತ್ತು. ತದನಂತರ ಚುನಾವಣಾ ಫಲಿತಾಂಶಗಳು ಹೊರಬಿದ್ದು, ಯಾವುದೇ ಪಕ್ಷಕ್ಕೂ ಬಹುಮತ ಲಭಿಸಿರಲಿಲ್ಲ. ಪಿಡಿಪಿ (28 ಸ್ಥಾನಗಳು), ಬಿಜೆಪಿ (25), ನ್ಯಾಷನಲ್ ಕಾನ್ಫರೆನ್ಸ್ (15) ಹಾಗೂ ಕಾಂಗ್ರೆಸ್‌ಗೆ (12) ಸ್ಥಾನಗಳು ದೊರಕಿದ್ದವು. 87 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಅಗತ್ಯವಿರುವ 44 ಶಾಸಕರನ್ನು ಒಗ್ಗೂಡಿಸಲು ಯಾವುದೇ ಮೈತ್ರಿಕೂಟ ಪಕ್ಷಕ್ಕೆ ಸಾಧ್ಯವಾಗಿರಲಿಲ್ಲ.

ರಾಜ್ಯದಲ್ಲಿ ಈ ಕೂಡಲೇ ಸರಕಾರ ರಚನೆ ಮಾಡುವುದು ಬಹಳ ಕಷ್ಟಕರವಾಗಿ ತೋರುತ್ತಿದೆ ಎಂದು ತಮ್ಮ ವರದಿಯಲ್ಲಿ ತಿಳಿಸಿರುವ ರಾಜ್ಯಪಾಲರು, ರಾಷ್ಟ್ರಪತಿ ಆಡಳಿತ ಜಾರಿಗೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಪಾಕಿಸ್ತಾನದೊಂದಿಗಿನ ಗಡಿಯುದ್ದಕ್ಕೂ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ಪೂರ್ಣಾವಧಿಯ ಆಡಳಿತಗಾರ ಬೇಕು ಎಂದು ತಿಳಿಸಿರುವ ಉಮರ್ ಅಬ್ದುಲ್ಲಾ, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಗುರುವಾರ ನಿರಾಕರಿಸಿದ್ದರು. ಅಲ್ಲದೆ, ಪ್ರಸಕ್ತ ವಿಧಾನಸಭೆಯ ಅವಧಿ ಜನವರಿ 19ಕ್ಕೆ ಮುಗಿಯಲಿದೆ. ಅದಕ್ಕೆ ಮೊದಲು ಹೊಸ ಸರಕಾರ ರಚನೆಯಾಗಬೇಕಾಗಿತ್ತು. ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಉಮರ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಅನಿವಾರ್ಯವೆನಿಸಿದೆ.

Write A Comment